ADVERTISEMENT

ಶಹಾಪುರ: 300 ವರ್ಷ ಹಳೆಯ ದೇವಸ್ಥಾನದ ಕಟ್ಟಡಕ್ಕೆ ಮರು ಜೀವ

ನಗರದ ಹೃದಯ ಭಾಗದಲ್ಲಿರುವ ಮಾರುತಿ ದೇವಸ್ಥಾನ

ಟಿ.ನಾಗೇಂದ್ರ
Published 5 ಸೆಪ್ಟೆಂಬರ್ 2025, 6:58 IST
Last Updated 5 ಸೆಪ್ಟೆಂಬರ್ 2025, 6:58 IST
ಶಹಾಪುರದ ನೂತನ ಮಾರುತಿ ದೇಗುಲ ಕಟ್ಟಡ ನಿರ್ಮಾಣಕ್ಕೆ ಕಚ್ಚಾ ಸಾಮಗ್ರಿ ಸಂಗ್ರಹಿಸಿರುವುದು
ಶಹಾಪುರದ ನೂತನ ಮಾರುತಿ ದೇಗುಲ ಕಟ್ಟಡ ನಿರ್ಮಾಣಕ್ಕೆ ಕಚ್ಚಾ ಸಾಮಗ್ರಿ ಸಂಗ್ರಹಿಸಿರುವುದು   

ಶಹಾಪುರ: ನಗರದ ಹೃದಯ ಭಾಗದಲ್ಲಿರುವ 300 ವರ್ಷ ಹಳೆಯದಾದ ಮಾರುತಿ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ಬಿಡುಗಡೆಯಾಗಿದೆ. ಈಗಾಗಲೇ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೆಲಸಮ ಮಾಡಿ ಕಚ್ಚಾ ಸಾಮಗ್ರಿಗಳನ್ನು ಸಂಗ್ರಹಿಸಿದೆ.

ತಹಶೀಲ್ದಾರ್ ಅವರ ಅಧೀನದಲ್ಲಿರುವ ಈ ದೇಗುಲದ ಜಾಗ ಅಳತೆ 50 ಮತ್ತು 75 ಉದ್ದಳತೆಯಿದೆ. ಅದರಲ್ಲಿ 30 ಮತ್ತು 55ರಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಸುಮಾರು ₹1.50 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣದ ಗುರಿ ಹೊಂದಲಾಗಿದೆ.

‘ಈಗಾಗಲೇ ದೇಗುಲಕ್ಕೆ ಅಗತ್ಯವಿರುವ ಕಂಬಗಳ ಕೆತ್ತನೆಯ ಕೆಲಸ ಭೀಮರಾಯನಗುಡಿಯ ಹತ್ತಿರ ಆರಂಭಗೊಂಡಿದೆ. ನಿರೀಕ್ಷೆಯಂತೆ ಕೆಲಸ ಸುಗಮವಾದರೆ ಎರಡು ವರ್ಷದಲ್ಲಿ ಕೆಲಸ ಪೂರ್ಣಗೊಳ್ಳಲಿದೆ’ ಎನ್ನುತ್ತಾರೆ ಹನುಮಾನ ದೇವಸ್ಥಾನ ಸಮಿತಿ ಸದಸ್ಯ ಭಗವಂತರಾಯ ಬಳೂಂಡಗಿ.

ADVERTISEMENT

ಮಾರುತಿ ದೇವಸ್ಥಾನವು ಶಹಾಪುರ-ಸುರಪುರ ಹೆದ್ದಾರಿಯ ನಗರದ ಬಸವೇಶ್ವರ ವೃತ್ತದಿಂದ ಅನತಿ ದೂರದಲ್ಲಿದೆ. ಹಿಂದೆ ದೇಗುಲಕ್ಕೆ ಕಟ್ಟಡವಿರಲಿಲ್ಲ ಟಿನ್ ಶೆಡ್ ಹಾಕಿತ್ತು. ಗರ್ಭಗುಡಿಗೆ ಮಾತ್ರ ಕಟ್ಟಡವಿತ್ತು. ವಿಶಾಲವಾದ ಬೇವಿನ ಮರವಿದೆ. ಅದರ ನೆರಳಿನ ಆಸರೆಯಲ್ಲಿ ಗ್ರಾಮೀಣ ಪ್ರದೇಶದಿಂದ ಆಗಮಿಸಿದ ಜನತೆ ಕುಳಿತುಕೊಳ್ಳುತ್ತಾರೆ. ಅಲ್ಲದೆ ಯಾವುದೇ ಸಾರ್ವಜನಿಕ ಸಭೆ ಸಮಾರಂಭದ ವೇದಿಕೆಯು ಕೂಡಾ ಇದೇ ದೇಗುಲದ ಆವರಣ ಆಗಿದೆ.

‘ದೇಗುಲದ ಸುತ್ತಮುತ್ತಲು ಸಣ್ಣ ವ್ಯಾಪಾರಸ್ಥರು ಬದುಕು ಕಟ್ಟಿಕೊಂಡು ಉಪಜೀವಿಸುತ್ತಿದ್ದರು. ಈಗ ಅವೆಲ್ಲವನ್ನು ತೆರವುಗೊಳಿಸಿ ನೂತನ ದೇಗುಲ ತಲೆ ಎತ್ತಲಿದೆ’ ಎನ್ನುತ್ತಾರೆ ಮಾರುತಿ ದೇವಸ್ಥಾನದ ಭಕ್ತರು ಒಬ್ಬರು.

‘ಮಾರುತಿ ದೇವಸ್ಥಾನಕ್ಕೆ ನಗರದ ಹೆಚ್ಚಿನ ಭಕ್ತರು ಅಪಾರ ಗೌರವ ಹೊಂದಿದ್ದಾರೆ. ದೇವಸ್ಥಾನದ ಜೀರ್ಣೋದ್ದಾರ ಮಾಡಬೇಕು ಎಂಬ ಕನಸು ಹಲವು ವರ್ಷದಿಂದ ಕಾಡುತ್ತಲಿತ್ತು. ಕೊನೆಗೆ ಭಕ್ತರ ಸಹಕಾರದಿಂದ ಎಲ್ಲಾ ಅಡೆತಡೆಗೆ ವಿರಾಮ ನೀಡಿ, ನಮ್ಮೆಲ್ಲರ ಆರಾಧ್ಯದೈವ ಮಾರುತಿ ದೇಗುಲ ಕಟ್ಟಡ ನಿರ್ಮಾಣದ ಕೆಲಸ ತ್ವರಿತವಾಗಿ ಪೂರ್ಣಗೊಳಿಸಲು ಎಲ್ಲಾ ಭಕ್ತರು ಪ್ರಾಮಾಣಿಕವಾಗಿ’ ಶ್ರಮಿಸಬೇಕು ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ.

ಮಾರುತಿ ದೇಗುಲದ ಕಟ್ಟಡಕ್ಕೆ ₹ 50 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಇನ್ನೂ ಹೆಚ್ಚುವರಿ ಅನುದಾನ ಅನುದಾನ ಬಿಡುಗಡೆ ಮಾಡಿ ಕಟ್ಟಡ ಪೂರ್ಣಗೊಳಿಸಲಾಗುವುದು
ಶರಣಬಸಪ್ಪ ದರ್ಶನಾಪುರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.