ADVERTISEMENT

ಶಹಾಪುರ: ಪೊಲೀಸರ ಜತೆ ಗತ್ತು ಪ್ರದರ್ಶಿಸಿದ ಮಣಿಕಂಠ ರಾಠೋಡ

ಶಹಾಪುರ ₹ 2.6 ಕೋಟಿ ಮೌಲ್ಯದ ಅಕ್ಕಿ ನಾಪತ್ತೆ ಪ್ರಕರಣ

ಟಿ.ನಾಗೇಂದ್ರ
Published 19 ಜುಲೈ 2024, 5:22 IST
Last Updated 19 ಜುಲೈ 2024, 5:22 IST
17ಎಸ್ಎಚ್ಪಿ 1: ಶಹಾಪುರ ಠಾಣೆಯ ಪಿ.ಐ ಎಸ್.ಎಂ. ಪಾಟೀಲ ಅವರು ಮಂಗಳವಾರ ಮಣಿಕಂಠ ರಾಠೋಡ ಬಂಧಿಸಲು ಕಲಬುರಗಿ ಮನೆಗೆ ತೆರಳಿದಾಗ ಪೊಲೀಸ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು
17ಎಸ್ಎಚ್ಪಿ 1: ಶಹಾಪುರ ಠಾಣೆಯ ಪಿ.ಐ ಎಸ್.ಎಂ. ಪಾಟೀಲ ಅವರು ಮಂಗಳವಾರ ಮಣಿಕಂಠ ರಾಠೋಡ ಬಂಧಿಸಲು ಕಲಬುರಗಿ ಮನೆಗೆ ತೆರಳಿದಾಗ ಪೊಲೀಸ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು   

ಶಹಾಪುರ: ಇಲ್ಲಿನ ಟಿಎಪಿಸಿಎಂಎಸ್‌ನ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಮಂಗಳವಾರ ಚಿತ್ತಾಪುರ ತಾಲ್ಲೂಕಿನ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ಬಂಧಿಸಲು ಶಹಾಪುರ ಠಾಣೆಯ ಪೊಲೀಸರು ಕಲಬುರಗಿ ಅಪಾರ್ಟ್‌ಮೆಂಟ್ ಬಳಿ ತೆರಳಿದಾಗ ಪೊಲೀಸರ ಮುಂದೆ ಮಣಿಕಂಠ  ಗತ್ತುಗಾರಿಕೆ ಪ್ರದರ್ಶಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬಂಧಿಸುವ ಸಲುವಾಗಿ ಮನೆಯ ಒಳಗೆ ಹೋದ ಪೊಲೀಸರು ವಿಚಾರಣೆಗೆ ಬರುವಂತೆ ಕೇಳಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಮಣಿಕಂಠ, ನೋಟಿಸ್‌ ನೀಡದೆ ವಿಚಾರಣೆ ಕರೆದುಕೊಂಡು ಹೋಗುತ್ತೇವೆ ಎನ್ನುವುದು ತಪ್ಪು. ಅದನ್ನು ನಾನು ಒಪ್ಪುವುದಿಲ್ಲ. ಜಬರದಸ್ತಿಯಿಂದ ತೆಗೆದುಕೊಂಡು ಹೋಗುತ್ತೇನೆ, ಕಾನೂನು ಕೈಗೆತ್ತಿಕೊಳ್ಳುತ್ತೇವೆ ಎಂದರೆ ನಿಮ್ಮಿಷ್ಟ ಎಂದಿದ್ದಾನೆ. ಆಗ ಪಿ.ಐ ಎಸ್.ಎಂ. ಪಾಟೀಲ ಅವರು ಈಗಾಗಲೇ ನಿಮ್ಮ ತಂದೆಗೆ ನೋಟಿಸ್‌ ಜಾರಿ ಮಾಡಿದ್ದೇವೆ ಎಂದಾಗ, ನಾವು ಮೂವರು ಅಣ್ಣ ತಮ್ಮಂದಿರು ಬೇರೆ ಬೇರೆ ಆಗಿದ್ದೇವೆ. ಅವರಿಗೆ ನೋಟಿಸ್‌ ನೀಡಿದರೆ ಹೇಗೆ? ಕಾನೂನು ಪ್ರಕಾರ ಬಂಧಿಸಿ ಎಂದು ರಗಳೆ ಶುರು ಮಾಡಿದರು. ಕೊನೆಗೆ ಪೊಲೀಸರು ಒತ್ತಡದಿಂದ ವಿಚಾರಣೆಗೆ ಶಹಾಪುರ ಠಾಣೆಗೆ ಕರೆ ತಂದರು.

ಆದರೆ ಐದಾರು ಪೊಲೀಸ್‌ ಅಧಿಕಾರಿಗಳು ನಿಂತು ಮಾತಾಡುತ್ತಿದ್ದರೆ, ಮಣಿಕಂಠ ರಾಠೋಡ ಆರಾಮವಾಗಿ ನೀರು ಕುಡಿಯುತ್ತಲೆ ಪೊಲೀಸರ ಜತೆ ವಾದ ಮಾಡುತ್ತಿರುವುದು ವಿಡಿಯೋದಲ್ಲಿದೆ.

ADVERTISEMENT

ಇಲ್ಲಿನ ಟಿಎಪಿಸಿಎಂಎಸ್‌ನ ₹ 2.6 ಕೋಟಿ ಮೌಲ್ಯದ 6,077 ಕ್ವಿಂಟಲ್ ಪಡಿತರ ಅಕ್ಕಿ ನಾಪತ್ತೆ ಪ್ರಕರಣ ಬೆಳಕಿಗೆ ಬಂದಾಗ ಬಿಜೆಪಿಯ  ರಾಜ್ಯ ಘಟಕದ ಕಾರ್ಯದರ್ಶಿ ಎನ್.ರವಿಕುಮಾರ ನೇತೃತ್ವದಲ್ಲಿ ಶಹಾಪುರದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಪ್ರಕರಣದಲ್ಲಿ ಮಣಿಕಂಠ ರಾಠೋಡ ಹೆಸರು ತಳಕು ಹಾಕಿಕೊಂಡ ಬಳಿಕ ಬಿಜೆಪಿ ಮುಖಂಡರು ತೀವ್ರ ಮುಜುಗರಕ್ಕೆ ಒಳಪಡಬೇಕಾಯಿತು.

ಪೊಲೀಸರು ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಮಣಿಕಂಠ ಅವರು ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ ಸುರಪುರ ಡಿವೈಎಸ್ಪಿ ಜಾವೇದ ಇನಾಂದಾರ ಅವರು ಎಪಿಪಿ ಅವರ ಮೂಲಕ ಜ.323ರಂದು ಮಣಿಕಂಠ ರಾಠೋಡ ಅವರು ತಲೆ ಮರೆಸಿಕೊಂಡು ದೆಹಲಿಯಲ್ಲಿ ಇದ್ದು, ಹೊರ ರಾಜ್ಯವಾಗಿದ್ದರಿಂದ ಅಲ್ಲಿನ ಪೊಲೀಸರು ಬಂಧನದ ವಾರೆಂಟ್ ಕೇಳುತ್ತಿವುದರಿಂದ ತನಿಖಾಧಿಕಾರಿಗೆ ಬಂಧನದ ವಾರೆಂಟ್ ನೀಡುವಂತೆ ಶಹಾಪುರ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾಗ ನ್ಯಾಯಾಧೀಶರಾದ ಶೋಭಾ ಅವರು ಬಂಧನ ವಾರೆಂಟ್ ನಿರಾಕರಿಸಿ ಅರ್ಜಿ ವಜಾಗೊಳಿಸಿದ್ದರು. ಆಗ ಪೊಲೀಸರು ಮುಖ ಭಂಗ ಅನುಭವಿಸಬೇಕಾಯಿತು ಎಂದು ಪೊಲೀಸ್‌ ಅಧಿಕಾರಿ ಒಬ್ಬರು ತಿಳಿಸಿದರು.

ಕಳೆದ ವರ್ಷ ನವಂಬರ್‌ 26ರಂದು ಅಕ್ಕಿನಾಪತ್ತೆ ಪ್ರಕರಣದ ಬಗ್ಗೆ ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದರಿ ಪ್ರಕರಣದಲ್ಲಿ ಹಲವರನ್ನು ಬಂಧಿಸಿದ್ದು, ಅದರಲ್ಲಿ ಕೆಲವರು ನಿರೀಕ್ಷಣಾ ಜಾಮೀನು ಪಡೆದುಕೊಂಡು ಹೊರ ಬಂದಿದ್ದಾರೆ. ಈಗ ಪ್ರಕರಣ ತಾರ್ತಿಕ ಅಂತ್ಯಗೊಂಡಿದ್ದು, ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸುವುದು ಬಾಕಿ ಇದೆ.

ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಶಾಮೀಲಾಗಿರುವ ಮಣಿಕಂಠ ರಾಠೋಡ ಅವರನ್ನು ಮಂಗಳವಾರ ಬಂಧಿಸಿದ್ದೇವು. ವಿಚಾರಣೆ ಪೂರ್ಣಗೊಳಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಸುರಪುರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಇನ್ನೂ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ.

-ಎಸ್.ಎಂ.ಪಾಟೀಲ ಪಿ.ಐ ಶಹಾಪುರ ಠಾಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.