ADVERTISEMENT

ವೈದ್ಯಕೀಯ ಜನ ಸೇವೆಯ ವೃತ್ತಿ: ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ

ಯಿಮ್ಸ್ ‘ಶ್ವೇತ ವಸ್ತ್ರಧಾರಣಾ’ ಸಮಾರಂಭ; ನಿವೃತ್ತ ನ್ಯಾ.ಶಿವರಾಜ ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 7:09 IST
Last Updated 16 ಜನವರಿ 2026, 7:09 IST
ಯಾದಗಿರಿ ‘ಯಿಮ್ಸ್‌’ನಲ್ಲಿ ಬುಧವಾರ ನಡೆದ ‘ಶ್ವೇತ ವಸ್ತ್ರಧಾರಣಾ’ ಸಮಾರಂಭದಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾ.ಶಿವರಾಜ ಪಾಟೀಲ ಅವರನ್ನು ಸನ್ಮಾನಿಸಲಾಯಿತು
ಯಾದಗಿರಿ ‘ಯಿಮ್ಸ್‌’ನಲ್ಲಿ ಬುಧವಾರ ನಡೆದ ‘ಶ್ವೇತ ವಸ್ತ್ರಧಾರಣಾ’ ಸಮಾರಂಭದಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾ.ಶಿವರಾಜ ಪಾಟೀಲ ಅವರನ್ನು ಸನ್ಮಾನಿಸಲಾಯಿತು   

ಯಾದಗಿರಿ: ‘ಜನಸೇವೆಯೇ ಜನಾರ್ದನ ಸೇವೆ ಎಂಬ ದಿಸೆಯಲ್ಲಿ ಯುವ ವೈದ್ಯರು ಜನರಿಗೆ ಇನ್ನಷ್ಟು ಉತ್ತಮವಾದ ಆರೋಗ್ಯ ಸೇವೆ ನೀಡಲಿ’ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಹೇಳಿದರು.

ಇಲ್ಲಿನ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಯಿಮ್ಸ್‌) ಸಭಾಂಗಣದಲ್ಲಿ ಬುಧವಾರ ನಡೆದ ವೈದ್ಯಕೀಯ ವಿದ್ಯಾರ್ಥಿಗಳ ‘ಶ್ವೇತ ವಸ್ತ್ರಧಾರಣಾ’ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

‘ಜನಸೇವೆಯೇ ಜನಾರ್ದನ ಸೇವೆಯಾಗಿದ್ದು, ಎಲ್ಲರಿಗೂ ಜನರ ಸೇವೆಯನ್ನು ಮಾಡುವ ಅವಕಾಶ ಸಿಗುವುದಿಲ್ಲ. ಆದರೆ, ವೈದ್ಯಕೀಯ ಕ್ಷೇತ್ರಕ್ಕೆ ಬರುವವರಿಗೆ ನೇರವಾಗಿ ಜನಸೇವೆ ಮಾಡುವ ಅವಕಾಶ ಸಿಗುತ್ತದೆ’ ಎಂದರು.

ADVERTISEMENT

‘ಬಾಲ್ಯದಲ್ಲಿ ಸಾಕಷ್ಟು ಕಷ್ಟಗಳನ್ನು ಕಂಡು ಬೆಳೆದಿದ್ದೇನೆ. ಎಳೆಯದರಲ್ಲಿ ನನಗೆ ಯಾವುದರ ಆಸರೆ ಇಲ್ಲದೆ ಇದ್ದಾಗ ಪರಿಶ್ರಮ ಮತ್ತು ಪ್ರಾಮಾಣಿಕತೆ ನನಗೆ ಉತ್ತಮ ಮಿತ್ರರಾಗಿದ್ದರು. ಇವತ್ತು ನಾನು ಈ ಸ್ಥಾನದಲ್ಲಿ ಇರಲು ಪರಿಶ್ರಮ ಮತ್ತು ಪ್ರಾಮಾಣಿಕತೆಯೇ ಕಾರಣ. ಹೀಗಾಗಿ, ಜೀವನದಲ್ಲಿ ಪರಿಶ್ರಮ ಮತ್ತು ಪ್ರಾಮಾಣಿಕತೆ ಇರಲಿ’ ಎಂದರು.

‘ಸಹಾನುಭೂತಿ ಇಲ್ಲದ ಮನುಷ್ಯ ಪರಿಮಳವೇ ಇಲ್ಲದ ಹೂವಿನಂತೆ. ಬದುಕಿನಲ್ಲಿ ಪರಿಶ್ರ, ಪ್ರಾಮಾಣಿಕತೆ ಹಾಗೂ ವಿನಯತೆ ಅತ್ಯಂತ ಪ್ರಮುಖವಾದ ಪಾತ್ರವಹಿಸುತ್ತವೆ. ನಮ್ಮಲ್ಲಿನ ಜ್ಞಾನ, ಸದ್ವಿಚಾರಗಳನ್ನು ಹಂಚುತ್ತಾ ಹೋದರೆ, ಬದುಕಿಗೆ ಸಾರ್ಥಕತೆ ಬರುತ್ತದೆ’ ಎಂದು ಕಿವಿ ಮಾತು ಹೇಳಿದರು.

‘ಯಿಮ್ಸ್’ ಮುಖ್ಯಸ್ಥ ಡಾ.ಸಂದೀಪ್ ಹರಸಂಗಿ ಮಾತನಾಡಿ, ‘ಹೊಸದಾಗಿ ಆರಂಭವಾಗಿರುವ ‘ಯಿಮ್ಸ್’ ಸಂಸ್ಥೆಯು ವೈದ್ಯಕೀಯ ಕ್ಷೇತ್ರಕ್ಕೆ ತನ್ನದೆಯಾದ ಕೊಡುಗೆ ನೀಡುತ್ತಿದೆ. ವೈದ್ಯಕ್ಷೀಯ ಶಿಕ್ಷಣ ಪಡೆಯಬೇಕು ಎಂಬ ಕನಸು ಹೊತ್ತ ಈ ಭಾಗದವರಿಗೆ ಉತ್ತಮವಾದ ಕಲಿಕೆಗೆ ವೇದಿಕೆಯಾಗಿದೆ’ ಎಂದರು.

‘ಕಲ್ಯಾಣ ಕರ್ನಾಟಕ ಭಾಗವು ಹಿಂದುಳಿದ ಪ್ರದೇಶ ಎಂಬ ಮನಸ್ಥಿತಿಯಿಂದ ಹೊರಬರಬೇಕು. ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿ ಹೊರ ಹೋದ ಬಳಿಕೆ ಈ ಭಾಗಕ್ಕೆ ನಿಮ್ಮದೆಯಾದ ರೀತಿಯಲ್ಲಿ ಕೊಡುಗೆಗಳನ್ನು ನೀಡಬೇಕು’ ಎಂದು ಹೇಳಿದರು.

ಸಂಸ್ಥೆಯ ಪ್ರಾಂಶುಪಾಲ ನವಾಜ್ ಉಮರ್ ಅವರು ಶ್ವೇತ ವಸ್ತ್ರಧಾರಣೆಗೆ ಆದೇಶಿಸಿ, ಪ್ರಮಾಣ ವಚನವನ್ನು ಬೋಧಿಸಿದರು.

ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಸಂತೋಷ ಲಕ್ಷ್ಮಣ, ಆರ್ಥಿಕ ಸಲಹೆಗಾರ ಕಾಶಿನಾಥ ಬಿ. ಅಲ್ಲೂರು, ಶರೀರಕ್ರಿಯೆ ಹಾಗೂ ವೈದ್ಯ ವಿಭಾಗದ ಮುಖ್ಯಸ್ಥೆ ಡಾ. ಶ್ವೇತಾ ಪಾಟೀಲ, ಜೀವರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಪಂಪಾರೆಡ್ಡಿ ಕೊಲ್ಲೂರು, ಅಂಗರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಲಕ್ಷ್ಮಿಕಾಂತ ಬಿ.ಎಂ., ಅರಿವಳಿಕೆ ವಿಭಾಗದ ಡಾ. ನಿರಂಜನ ಸಿ.ಎಸ್‌. ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.