ADVERTISEMENT

‘ಬಿಜೆಪಿ ನಮ್ಮ ಸ್ವಾಭಿಮಾನ ಕೆಣಕುತ್ತಿದೆ’

ಚಾಮನಾಳದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 16:20 IST
Last Updated 15 ಏಪ್ರಿಲ್ 2024, 16:20 IST
ಶಹಾಪುರ ತಾಲ್ಲೂಕಿನ ಚಾಮನಾಳದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿದರು. ರಾಯಚೂರು ಲೋಕಸಭಾ ಅಭ್ಯರ್ಥಿ ಜಿ.ಕುಮಾರ ನಾಯಕ ಉಪಸ್ಥಿತರಿದ್ದರು
ಶಹಾಪುರ ತಾಲ್ಲೂಕಿನ ಚಾಮನಾಳದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿದರು. ರಾಯಚೂರು ಲೋಕಸಭಾ ಅಭ್ಯರ್ಥಿ ಜಿ.ಕುಮಾರ ನಾಯಕ ಉಪಸ್ಥಿತರಿದ್ದರು    

ಶಹಾಪುರ: ‘ಬಿಜೆಪಿ ಭಾವನಾತ್ಮಕ ವಿಚಾರಗಳನ್ನು ಮುಂದೆ ಇಟ್ಟುಕೊಂಡು ನಮ್ಮ ಸ್ವಾಭಿಮಾನವನ್ನು ಕೆಣಕಿಸುವ ಕೆಲಸ ಮಾಡುತ್ತಿದೆ. ಯುವಕರು ಹಾಗೂ ಮತದಾರರು ಬಣ್ಣದ ಮಾತಿಗೆ ಮರುಳಾಗಬಾರದು. ಇದು ಮೋದಿ ವಿರುದ್ಧ ಸಿದ್ದರಾಮಯ್ಯನವರ ಗ್ಯಾರಂಟಿ ಹೋರಾಟವಾಗಿದೆ. ರಾಯಚೂರು ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನಮ್ಮ ಸ್ವಾಭಿಮಾನದ ಕಿಚ್ಚು ಹೊರಹಾಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ತಾಲ್ಲೂಕಿನ ಚಾಮನಾಳದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮತಯಾಚಿಸಿದ ಅವರು, ‘ಚುನಾಯಿತರಾದ ಬಿಜೆಪಿಯ 26 ಸಂಸದರು ರಾಜ್ಯಕ್ಕೆ ಯಾವುದೇ ಕೊಡುಗೆ ನೀಡದೆ, ಬರದ ಪರಿಸ್ಥಿತಿಯ ನಿವಾರಣೆಗೂ ಸ್ಪಂದಿಸಿಲ್ಲ, ಶಹಾಪುರ ಮತಕ್ಷೇತ್ರದಿಂದ 25,000ಕ್ಕೂ ಹೆಚ್ಚಿನ ಮತಗಳ ಲೀಡ್‌ ಕಾಂಗ್ರೆಸ್ ಅಭ್ಯರ್ಥಿಗೆ ಕೊಡುವುದರ ಮೂಲಕ ನಮಗೆ ಶಕ್ತಿ ನೀಡಬೇಕು’ ಎಂದರು.

ಲೋಕಸಭಾ ಅಭ್ಯರ್ಥಿ ಜಿ.ಕುಮಾರ ನಾಯಕ ಮಾತನಾಡಿ, ‘ನನ್ನ ಅನುಭವ ಸಾರ್ವಜನಿಕರ ಶ್ರೇಯೋಭಿವೃದ್ಧಿಗೆ ಬಳಕೆಯಾಗಬೇಕು ಎಂಬುದು ನನ್ನ ಆಶಯವಾಗಿದೆ. ಹಿಂದುಳಿದ ಪ್ರದೇಶದ ಜನತೆಯ ಕಣ್ಣೀರು ಒರೆಸುವ ಕೆಲಸವನ್ನು ಮಾಡುವೆ ಎಂಬ ಭರವಸೆ ನೀಡಿದರು.

ADVERTISEMENT

ಕಾಂಗ್ರೆಸ್ ಪಕ್ಷದ ಮುಖಂಡರಾದ ಮರಿಗೌಡ ಹುಲಕಲ್, ನೀಲಕಂಠ ಬಡಿಗೇರ, ಶರಣಪ್ಪ ಸಲಾದಪುರ, ಗೌಡಪ್ಪಗೌಡ ಆಲ್ದಾಳ, ಮಾನಸಿಂಗ ಚವ್ಹಾಣ, ಶಿವಮಹಾಂತ ಚಂದಾಪುರ, ವಿಜಯಕುಮಾರ ರಾಠೋಡ, ಮಲ್ಲಣ್ಣಗೌಡ ಉಕ್ಕಿನಾಳ, ಸಣ್ಣನಿಂಗಣ್ಣ ನಾಯ್ಕೊಡಿ, ಸಯ್ಯದ್ ಮುಸ್ತಾಫ, ಭಿಕ್ಷಣಗೌಡ, ವಿನೋದ ಪಾಟೀಲ, ಬಸನಗೌಡ ಕಾಡಂಗೇರ, ಮಲ್ಲಣ್ಣ ಗೋಗಿ, ಮಲ್ಲಣ್ಣಗೌಡ ವಂದಗನೂರು, ಮಲ್ಲಣ್ಣಗೌಡ ಚಂದಾಪುರ, ದೇವಣ್ಣಗೌಡ ಕಕ್ಕಸಗೇರಾ, ಶಿವಲಿಂಗರೆಡ್ಡಿ, ರಾಜಪಟೇಲ, ಶರಣಗೌಡ ಚಾಮನಾಳ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಕರ್ತರು ಉಪಸ್ಥಿತರಿದ್ದರು.

ರಾಯಚೂರು ಲೋಕಸಭೆ ವ್ಯಾಪ್ತಿಯಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದರ ಜೊತೆಗೆ ಯುವಕರಿಗೆ ಉದ್ಯೋಗ ಸೃಷ್ಟಿ ಮತ್ತು ಉದ್ದಿಮೆ ಆರಂಭವಾಗುವ ದಿಶೆಯಲ್ಲಿ ಪ್ರಾಮಾಣಿಯಕವಾಗಿ ಯತ್ನಿಸಿ ಕೊಟ್ಟ ಮಾತು ಉಳಿಸಿಕೊಳ್ಳುವೆ
-ಜಿ.ಕುಮಾರ ನಾಯಕ ಕಾಂಗ್ರೆಸ್ ಅಭ್ಯರ್ಥಿ
ನಾನು ಸಚಿವನಾಗಿ ಅಧಿಕಾರದಲ್ಲಿ ಮುಂದಿನ ದಿನಗಳಲ್ಲಿ ಮುಂದುವರಿಯಬೇಕೆಂಬ ಇಚ್ಛೆ ನಿಮಗಿದ್ದರೆ ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಎಂಬ ಗುರಿ ನಿಮ್ಮೆಲ್ಲರದ್ದಾಗಬೇಕು
-ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ

ವಾಲ್ಮೀಕಿ ಭವನಕ್ಕೆ ಅನುದಾನ ನೀಡಲಿಲ್ಲ

ಶಹಾಪುರ: ಶಹಾಪುರ ನಗರದಲ್ಲಿ ವಾಲ್ಮೀಕಿ ಭವನ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ ನಾಲ್ಕು ಬಾರಿ ಸಂಸದ ರಾಜಾ ಅಮರೇಶ ನಾಯಕ ಅವರಿಗೆ ವಾಲ್ಮೀಕಿ ಸಂಘದಿಂದ ಮನವಿ ಮಾಡಿದೆವು. ಜತೆಗೆ ಖುದ್ದಾಗಿ ಸಂಸದರು ಕಟ್ಟಡ ಕಾಮಗಾರಿ ಪರಿಶೀಲಿಸಿದರು. ಆದರೆ ನಯಾ ಪೈಸೆ ಅನುದಾನ ನೀಡಲಿಲ್ಲ’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ತಾಲ್ಲೂಕು ಘಟಕದ ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ ಆರೋಪಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವರು ಭವನ ನಿರ್ಮಾಣಕ್ಕೆ ₹1ಕೋಟಿ ಅನುದಾನ ಹಾಗೂ ಇನ್ನೂ ಹೆಚ್ಚುವರಿಯಾಗಿ ₹50ಲಕ್ಷ ಅನುದಾನ ನೀಡಿದ್ದಾರೆ. ನಮ್ಮ ವಾಲ್ಮೀಕಿ ಸಮಾಜದ ಗುರುಗಳು ದೂರವಾಣಿ ಮೂಲಕ ಕರೆ ಮಾಡಿ ಅಂದಿನ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರಿಗೆ ಮನವಿ ಮಾಡಿದೆವು ಅವರು ಸಹ ಅನುದಾನ ನೀಡಿಲ್ಲ’ ಎಂದು ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.