ADVERTISEMENT

ಯಾದಗಿರಿ | ಗಾಂಧೀಜಿ ಚಿಂತನೆಗಳು ಸಂವಿಧಾನದಲ್ಲಿ ಅಳವಡಿಕೆ: ಜಿಲ್ಲಾಧಿಕಾರಿ ಹರ್ಷಲ್

ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ: ಹರ್ಷಲ್ ಭೋಯರ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 7:01 IST
Last Updated 3 ಅಕ್ಟೋಬರ್ 2025, 7:01 IST
ಯಾದಗಿರಿಯಲ್ಲಿ ಗುರುವಾರ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು 
ಯಾದಗಿರಿಯಲ್ಲಿ ಗುರುವಾರ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು    

ಯಾದಗಿರಿ: ‘ಮಹಾತ್ಮ ಗಾಂಧೀಜಿ ಅವರ ಸರ್ವಧರ್ಮ ಸಹಿಷ್ಣುತೆ, ಭ್ರಾತೃತ್ವ ಭಾವನೆಗಳು ಭಾರತದ ಸಂವಿಧಾನದ ಪೀಠಿಕೆಯಲ್ಲಿ ಅಳವಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳಿದರು.

ನಗರದ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 156ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

‘ಗಾಂಧೀಜಿ ಅವರು ಬ್ರಿಟಿಷರ ವಿರುದ್ಧ ಅಹಿಂಸಾ ಮಾರ್ಗದ ಮೂಲಕ ಶಾಂತಿಯುತ ಹೋರಾಟ ನಡೆಸಿದರು. ತಮ್ಮ ಜೀವನವನ್ನು ದೇಶಕ್ಕಾಗಿ ಮುಡುಪಾಗಿಟ್ಟು ಹೋರಾಡಿ ಹಲವು ಬಾರಿ ಜೈಲುವಾಸ ಸಹ ಅನುಭವಿಸಿದರು. ಬ್ರಿಟಿಷರ ವಸಾಹತು ಶಾಹಿ ವಿರುದ್ಧ ಹೋರಾಡಿ ಸ್ವಾತಂತ್ರ್ಯ ದೊರಕಿಸಿಕೊಟ್ಟರು’ ಎಂದರು.

ADVERTISEMENT

‘ದಕ್ಷಿಣ ಆಫ್ರಿಕಾದಲ್ಲಿಯೂ ಜನಾಂಗೀಯ ಭೇದಭಾವ ವಿರುದ್ಧ ಹೋರಾಡಿದ ಅವರ ಆದರ್ಶಗಳು ನೆಲ್ಸನ್ ಮಂಡೇಲಾ ಸೇರಿದಂತೆ ಹಲವು ಜಾಗತಿಕ ನಾಯಕರ, ವಿವಿಧ ಸಮುದಾಯಗಳ ಮೇಲೆ ಪ್ರಭಾವ ಬೀರಿವೆ. ಭಾರತದಲ್ಲಿ ಸತ್ಯ, ಅಹಿಂಸಾ, ಶಾಂತಿಯ ತತ್ವಗಳು ಎಲ್ಲರಿಗೆ ದಾರಿದೀಪವಾಗಿವೆ. ಅವರ ತ್ಯಾಗ, ಬಲಿದಾನ ಸದಾ ಸ್ಮರಣೀಯ. ಅಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು. 

‘ಭಾರತೀಯರಿಗೆ ಅಧಿಕಾರ ಕೊಡಿಸಬೇಕೆಂಬುದು ಅವರ ಹೋರಾಟದ ಮುಖ್ಯ ಧ್ಯೇಯವಾಗಿತ್ತು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಲು ತಮ್ಮ ಇಡೀ ಜೀವನ ಹೋರಾಟದಲ್ಲಿ ಕಳೆದರು. ಭಾರತೀಯರಲ್ಲಿ ಧರ್ಮ ಸಹಿಷ್ಣುತೆ ಹಾಗೂ ಎಲ್ಲ ಜಾತಿ, ಜನಾಂಗ ಹಾಗೂ ಧರ್ಮಗಳ ಮಧ್ಯೆ ಸಾಮರಸ್ಯ ಕಾಪಾಡಲು ಶ್ರಮಿಸಿದ್ದರು’ ಎಂದು ಹೇಳಿದರು.

ಉಪನ್ಯಾಸ ನೀಡಿದ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸುಭಾಷ್ ಚಂದ್ರ ಕೌಲಗಿ ಮಾತನಾಡಿ, ‘ಮಹಾತ್ಮ ಗಾಂಧೀಜಿ ಅಸ್ಪೃಶ್ಯತೆ ನಿವಾರಣೆ, ಧಾರ್ಮಿಕ ಸಾಮರಸ್ಯ ಕಾಪಾಡಲು ಶ್ರಮಿಸಿದರು. ಶಾಂತಿ ಮಾರ್ಗದ ಮೂಲಕ ಸ್ವಾತಂತ್ರ್ಯ ಗಳಿಸಿಕೊಟ್ಟ ವಿಶ್ವದ ಮೇರು ವ್ಯಕ್ತಿತ್ವದ ನಾಯಕರು’ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಚಂದ್ರಶೇಖರ ಗೋಗಿ ಗಾಂಧಿ ಪ್ರೀಯ ಭಜನೆ ಹಾಡಿದರು. ಸರ್ವಧರ್ಮ ಪ್ರಾರ್ಥನೆಯನ್ನು ಇಸ್ಲಾಂ ಧರ್ಮದ ಮೌಲಾನಾ ಚಾಂದ್ ಪಾಶಾ, ಕ್ರೈಸ್ತ ಧರ್ಮದ ಫಾದರ್ಶ್ರೀ ವಿವೇಕ, ಜೈನ್ ಧರ್ಮದ ಸುರೇಶ್ ಜೈನ್, ಹಿಂದೂ ಶ್ರೀ ನಾಗೇಶ ಪುರೋಹಿತ್ ನೆರವೇರಿಸಿ ಕೊಟ್ಟರು.

ಮಹಾತ್ಮ ಗಾಂಧೀಜಿ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ವಿಭಾಗ, ಪದವಿಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಇದಕ್ಕೂ ಮುನ್ನ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಅವರು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುಲೈಮಾನ್ ನದಾಫ್, ಪ್ರೊ. ಗುರು ಪ್ರಸಾದ್ ವೈದ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.