ಜಮೀನಿನಲ್ಲಿ ಚಿರತೆ ಹೆಜ್ಜೆ ಗುರುತು ತೋರಿಸಿದ ಯುವಕ ಮಂಜುನಾಥ ಕೊಲ್ಲೂರು
ಗುರುಮಠಕಲ್: ತಾಲ್ಲೂಕಿನ ಮಿಟ್ಟತಿಪಡಂಪಲ್ಲಿ (ಎಂ.ಟಿ.ಪಲ್ಲಿ) ಗ್ರಾಮದಲ್ಲಿ ಕಳೆದ ಹತ್ತು ದಿನಗಳಿಂದ ಚಿರತೆ ಕಾಣಿಸಿಕೊಂಡಿದ್ದು, ಜನರು ಕೀಟನಾಶಕ ಸಿಂಪಡಣೆ, ಭತ್ತದ ಗದ್ದೆಗೆ ರಸಗೊಬ್ಬರ ಸಿಂಪಡಣೆ, ದನ ಮತ್ತು ಕುರಿ ಮೇಯಿಸಲು ಹೋಗಲು ಭಯಪಡುತ್ತಿದ್ದಾರೆ.
ಭಾನುವಾರ (ಸೆ.7) ರಾತ್ರಿವೇಳೆ ಜಮೀನಿನಲ್ಲಿದ್ದ ಗ್ರಾಮದ ಹಿರಿಯ ನಾಗರಿಕ ಭೀಮಶಪ್ಪ ಬುರನೋಳ ಅವರ ಜಮೀನಿನ ಹತ್ತಿರದ ರಸ್ತೆ ಬದಿಯಿಂದ ಜಿಗಿದು ಪಕ್ಕದ ಕುರುಚಲು ಕಾಡಿಗೆ ಸೇರಿಕೊಂಡಿತ್ತು.
ಅಲ್ಲಿಂದ 'ಜೀವ ಕೈಯಲ್ಲಿ ಹಿಡಿದು ರಸ್ತೆಯಲ್ಲಿ ಬಂದ ದ್ವಿಚಕ್ರವಾಹನಕ್ಕೆ ಕೈಮಾಡಿದ್ದು, ದ್ವಿಚಕ್ರದಲ್ಲಿದ್ದವರಿಗೆ ವಿಷಯ ತಿಳಿಸಿದೆ. ಅವರೇ ನನ್ನನ್ನು ಗ್ರಾಮಕ್ಕೆ ಹಿಂದಿರುಗಿಸಿದರು. ಮನೆಗೆ ತಲುಪಿದ ನಂತರ ಜೀವಬಂದಂತಾಯ್ತು' ಎಂದು ಭೀಮಶಪ್ಪ ಅವರು
ವಿವರಿಸಿದರು.
ಅದಾದ ನಂತರ ಆಗಾಗ ಹುಲಿ (ಚಿರತೆ) ಕಾಣುತ್ತಿರುವ ಕುರಿತು ಕಾಡಿಗೆ ದನ ಮೇಯಿಸಲು ಹೋದವರು ಹೇಳುತ್ತಿದ್ದರು. ಆದ್ದರಿಂದ ರಾತ್ರಿ ವೇಳೆ ಭತ್ತಕ್ಕೆ ನೀರುಣಿಸಲು ಹೋಗಲು ಭಯ. ಹೊರಗೆ ತಿರುಗುವುದಕ್ಕೂ ಎದೆ ನಡುಗುತ್ತಿತ್ತು ಎನ್ನುವವುದು ಲಕ್ಷ್ಮಿ ಕಾಶಪ್ಪ ಅವರ ಭೀತಿಯ ಮಾತುಗಳು.
ಗ್ರಾಮದ ಹೊರವಲಯದಲ್ಲಿ ಸೋಮವಾರ(ಸೆ.15) ಸಂಜೆ ದನ ಮೇಯಿಸುವ ವೇಳೆ ಯುವ ದನಗಾಹಿ ನಾಗೇಂದ್ರಪ್ಪ ಕೊಲ್ಲೂರು ಅವರು ಜಾನುವಾರುಗಳಿಂದ ದೂರದಲ್ಲಿ ನಿಂತಿದ್ದರು. ಆಗ ಕರುಗಳ ಮೇಲೆ ಚಿರತೆ ದಾಳಿ ಮಾಡಿದೆ. ಕೂಡಲೇ ಜತೆಯಲ್ಲಿದ್ದವರನ್ನು ನಾಗೇಂದ್ರಪ್ಪ ಕೂಗಿ ಕರೆದಿದ್ದು, ಗದ್ದಲದ ಕಾರಣ ಚಿರತೆ ಪಲಾಯನಗೈದಿದೆ.
ನಾಗೇಂದ್ರಪ್ಪ ಹಾಗೂ ಉಳಿದ ದನಗಾಹಿಗಳು ಚಿರತೆ ದಾಳಿ ಮಾಡಿದ ವಿಷಯ ತಿಳಿಸಿದ ನಂತರ ಗ್ರಾಮದ ಜನರಲ್ಲಿ ಚಿರತೆಯ ಭೀತಿ ಇನ್ನೂ ಹೆಚ್ಚಿದೆ. ಅರಣ್ಯ ಇಲಾಖೆಯವರು ರೈತರ ಭಯವನ್ನು ಹೋಗಲಾಡಿಸಿ, ಚಿರತೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸದಂತೆ ಕ್ರಮವಹಿಸಲಿ ಎಂದು ಕೋರಿದ್ದು ಕೃಷಿಕರಾದ ಮಂಜುನಾಥ, ಶಂಕ್ರಪ್ಪ ಮೀನಿಗಿರಿ.
ಸದ್ಯ ಎಂ.ಟಿ.ಪಲ್ಲಿ ಗ್ರಾಮದಲ್ಲಿ ಚಿರತೆ ಸಂಚರಿಸುತ್ತಿರುವ ಕುರಿತು ಭಯದ ವಾತಾವರಣ ಹೆಚ್ಚುತ್ತಿದೆ. ಅರಣ್ಯ ಇಲಾಖೆಯವರು ಕೂಡಲೇ ಚಿರತೆಯನ್ನು ಸೆರೆಹಿಡಿದು, ಬೇರೆಡೆ ಸ್ಥಳಾಂತರಿಸಲಿ ಎನ್ನುವ ಮನವಿ
ಗ್ರಾಮಸ್ಥರದು.
ಎಂ.ಟಿ.ಪಲ್ಲಿ ಗ್ರಾಮದಲ್ಲಿ ಚಿರತೆ ಭಯ
ಸೆ.15ರಂದು ಜಾನುವಾರು ಮೇಲೆ ದಾಳಿ
ಸೆರೆಹಿಡಿಯಲು ಅರಣ್ಯ ಇಲಾಖೆಗೆ ಮೊರೆ
ಚಿರತೆ ದಾಳಿ ದನಗಳ ಮೇಲೆ ದಾಳಿ ನಡೆಸಿದ್ದು, ದನಗಾಹಿಗಳೆಲ್ಲರೂ ಸದ್ದು ಮಾಡಿದ್ದರಿಂದ ಬಿಟ್ಟು ಹೋಗಿದೆ ಸಂಬಂಧಿತರು ಕ್ರಮವಹಿಸಿಬಾಲಪ್ಪ ಬುರನೋಳ,ರೈತ
ದನಗಳ ಮೇಲೆ ಚಿರತೆ ದಾಳಿ ಮಾಡಿದೆ. ಹತ್ತು ದಿನಗಳಿಂದಲೂ ಚಿರತೆ ಅಲ್ಲಲ್ಲಿ ಕಾಣಿಸಿದೆ. ಜಮೀನಿನಲ್ಲಿ ಹೆಜ್ಜೆ ಗುರುತು ಕಾಣಿಸಿದ್ದು, ಭಯವಾಗುತ್ತಿದೆಲಕ್ಷ್ಮೀ ದೇವಿಂದ್ರಪ್ಪ, ರೈತ ಮಹಿಳೆ
ಕಳೆದ ಹತ್ತು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದೆ. ರೈತರು ರಾತ್ರಿವೇಳೆ ಒಂಟಿಯಾಗಿ ಸಂಚರಿಸಬೇಡಿ. ಅರಣ್ಯ ಇಲಾಖೆ ಕೂಡಲೇ ಚಿರತೆ ಸ್ಥಳಾಂತರಕ್ಕೆ ಕ್ರಮವಹಿಸಲಿರವಿ ಬಿ,ಮಾದಿಗ ದಂಡೋರ ಸಮಿತಿ ತಾಲ್ಲೂಕು ಅಧ್ಯಕ್ಷ
ಗುರುಮಠಕಲ್ ಹತ್ತಿರದ ಎಂ.ಟಿ.ಪಲ್ಲಿ ಹೊರವಲಯದ ಜಮೀನಿನಲ್ಲಿದ್ದ ಚಿರತೆಯ ಹೆಜ್ಜೆ ಗುರುತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.