
ಯಾದಗಿರಿ: ಇಲ್ಲಿನ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು (ಯಿಮ್ಸ್) ಹೆಚ್ಚುವರಿಯಾಗಿ 50 ಎಂಬಿಬಿಎಸ್ ಸೀಟುಗಳಿಗೆ ಪ್ರಸ್ತಾಪ ಸಲ್ಲಿಸಿದ್ದರಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ತಂಡ ಈಚೆಗೆ ಭೇಟಿ ಕೊಟ್ಟು, ಸೀಟು ಮಂಜೂರಾತಿಗಾಗಿ ಸರ್ಕಾರಕ್ಕೆ ವರದಿಯೂ ಸಲ್ಲಿಸಿದೆ.
‘ಯಿಮ್ಸ್’ನಲ್ಲಿ ಪ್ರಸ್ತುತ ಎಂಬಿಬಿಎಸ್‌ನ 150 ಸೀಟುಗಳಿವೆ. ನರ್ಸಿಂಗ್ ಕೋರ್ಸ್, ಹೊಸದಾಗಿ ನಾಲ್ಕು ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್‌ಗಳು ಸೇರ್ಪಡೆಯಾಗಿವೆ. ಇದರ ಜೊತೆಗೆ 2026ರ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ಹಾಗೂ ಮುಂದಿನ ಶೈಕ್ಷಣಿಕ ವರ್ಷದಿಂದ ಹೆಚ್ಚುವರಿಯ 50 ಸೀಟು ಸೇರಿ 200 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಬೋಧಿಸುವ ಗುರಿಯೂ ಸಂಸ್ಥೆಗೆ ಇದೆ.
ಸಂಸ್ಥೆಯು ಹೆಚ್ಚುವರಿ ಹಾಗೂ ಉನ್ನತ ಕೋರ್ಸ್‌ಗಳಿಗೆ ಪ್ರಸ್ತಾವನೆ ಸಲ್ಲಿಸುತ್ತಿದ್ದಂತೆ ಆರ್‌ಜಿಯುಎಚ್‌ಎಸ್ ತಂಡವು ನಗರ ಹೊರ ವಲಯದ ‘ಯಿಮ್ಸ್’ ಮುಖ್ಯ ಕಟ್ಟಡ, ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿತ್ತು. ಅಲ್ಲಿನ ಕಟ್ಟಡಗಳ ಮೂಲಸೌಕರ್ಯ, ಕ್ಲಾಸ್ ರೂಮ್‌ಗಳ ಸಾಮರ್ಥ್ಯ, ಬೋಧಕ– ಬೋಧಕೇತರ ಸಿಬ್ಬಂದಿಯ ಸಂಖ್ಯೆ ಹಾಗೂ ಆಸ್ಪತ್ರೆಯ ಒಳ–ಹೊರ ರೋಗಿಗಳ ಅಂಕಿಅಂಶಗಳನ್ನು ಪರಿಶೀಲಿಸಿದೆ.
ವರ್ಷದ ಹಿಂದೆ ನಿತ್ಯ ದಾಖಲು ಹಾಗೂ ತಪಾಸಣೆಗೆ ಒಳಗಾಗುತ್ತಿದ್ದ 400 ರೋಗಿಗಳ ಸಂಖ್ಯೆ ಈ ವರ್ಷ 800 ಗಡಿ ದಾಟಿದೆ. ವಾರದಲ್ಲಿ ಒಂದು ದಿನವಾದರೂ ಸಾವಿರ ಸಂಖ್ಯೆ ಮುಟ್ಟುತ್ತದೆ. ಜೊತೆಗೆ ಸಿಬ್ಬಂದಿ ಸಾಮರ್ಥ್ಯವೂ ವೃದ್ಧಿಯಾಗಿ, ವಿಶಾಲವಾದ ತರಗತಿ ಕೋಣೆಗಳೂ ಇವೆ. ಹೀಗಾಗಿ, ಆರ್‌ಜಿಯುಎಚ್‌ಎಸ್ ತಂಡವು ಸಂಸ್ಥೆಗೆ ಹೆಚ್ಚುವರಿಯಾಗಿ 50 ಸೀಟುಗಳನ್ನು ಮಂಜೂರು ಮಾಡಿಸುವ ಇಂಗಿತ ವ್ಯಕ್ತಪಡಿಸಿ, ಸರ್ಕಾರಕ್ಕೂ ಸಕರಾತ್ಮಕವಾಗಿ ವರದಿಯನ್ನೂ ಸಲ್ಲಿಕೆ ಮಾಡಿದೆ.
ಹೆಚ್ಚುವರಿ ಸೀಟುಗಳು ಬಂದರೆ ವೈದ್ಯಕೀಯ ಶಿಕ್ಷಣಕ್ಕಾಗಿ ದೂರದ ಜಿಲ್ಲೆಗೆ ಹೋಗುವುವುದು ತಪ್ಪುತ್ತದೆ. 371 ಜೆ ಅಡಿ ಸ್ಥಳೀಯರಿಗೆ ಇನ್ನಷ್ಟು ಸೀಟುಗಳು ಲಭ್ಯವಾಗಲಿವೆ. ಪಿಜಿ ಕೋರ್ಸ್‌ನಿಂದಾಗಿ ಎಂಬಿಬಿಎಸ್ ನಂತರ ಉನ್ನತ ಶಿಕ್ಷಣ ಪಡೆಯಬೇಕು ಎಂಬ ವಿದ್ಯಾರ್ಥಿಗಳಿಗೆ ಕನಸಿಗೂ ನೀರೆರದಂತಾಗಲಿದೆ.
140 ಪಿಜಿ ಸೀಟುಗಳಿಗೆ ಅರ್ಹ: ‘ಯಿಮ್ಸ್’ನ ರೋಗಿಗಳ ಸಂಖ್ಯೆ, ಸಿಬ್ಬಂದಿ ಸಾಮರ್ಥ್ಯ, ಆರಂಭವಾದ ಅವಧಿ, ಮೂಲಸೌಕರ್ಯಗಳು ಗಮನಿಸಿದರೆ 142 ಸ್ನಾತಕೋತ್ತರ ಸೀಟುಗಳಿಗೆ ಅರ್ಹವಾಗಿದೆ. ಆದರೆ, ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಹೊಸದಾಗಿ ಪಿಜಿ ಕೋರ್ಸ್ ಆರಂಭಿಸುವುದಕ್ಕೆ 80 ಸೀಟುಗಳಿಗೆ ಅನುಮತಿ ಕೊಡುತ್ತದೆ. ಸಂಸ್ಥೆಯಲ್ಲಿ 20 ವಿಭಾಗಗಳಿಗೆ ತಲಾ 4 ಸೀಟುಗಳಂತೆ 80 ಸೀಟುಗಳು ಸೀಗುವ ವಿಶ್ವಾಸವಿದೆ’ ಎನ್ನುತ್ತಾರೆ ಸಂಸ್ಥೆಯ ಅಧಿಕಾರಿಗಳು.
ಸರ್ಕಾರಕ್ಕೆ ಇಸಿಎಫ್‌ಸಿ ಕೊಡುತ್ತಿದ್ದಂತೆ ಎನ್‌ಎಂಸಿಗೆ ಪತ್ರ
‘ರಾಜೀವ್ ಗಾಂಧಿ ವಿವಿಯ ತಂಡವು ಹೆಚ್ಚುವರಿ ಎಂಬಿಬಿಎಸ್ ಸೀಟುಗಳಿಗೆ ಅಗತ್ಯವಿರುವ ಬಾಕಿ ಸಿಬ್ಬಂದಿಯನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸರ್ಕಾರವೂ ಅಗತ್ಯತೆ ಪ್ರಮಾಣಪತ್ರ ಕಾರ್ಯಸಾಧ್ಯತಾ ಪ್ರಮಾಣಪತ್ರ (ಇಸಿಎಫ್‌ಸಿ) ಕೊಡುವಂತೆ ಪ್ರತಿಕ್ರಿಯಿಸಿದೆ. ವಿವಿಯಿಂದ ಇಸಿಎಫ್‌ಸಿಯು ಸರ್ಕಾರಕ್ಕೆ ಸಲ್ಲಿಕೆ ಆಗುತ್ತಿದಂತೆ ಸಂಸ್ಥೆಗೆ ಭೇಟಿ ನೀಡಿ ಪರಿಶೀಲಿಸುವಂತೆ ಎನ್‌ಎಂಸಿಗೆ ಪತ್ರ ಬರೆಯಲಾಗುವುದು’ ಎಂದು ‘ಯಿಮ್ಸ್’ ಮುಖ್ಯಸ್ಥ ಡಾ. ಸಂದೀಪ್ ಹರಸಂಗಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಹೊಸದಾಗಿ ಮಂಜೂರಾಗಿರುವ ಬೋಧಕೇತರ ಹುದ್ದೆಗಳ ನೇಮಕಾತಿ ಪ್ರಕ್ರಿಯ ಪ್ರಗತಿಯಲ್ಲಿದೆ. ಹೆಚ್ಚುವರಿ ಸೀಟುಗಳಿಗೆ ಬೇಕಾಗುವಷ್ಟು ಬೋಧಕರ ಸಿಬ್ಬಂದಿಯ ನೇಮಕಾತಿಗೆ ಅನುಮೋದನೆ ಕೊಡುವಂತೆ ಸರ್ಕಾರಕ್ಕೆ ಪತ್ರಬರೆಯಲಾಗುವುದು. ಪಿಜಿ ಕೋರ್ಸ್‌ಗಳನ್ನು ನಡೆಸುವಷ್ಟು ಸಾಮರ್ಥ್ಯವಿದೆ’ ಎಂದರು.
ಸಚಿವರ ಜತೆ ಚರ್ಚಿಸಿ ಅಗತ್ಯ ಸಹಕಾರ
‘ಯಿಮ್ಸ್‌ನಲ್ಲಿ ಸಿಬ್ಬಂದಿ ಕೊರತೆ ಇರುವುದು ಗಮನಕ್ಕೆ ಬಂದಿದೆ. ಸಂಸ್ಥೆಯ ಮುಖ್ಯಸ್ಥರಿಂದ ವರದಿಯನ್ನು ಪಡೆದು ಆರೋಗ್ಯ ಸಚಿವರ ಜೊತೆಗೆ ಮಾತನಾಡುತ್ತೇನೆ. ಸಿಬ್ಬಂದಿಯ ನೇಮಕಕ್ಕೆ ಬೇಕಾದ ಸಕಲ ಸಹಕಾರವನ್ನು ನೀಡಲಾಗುವುದು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.