ADVERTISEMENT

ಜನೌಷಧ ಕೇಂದ್ರ ಸದುಪಯೋಗವಾಗಲಿ

ಕೋವಿಡ್‌–19 ಸೋಂಕಿನ ಭಯ ಬೇಡ: ಜಿಲ್ಲಾ ಉಸ್ತುವಾರಿ ಸಚಿವ ಚವ್ಹಾಣ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 10:14 IST
Last Updated 8 ಮಾರ್ಚ್ 2020, 10:14 IST
ಯಾದಗಿರಿಯಲ್ಲಿ ಜನೌಷಧಿ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವ್ಹಾಣ್ ಭೇಟಿ ನೀಡಿ ಪರಿಶೀಲಿಸಿದರು
ಯಾದಗಿರಿಯಲ್ಲಿ ಜನೌಷಧಿ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವ್ಹಾಣ್ ಭೇಟಿ ನೀಡಿ ಪರಿಶೀಲಿಸಿದರು   

ಯಾದಗಿರಿ: ‘ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳು ಸ್ಥಳೀಯವಾಗಿ ದೊರೆಯುಂತಾಗಲು ಸರ್ಕಾರ ಜನೌಷಧ ಕೇಂದ್ರಗಳನ್ನು ತೆರೆದಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವ್ಹಾಣ ಹೇಳಿದರು.

ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಶನಿವಾರ ಜನೌಷಧ ಕೇಂದ್ರದ 2 ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಕೋವಿಡ್‌–19 ವೈರಸ್ ಕಂಡುಬಂದಿಲ್ಲ. ಅದರಲ್ಲೂ ಜಿಲ್ಲೆಯ ಬಿಸಿಲಿನ ತಾಪ ಹೆಚ್ಚು ಇರುವುದರಿಂದ ಕೋವಿಡ್‌–19 ವೈರಸ್ ಸೋಂಕು ಹರಡುವ ಭೀತಿ ಇಲ್ಲ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬೇರೆ ದೇಶ ಹಾಗೂ ರಾಜ್ಯಗಳಿಂದ ಬರುವವರನ್ನು ಸಂಪೂರ್ಣ ಪರೀಕ್ಷಿಸಲಾಗುತ್ತಿದೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ’ ಎಂದರು.

ADVERTISEMENT

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ‘ಬಡವರ ಅನುಕೂಲಕ್ಕಾಗಿ ಪ್ರಧಾನ ಮಂತ್ರಿ ಜನೌಷಧ ಕೇಂದ್ರ ತೆರೆಯಲಾಗಿದೆ. ಇಲ್ಲಿ ಹೊರಗಡೆಗಿಂತ ಅರ್ಧ ಬೆಲೆಗೆ ಔಷಧ ಸಿಗುತ್ತದೆ’ ಎಂದು
ಹೇಳಿದರು.

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ‘ಕೋವಿಡ್‌–19 ಸೋಂಕಿನ ಬಗ್ಗೆ ಭಯಪಡುವ ಅಗತ್ಯವಿಲ್ಲ. ಇಲ್ಲಿನ ತಾಪಮಾನ ಹೆಚ್ಚಾಗಿರುವುದರಿಂದ ರೋಗ ಹರಡುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಚಿವರನ್ನು ಸ್ವಾಗತಿಸುವ ವೇಳೆ ಪ್ಲಾಸ್ಟಿಕ್‌ ಬೊಕ್ಕೆಯನ್ನು ಅಧಿಕಾರಿಗಳು ನೀಡಿದರು. ಇದರಿಂದ ಗರಂ ಆದ ಸಚಿವರು, ಇನ್ನು ಮುಂದೆ ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಸಿದರು.

ಕೋವಿಡ್‌–19 ವೈರಸ್ ಕುರಿತು ಜನಜಾಗೃತಿ ಮೂಡಿಸುವ ಭಿತ್ತಿಪತ್ರಗಳನ್ನು ಸಚಿವರು ಬಿಡುಗಡೆ ಮಾಡಿದರು.

ಸಚಿವರು ಇದಕ್ಕೂ ಮೊದಲು ಜನೌಷಧ ಕೇಂದ್ರಕ್ಕೆ ಭೇಟಿ ನೀಡಿ ರಿಜಿಸ್ಟರ್‌ಗಳನ್ನು ಪರಿಶೀಲಿಸಿದರು. ಸಂಸದ ರಾಜಾ ಅಮರೇಶ್ವರ ನಾಯಕ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಲ್ಲನಗೌಡ ಎಸ್.ಪಾಟೀಲ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾರಾಯಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.