
ಸುರಪುರ: ‘ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ರೈತ ಕುಲದ ಮೇಲೆ ನಿರಂತರವಾಗಿ ಅನ್ಯಾಯ ಮುಂದುವರಿದಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ರಾಜ್ಯ ಸಮಿತಿ ಅಧ್ಯಕ್ಷ ವಾಸುದೇವ ಮೇಟಿ ಹೇಳಿದರು.
ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಶ್ರೀಗಿರಿ ಮಠದ ಆವರಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಮಲ್ಲಣ್ಣ ಸಾಹುಕಾರ ಜಾಲಿಬೆಂಚಿ ಅವರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಏಳು ನದಿಗಳು ತುಂಬಿ ಹರಿದು, ಜಲಾಶಯಗಳು ಭರ್ತಿಯಾಗಿ ಆಂಧ್ರ ಸೇರುತ್ತಿವೆ. ಕ್ರೆಸ್ಟ್‌ಗೇಟ್‍ಗಳು ಕಿತ್ತು ಹೋಗಿವೆ. ಆಲಮಟ್ಟಿ ಜಲಾಶಯ ಎತ್ತರಿಸಲು ರಾಜ್ಯ ಸರ್ಕಾರ ಅನುದಾನ ನೀಡಲು ಸಿದ್ಧವಿಲ್ಲ. ಆಲಮಟ್ಟಿ ಜಲಾಶಯ ಎತ್ತರಿಸಿದರೆ 40 ಲಕ್ಷ ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ’ ಎಂದರು.
ಜಿಲ್ಲಾ ಸಮಿತಿ ಅಧ್ಯಕ್ಷ ಮಲ್ಲಣ್ಣಗೌಡ ಹಗರಟಗಿ ಮಾತನಾಡಿ, ‘ಸಂಘದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ 31 ಜಿಲ್ಲೆಗಳಲ್ಲಿ ಸಂಘದ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆದಿದೆ. ತಾಲ್ಲೂಕು, ಹೋಬಳಿ ಶಾಖೆಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಗುವುದು. ರೈತರಿಗೆ ಸದಾ ಬೆನ್ನೆಲುಬವಾಗಿ ಸಂಘ ನಿಲ್ಲಲಿದೆ’ ಎಂದು ಹೇಳಿದರು.
ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪುರ ಮಾತನಾಡಿ, ‘ರೈತರು ದೇಶದ ಬೆನ್ನೆಲುಬು. ರೈತರ ಹೆಸರ ಮೇಲೆ ಸರ್ಕಾರಗಳು ಬರುತ್ತವೆ. ಆದರೆ ಅವರ ಗೋಳು ಕೇಳುವುದಿಲ್ಲ’ ಎಂದರು.
ಕಲಬುರಗಿ ಜಿಲ್ಲಾಧ್ಯಕ್ಷ ಪ್ರಶಾಂತಗೌಡ ಪಾಟೀಲ ಮಾತನಾಡಿದರು. ಮಠದ ಪೀಠಾಧಿಪತಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಸಂದೇಶ ನೀಡಿದರು. ರೈತ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಮಲ್ಲಣ್ಣ ಸಾಹುಕಾರ ಜಾಲಿಬೆಂಚಿ ಅಧಿಕಾರ ಸ್ವೀಕರಿಸಿದರು.
ಅಮರಯ್ಯಸ್ವಾಮಿ ಜಾಲಿಬೆಂಚಿ, ಗುರುನಾಥರೆಡ್ಡಿ ಹದನೂರ, ಮುತ್ತುಗೌಡ ಪರಸನಹಳ್ಳಿ, ಶಿವಶರಣಪ್ಪ ಸಾಹುಕಾರ, ದೇವಿಂದ್ರಪ್ಪ ಕೊಲಕರ, ನಾಗರೆಡ್ಡಿ, ಮಲ್ಲನಗೌಡ ಗುಂಡಲಗೇರಿ, ಶಿವಶಂಕರ ನಗನೂರ, ರಮೇಶ ಸಾಹು ಬೋನಾಳ, ಸಂಗಣ್ಣ ಬಾಗೇವಾಡಿ, ವೆಂಕಟೇಶ, ಅಯ್ಯಪ್ಪ, ಮಲ್ಲು ಬಡಿಗೇರ, ವೀರೇಶ, ನಾಗಪ್ಪ ಬಳಿ, ಅಪ್ಪುಗೌಡ ಇದ್ದರು. ಮಲ್ಲು ಬಾದ್ಯಾಪುರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.