ADVERTISEMENT

ಸಿಡಿಲು ಬಡಿದು ಸಾವು: ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 24 ಮೇ 2022, 4:42 IST
Last Updated 24 ಮೇ 2022, 4:42 IST
ಸುರಪುರ ತಾಲ್ಲೂಕಿನ ವಾಗಣಗೇರಿಯಲ್ಲಿ ಶಾಸಕ ರಾಜೂಗೌಡ ಅವರು ಈಚೆಗೆ ಸಿಡಿಲು ಬಡಿದು ಮೃತಪಟ್ಟ ನಿಂಗಪ್ಪ ಕುಟುಂಬಕ್ಕೆ ಸರ್ಕಾರದ ಪರಿಹಾರದ ಚೆಕ್ ಮತ್ತು ವೈಯಕ್ತಿವಾಗಿ ₹50 ಸಾವಿರ ನೆರವು ನೀಡಿದರು
ಸುರಪುರ ತಾಲ್ಲೂಕಿನ ವಾಗಣಗೇರಿಯಲ್ಲಿ ಶಾಸಕ ರಾಜೂಗೌಡ ಅವರು ಈಚೆಗೆ ಸಿಡಿಲು ಬಡಿದು ಮೃತಪಟ್ಟ ನಿಂಗಪ್ಪ ಕುಟುಂಬಕ್ಕೆ ಸರ್ಕಾರದ ಪರಿಹಾರದ ಚೆಕ್ ಮತ್ತು ವೈಯಕ್ತಿವಾಗಿ ₹50 ಸಾವಿರ ನೆರವು ನೀಡಿದರು   

ಸುರಪುರ: ಈಚೆಗೆ ಸಿಡಿಲು ಬಡಿದು ಮೃತಪಟ್ಟ ತಾಲ್ಲೂಕಿನ ವಾಗಣಗೇರಿ ಗ್ರಾಮದ ನಿಂಗಪ್ಪ ಹಿರೇಕುರುಬರ ಮನೆಗೆ ಶಾಸಕ ರಾಜೂಗೌಡ ಸೋಮವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ₹4 ಲಕ್ಷದ ಚೆಕ್, ರಾಷ್ಟ್ರೀಯ ಭದ್ರತಾ ಕುಟುಂಬ ಯೋಜನೆಯಿಂದ ₹20 ಸಾವಿರ ಮತ್ತು ಮೃತ ನಿಂಗಪ್ಪ ಪತ್ನಿಗೆ ವಿಧವಾ ವೇತನ ಮಂಜೂರಿ ಆದೇಶ ಪತ್ರ ನೀಡಿದರು. ವೈಯಕ್ತಿಕವಾಗಿ ₹50 ಸಾವಿರ ಆರ್ಥಿಕ ನೆರವು ನೀಡಿದರು.

ಬಳಿಕ ಶಾಸಕ ರಾಜೂಗೌಡ ಮಾತನಾಡಿ,‘ನಿಮ್ಮ ಸಹಾಯಕ್ಕೆ ಸರ್ಕಾರವಿದೆ. ನಿಮ್ಮ ಸಮಸ್ಯೆ ಆಲಿಸಲು ನಾನಿದ್ದೇನೆ. ಸೌಲಭ್ಯ ಪಡೆದುಕೊಳ್ಳಲು ನೀವು ತೊಂದರೆ ಪಡಬಾರದು ಎಂಬ ಉದ್ದೇಶದಿಂದ ಮನೆಬಾಗಿಲಿಗೆ ಬಂದಿದ್ದೇವೆ. ಸಮಸ್ಯೆ ಇದ್ದಲ್ಲಿ ನೇರವಾಗಿ ತಮ್ಮನ್ನು ಭೇಟಿ ಮಾಡಿ’ ಎಂದು ಆತ್ಮಸ್ಥೈರ್ಯ ತುಂಬಿದರು.

ADVERTISEMENT

ಇದೇ ಘಟನೆಯಲ್ಲಿ ಬದುಕುಳಿದ ಚೆನ್ನಬಸವ ಕೆಂಗುರಿ ಮತ್ತು ಹಣಮಂತ್ರಾಯ ಅವರ ಮನೆಗೂ ರಾಜೂಗೌಡ ಭೇಟಿ ನೀಡಿದರು.

‘ಭಯದಿಂದ ಹೊರಬನ್ನಿ. ಏನೂ ಆಗಲ್ಲ’ ಎಂದು ಧೈರ್ಯ ತುಂಬಿದರು. ಆಸ್ಪತ್ರೆಯ ಖರ್ಚು ವೆಚ್ಚವನ್ನು ಸರ್ಕಾರದಿಂದ ಕೊಡಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ತೀವ್ರವಾಗಿ ಗಾಯಗೊಂಡಿರುವ ಚನ್ನಬಸವ ಕೆಂಗುರಿಗೆ ವೈಯಕ್ತಿಕವಾಗಿ ₹25 ಸಾವಿರ ಆರ್ಥಿಕ ನೆರವು ನೀಡಿದರು.

ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಕಂದಾಯ ನಿರೀಕ್ಷಕ ಗುರುಬಸಪ್ಪ ಪಾಟೀಲ, ಗ್ರಾಮಲೆಕ್ಕಿಗ ನಟರಾಜ, ಮುಖಂಡರಾದ ಡಾ.ಬಿ.ಎಂ.ಹಳ್ಳಿಕೋಟಿ, ಶಿವರಾಜ ಪಡಕೋಟಿ, ಜಡೆಪ್ಪಗೌಡ, ಪರಮಣ್ಣ ಕಮತಗಿ, ಪ್ರಭುಗೌಡ ಪೋ.ಪಾಟೀಲ, ನಿಂಗಪ್ಪ ಕೆಂಗೂರಿ, ನಿಂಗಪ್ಪ ಜಾಲಹಳ್ಳಿ, ಹಣಮಂತ್ರಾಯ ದೊರೆ ಹಾಗೂ ಪಿಡ್ಡಪ್ಪ ಪೈಲವಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.