ADVERTISEMENT

ಗುತ್ತಿಗೆ-ಹೊರಗುತ್ತಿಗೆ ಕಾರ್ಮಿಕರ ಸೇವೆ ಕಾಯಂಗೊಳಿಸಿ: ಎಐಯುಟಿಯುಸಿ

ದುಡಿಯುವ ಜನರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಎಐಯುಟಿಯುಸಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 5:59 IST
Last Updated 22 ಡಿಸೆಂಬರ್ 2023, 5:59 IST
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ವತಿಯಿಂದ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ವತಿಯಿಂದ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು   

ಯಾದಗಿರಿ: ಗುತ್ತಿಗೆ-ಹೊರಗುತ್ತಿಗೆ ಕಾರ್ಮಿಕರ ಸೇವೆ ಕಾಯಂ ಮಾಡಬೇಕು. ಸ್ಕೀಮ್ ಕಾರ್ಯಕರ್ತೆಯರನ್ನು ಕಾರ್ಮಿಕರು ಎಂದು ಪರಿಗಣಿಸಿ ಇಪಿಎಫ್, ಇಎಸ್‌ಐ ಹಾಗೂ ಪಿಂಚಣಿ ಸೌಲಭ್ಯ ಒದಗಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಎಐಯುಟಿಯುಸಿ ಜಿಲ್ಲಾಧ್ಯಕ್ಷ ಡಿ.ಉಮಾದೇವಿ ಮಾತನಾಡಿ, ರಾಷ್ಟ್ರೀಯ ಮಾಸಿಕ ವೇತನ ₹ 28 ಸಾವಿರ ನಿಗದಿ ಮಾಡಬೇಕು. ದಿನದ 8 ಗಂಟೆ ಕೆಲಸದ ಅವಧಿ 12 ಗಂಟೆಗೆ ಹೆಚ್ಚಿಸಿರುವುದನ್ನು ಕೈಬಿಡಬೇಕು. ಕಾರ್ಮಿಕ ವಿರೋಧಿ 4 ಲೇಬರ್ ಕೋಡ್‌ಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಒಳ್ಳೆಯ ದಿನಗಳನ್ನು ಕೊಡುವುದಾಗಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರವು ಹಿಂದಿನ ಸರ್ಕಾರಗಳು ಅನುಸರಿಸಿದ ನೀತಿಗಳನ್ನೇ ಬಹಳ ವೇಗವಾಗಿ ಜಾರಿಗೊಳಿಸುತ್ತಾ, ಅದರಲ್ಲೂ ದುಡಿಯುವವರ ಜೀವನವನ್ನು ಇನ್ನಷ್ಟು ಸಂಕಟಕ್ಕೆ ತಳ್ಳಿರುವುದು ಅತ್ಯಂತ ನೋವಿನ ವಿಚಾರ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ದುಡಿಯುವವರು ತೀವ್ರವಾದ ಭಾದೆಗೆ ತುತ್ತಾಗಿದ್ದಾರೆ ಎಂದು ಹೇಳಿದರು.

ADVERTISEMENT

ಕಾಯಂ ಉದ್ಯೋಗಗಳು ತೀವ್ರವಾಗಿ ಕಡಿತವಾಗುತ್ತಿವೆ. ಹೊರ ಗುತ್ತಿಗೆ, ವಿವಿಧ ರೀತಿಯ ಗುತ್ತಿಗೆ ಕೆಲಸಗಳು, ನಿಗದಿತ ಅವಧಿಗೆ ಮಾತ್ರ ಉದ್ಯೋಗ, ಗೀಗ್ ಕೆಲಸ ಇತ್ಯಾದಿಗಳು ಈಗ ಸರ್ವೇಸಾಮಾನ್ಯ ಎಂಬಂತಾಗಿದೆ. ಸಾರ್ವಜನಿಕ ಉದ್ಯಮಗಳನ್ನು ಜನಹಿತಕ್ಕೆ ವಿರುದ್ಧವಾಗಿ ಖಾಸಗೀಕರಿಸಲಾಗುತ್ತಿದೆ ಎಂದು ಆರೋಪಿಸಿದರು.

ರಕ್ಷಣಾ ಉಪಕರಣಗಳನ್ನು ತಯಾರಿಸುವ 41 ಸಶಸ್ತ್ರ ಕಾರ್ಖಾನೆಗಳನ್ನು ಖಾಸಗೀಕರಣ ಪೂರ್ವದ ಪ್ರಕ್ರಿಯೆಯಾಗಿ 7 ನಿಗಮಗಳಾಗಿ ಪರಿವರ್ತಿಸಿದೆ. ಇದು ಗಂಭೀರ ಸ್ವರೂಪದ ದೇಶ ವಿರೋಧಿ ನಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್., ಐಎಲ್‌ಒ 144 ನೇ ಸಮಾವೇಶದ ಪ್ರಕಾರ ಸರ್ಕಾರವು, ಕನಿಷ್ಠ ವರ್ಷಕ್ಕೆ ಒಂದು ಬಾರಿಯಾದರೂ ತ್ರಿಪಕ್ಷೀಯ (ಸರ್ಕಾರ-ಮಾಲೀಕ-ಕಾರ್ಮಿಕ) ಸಭೆಯನ್ನು ನಡೆಸಬೇಕಾಗಿತ್ತು. ಹಲವಾರು ಬಾರಿ ನೆನಪಿಸಿದರೂ ಈ ಸರ್ಕಾರ ಇಂಥ ಸಭೆಗಳನ್ನು 2015 ರಿಂದಲೂ ನಡೆಸಿಲ್ಲ ಎಂದು ದೂರಿದರು.

ಗ್ರಾಮೀಣ ಭಾಗದ ಕೃಷಿ ಕಾರ್ಮಿಕರು, ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರು ಇತ್ಯಾದಿ ಅಸಂಘಟಿತ ಕಾರ್ಮಿಕರ ಪರಿಸ್ಥಿತಿ ಶೋಚನೀಯವಾಗಿದೆ. ವರ್ಷ ಪೂರ್ತಿ ಕೆಲಸವಿಲ್ಲದೆ, ಅತಂತ್ರ ಬದುಕು ಸಾಗಿಸುತ್ತಿದ್ದಾರೆ. ಲಕ್ಷಾಂತರ ಮಹಿಳೆಯರೇ ಇರುವ ವಿವಿಧ ಯೋಜನೆಗಳಲ್ಲಿ ತೊಡಗಿರುವ ಸ್ಕೀಮ್ ಕಾರ್ಯಕರ್ತೆಯರನ್ನು ಎಲ್ಲಾ ಸರ್ಕಾರಗಳು ನಿರ್ಲಕ್ಷ ಮಾಡುತ್ತಿವೆ ಎಂದು ಹೇಳಿದರು.

ಬೇಡಿಕೆಗಳ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪ ಜಿ ತೆಳಿಗೇರಿಕರ್, ಶ್ರೀಕಾಂತ್, ಲಕ್ಷ್ಮಣ, ನರಸಪ್ಪ ಸಿದ್ದು, ಕುಶ, ಮಾಪಣ್ಣ, ಭಾಗಪ್ಪ, ಪುಷ್ಪಲತಾ, ಶಾಂತಮ್ಮ, ದಾನಮ್ಮ, ತಾಯಮ್ಮ, ಮಲ್ಲಮ್ಮ, ಜಯಶ್ರೀ, ಯಂಕಮ್ಮ, ಶ್ರೀದೇವಿ, ಲಾವಣ್ಯ, ಲಕ್ಷ್ಮೀ ಕಟ್ಟಿಮನಿ, ಆಶಮ್ಮ, ಮೋನಮ್ಮ ಸೇರಿ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.