
ಗುರುಮಠಕಲ್: ‘ತಾಲ್ಲೂಕಿನಲ್ಲಿ ಸ್ವಚ್ಛತೆಯಿಲ್ಲ, ಶೌಚಾಲಯ ನಿರ್ಮಾಣ ಪ್ರಗತಿ ಕುಂಠಿತವಾಗಿದೆ. ಕಚೇರಿಗಳಲ್ಲಿ ಕನಿಷ್ಠ ಸೂಚನಾ ಮತ್ತು ಮಾಹಿತಿ ಫಲಕ ಅಳವಡಿಕೆಯೂ ಸರಿಯಿಲ್ಲ. ಶಿಸ್ತಿನಿಂದ ಕೆಲಸ ಮಾಡುವ ಬದಲಿಗೆ ತರಾತುರಿಯಲ್ಲಿ ಕೆಲಸ ಮಾಡಿದ್ದೀರಿ. ಜನರು ಈಗ ನಮ್ಮೆದುರು ನೀಡಿದ ಸಮಸ್ಯೆಗಳು ಪರಿಹರಿಸುವ ಮತ್ತು ಬಾಕಿ ಕಡತಗಳ ವಿಲೇಗೆ ವಹಿಸಿದ ಕ್ರಮಗಳ ಕುರಿತು ಲೋಕಾಯುಕ್ತ ಡಿವೈಎಸ್‌ಪಿಗೆ ಶೀಘ್ರ ವರದಿ ಸಲ್ಲಿಸಿ’ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಾಧೀಶ ರಮಾಕಾಂತ ಚವ್ಹಾಣ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಪಟ್ಟಣದ ವಿವಿಧ ಕಚೇರಿಗಳಿಗೆ ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ ಅವರು, ಅಧಿಕಾರಿಗಳ ಕಾರ್ಯವೈಖರಿಗೆ ಅಸಮಧಾನ ವ್ಯಕ್ತಪಡಿಸಿದರು.
ಲಾಲಪ್ಪ ತಲಾರಿ ಎಂಬುವವರು ಪುರಸಭೆಯ ವಾಣಿಜ್ಯ ಮಳಿಗೆಗಳ ಮರು ಟೆಂಡರ್ ನಡೆಸದ ಕುರಿತು ನೀಡಿದ ದೂರಿಗೆ ನ್ಯಾ.ರಮಾಕಾಂತ ಅವರು; ಮಳಿಗೆಗಳು ಎಷ್ಟು? ಅವುಗಳ ಟೆಂಡರ್ ಅವಧಿ, ಬಾಡಿಗೆ ಎಷ್ಟು? ಅವಧಿ ಪೂರ್ಣಗೊಂಡರೂ ಮರುಟೆಂಡರ್ ಕರೆಯದಿರಲು ಕಾರಣವೇನೆಂದು ಪುರಸಭೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿರುವ ಕಟ್ಟಡಗಳ ಹೊರತು ಉಳಿದ ಮಳಿಗೆಗಳ ಅವಧಿಯೂ ಮುಗಿದಿದ್ದು, ಅವುಗಳ ಮರುಟೆಂಡರ್‌ಗಾಗಿ ನ್ಯಾಯಾಲಯದಿಂದ ಕೆ-ವಿಟ್ ಪಡೆಯುವುದಾದರೇ ಕೂಡಲೇ ಕ್ರಮವಹಿಸಿ ವರದಿ ನೀಡಬೇಕೆಂದು ತಾಕೀತು ಮಾಡಿದರು.
ತಾ.ಪಂ ಕಚೇರಿಯಲ್ಲಿ ಖರ್ಚುವೆಚ್ಚದ ದಾಖಲೆ ನಿರ್ವಹಣೆ, ಮಾಹಿತಿ ಫಲಕಗಳು, ಸರ್ಕಾರಿ ಮತ್ತು ಗುತ್ತಿಗೆ ನೌಕರರ ಹಾಜರಾತಿ ನಿರ್ವಹಣೆ ಕುರಿತು ಅಸಮಧಾನಗೊಂಡ ನ್ಯಾಯಾಧೀಶರು ‘ಬದ್ಧತೆಯಿಂದ ಕೆಲಸ ಮಾಡಿ, ಅಗತ್ಯ ದಾಖಲೆಗಳ ನಿರ್ವಹಣೆ ಕಡ್ಡಾಯ, ಕೂಡಲೇ ಮಾಹಿತಿ ಫಲಕ ಅಳವಡಿಸಿ’ ಎಂದು ಸೂಚಿಸಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿಒಟ್ಟು 1 ಸಾವಿರ ಶೌಚಾಲಯ ನಿರ್ಮಾಣ ಬಾಕಿಯಿದೆ. ಶೇ 5 ಅಂಗವಿಕಲರ ಮೀಸಲು ನಿಧಿ ಬಳಕೆಯಾಗದ್ದು, ಪಿಡಿಒ ಜನರ ಕೈಗೆ ಸಿಗುತ್ತಿಲ್ಲ ಎನ್ನುವ ದೂರುಗಳಿದ್ದು, ಅವುಗಳ ಪರಿಹಾರಕ್ಕೆ ವಹಿಸಿದ ಕ್ರಮಗಳ ಬಗ್ಗೆ ವರದಿ ನೀಡಲು ಸೂಚಿಸಿದರು.
ತಹಶೀಲ್ದಾರ್ ಕಚೇರಿಯ ರಸ್ತೆಯೇ ಸರಿಯಿಲ್ಲ, ಜನರ ಸಮಸ್ಯೆ ಹೇಗೆ ಪರಿಹರಿಸುವಿರಿ? ಕಂದಾಯ ಸಿಬ್ಬಂದಿಗೆ ಫೋನ್‌ಪೇ ಅಥವಾ ಡಿಜಿಟಲ್ ವೇದಿಕೆಯಿಂದ ಬಂದ ಹಣದ ಮೂಲದ ಮಾಹಿತಿ ನೀಡುವಂತೆ ತಾಕೀತು ಮಾಡಿದರು.
2023-24ನೇ ಸಾಲಿನಲ್ಲಿ ಮಳೆಯಿಂದಾಗಿ 47 ಮನೆಕುಸಿತ ಫಲಾನುಭವಿಗಳಿಗೆ ಇನ್ನೂ ಪರಿಹಾರ ಒದಗಿಸದ ಕುರಿತು ಪರಿಶೀಲಿಸಿ, ವಿಲೇ ಮಾಡಿದ ಕ್ರಮವನ್ನು ಲೋಕಾಯುಕ್ತಕ್ಕೆ ವರದಿ ನೀಡಬೇಕು. ಅರ್ಹರಿಗೆ ಸಿಗಬೇಕಿರುವ ಪರಿಹಾರ, ಸೌಲಭ್ಯ ಕಲ್ಪಿಸುವಲ್ಲಿ ವಿಳಂಬ ಮಾಡಿದರೆ ಸರಿ ಇರುವುದಿಲ್ಲ ಎಂದು ಎಚ್ಚರಿಸಿದರು.
ಸಿಡಿಪಿಒ, ಅಂಗನವಾಡಿ, ಬಸ್ ನಿಲ್ದಾಣಗಳ ಕುರಿತ ದೂರುಗಳಿಗೆ ಸಂಬಂಧಿಸಿದಂತೆ ಕೂಡಲೇ ಕ್ರಮವಹಸಿ, ಬಾಕಿಯಿರುವ ಕಡತ, ಅರ್ಜಿಗಳ ವಿಲೇ ಮಾಡಿದ ಕುರಿತು ಆಯಾ ಇಲಾಖೆ ಅಧಿಕಾರಿಗಳು ಶೀಘ್ರ ವರದಿ ನೀಡಿ. ಇಲ್ಲವಾದರೆ ನೊಟೀಸ್ ನೀಡಲಾಗುವುದು ಎಂದರು.
ಲೋಕಾಯುಕ್ತ ಡಿವೈಎಸ್‌ಪಿಗಳಾದ ಜೆ.ಎಚ್.ಇನಾಮದಾರ ಮತ್ತು ಮಲ್ಲಿಕಾರ್ಜುನ ಚುಕ್ಕಿ, ಇನ್ಸ್‌ಪೆಕ್ಟರ್‌ಗಳಾದ ಉಮಾಮಹೇಶ ಮತ್ತು ಭೀಮನಗೌಡ ಬಿರಾದರ, ಸಿಬ್ಬಂದಿ ಪ್ರದೀಪ, ಮಲ್ಲಿಕಾರ್ಜುನ, ಧನರಾಜ, ಮಲ್ಲಿಕಾರ್ಜುನ ಶ್ರೀಮಧಿ, ಶರಭಣ್ಣ ತಂಡದಲ್ಲಿದ್ದರು.
ಅಹವಾಲು ದೂರು ಸ್ವೀಕಾರ
ಬುಧವಾರ ಪಟ್ಟಣಕ್ಕೆ ಭೇಟಿ ನೀಡಿದ್ದ ಲೋಕಾಯುಕ್ತ ನ್ಯಾಯಾಧೀಶ ರಮಾಕಾಂತ ಚವ್ಹಾಣ್ ಅವರು ಸಾರ್ವಜನಿಕರಿಂದ ಮೂಲಸೌಕರ್ಯ ಸೇವೆ ನೀಡುವಲ್ಲಿ ವಿಳಂಬ ಯುಜಿಡಿ ಬಸ್ ನಿಲ್ದಾಣದ ಸಮಸ್ಯೆ ಭೀಮಾ ಯೋಜನೆಯ ನೀರು ಶುದ್ಧೀಕರಣ ಘಟಕದ ಸಮಸ್ಯೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿತ ದೂರು ಮತ್ತು ಅಹವಾಲು ಸ್ವೀಕರಿಸಿದರು. ಕೂಡಲೇ ಈ ದೂರು ಮತ್ತು ಅಹವಾಲುಗಳಿಗೆ ಸಂಬಂಧಿಸಿದಂತೆ ವಹಿಸಿದ ಕ್ರಮಗಳ ಕುರಿತು ಪರಿಶೀಲಿಸಿ ಲೋಕಾಯುಕ್ತಕ್ಕೆ ಅವುಗಳ ಮಾಹಿತಿಯೊಡನೆ ವರದಿ ನೀಡಲು ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಪುರಸಭೆಯಲ್ಲಿ ಎಸಿಬಿ ಫಲಕವಿದೆ. ಕೂಡಲೇ ಲೋಕಾಯುಕ್ತದ ಫಲಕ ಅಳವಡಿಸಿ. ಎಲ್ಲಾ ಕಚೇರಿಗಳಲ್ಲಿ ಯಾದಗಿರಿ ಬೆಂಗಳೂರು ಲೋಕಾಯುಕ್ತದ ಸಂಪರ್ಕ ಸಂಖ್ಯೆಯನ್ನು ಜನರಿಗೆ ಕಾಣುವಂತೆ ಪ್ರದರ್ಶಿಸಿರಮಾಕಾಂತ ಚವ್ಹಾಣ್, ಲೋಕಾಯುಕ್ತ ನ್ಯಾಯಾಧೀಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.