
ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಗ್ರಾಮೀಣ ಭಾಗದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಛಾಯಾ ಭಗವತಿ ದೇವಸ್ಥಾನದ ತಟದಲ್ಲಿರುವ ಕೃಷ್ಣಾ ನದಿಯಲ್ಲಿ ಭಕ್ತರು ಮಿಂದು ಬಳಿಕ ಛಾಯಾ ಭಗವತಿ ದೇವರಿಗೆ ಪೂಜೆ ಸಲ್ಲಿಸಿದರು. ಆ ಬಳಿಕ ಕೃಷ್ಣಾ ನದಿಯ ಗಜಗಾತ್ರದ ಕಲ್ಲು ಬಂಡೆಗಳ ಮೇಲೆ ಹಾಗೂ ಅದರ ತಳಭಾಗದ ನೆರಳಿನಲ್ಲಿ ಕುಳಿತು ಮನೆಯಿಂದ ತಂದ ತರಹೇವಾರಿ ಭೋಜನ ಸವಿದರು.
‘ಇನ್ನೂ ಕೆಲವರು ಕೃಷ್ಣಾ ನದಿಗೆ ಹೊಂದಿಕೊಂಡಿರುವ ನಿಸರ್ಗರಮಣೀಯ ಅಮರಲಿಂಗೇಶ್ವರಕ್ಕೆ ತೆರಳಿ ಅಲ್ಲಿ ಮಕರ ಸಂಕ್ರಮಣದ ಪುಣ್ಯ ಸ್ನಾನ ಮಾಡಿ ಪೂಜೆ ಸಲ್ಲಿಸಿದರು’ ಎಂದು ಅಮರೇಶ ಸೂಗೂರು, ಸದ್ದಾಂ ಟೊಣ್ಣುರ, ಶ್ರೀಧರ ಹಿರೇಮಠ ಹೇಳಿದರು.
ಹುಣಸಗಿ ಪಟ್ಟಣದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಕೆಲವರು ತಮ್ಮ ಮನೆಗಳಲ್ಲಿಯೇ ಕುಟುಂಬದೊಂದಿಗೆ ಹಬ್ಬ ಆಚರಿಸಿ ಸಂಭ್ರಮಿಸಿದರು.
ಸಂಕ್ರಮಣದ ಶುಭ ಗಳಿಗೆಯಲ್ಲಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಸೂರ್ಯದೇವರಿಗೆ ಅರ್ಘ್ಯ ನೀಡುವದರಿಂದ ಸಕಲ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆಯಿಂದ ಜನರು ಕೃಷ್ಣೆಯಲ್ಲಿ ಮಿಂದು ಅರ್ಘ್ಯ ಅರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.