
ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕ್ರೈಸ್ತ ಸಮುದಾಯದವರು ಯೇಸುಕ್ರಿಸ್ತನ ಜನ್ಮದಿನದ ಸಂಕೇತವಾದ ಕ್ರಿಸ್‌ಮಸ್ ಹಬ್ಬವನ್ನು ಗುರುವಾರ ಸಡಗರದಿಂದ ಆಚರಿಸಿದರು.
ನಗರದ ಸೆಂಟ್ರಲ್ ಮೆಥೋಡಿಸ್ಟ್ ಚರ್ಚ್, ತಾತಾ ಸಿಮೆಂಡ್ಸ್ ಮೆಮೋರಿಯಲ್ ಮೆಥೋಡಿಸ್ಟ್ ಚರ್ಚ್, ಅಂಬೇಡ್ಕರ್ ನಗರದ ಮೆಥೋಡಿಸ್ಟ್ ಚರ್ಚ್, ಡಾನ್ ಬಾಸ್ಕೊ ಚರ್ಚ್, ಚಿರಂಜೀವಿ ನಗರದ ಫೆಲೋಶಿಪ್ ಚರ್ಚ್ ಸೇರಿದಂತೆ ಹಲವು ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಸಡಗರ ಮನೆ ಮಾಡಿದೆ.
ಕುಟುಂಬ ಸದಸ್ಯರೊಂದಿಗೆ ಚರ್ಚ್‌ಗಳಿಗೆ ತೆರಳಿದ ಕ್ರೈಸ್ತರು ಯೇಸುವಿನ ಶಿಲುಬೆ ಹಾಗೂ ಸಂತ ಮೇರಿಯಮ್ಮನ ಭಾವಚಿತ್ರಗಳ ಮುಂದೆ ನಿಂತು ಶ್ರದ್ಧಾಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹಳೆ ಒಡಂಬಡಿಕೆ ಹಾಗೂ ಹೊಸ ಒಡಂಬಡಿಕೆಯಲ್ಲಿನ ಆಯ್ದ ಅಧ್ಯಯನಗಳನ್ನು ಧರ್ಮಗುರುಗಳು ಬೋಧಿಸಿದರು. ಜೊತೆಗೆ ಭಕ್ತಿಗೀತೆಗಳನ್ನು ಹಾಡುವ ಮೂಲಕ ಯೇಸುಕ್ರಿಸ್ತನನ್ನು ನೆನೆದರು.
ಸಾಮೂಹಿಕ ಪ್ರಾರ್ಥನೆ, ಧರ್ಮಗುರುಗಳ ಹಬ್ಬದ ಸಂದೇಶ, ಕ್ಯಾರೆಲ್ಸ್ ಗೀತೆಗಳು, ಭಕ್ತರ ಸಂಕಷ್ಟಗಳ ನಿವೇದನೆ, ನಿರ್ಮಾಣ ಹಂತದಲ್ಲಿನ ಚರ್ಚ್ ನಿರ್ಮಾಣಕ್ಕೆ ದೇಣಿಗೆ, ಭಕ್ತಿಯ ಕಾಣಿಕೆ ಸ್ವೀಕರಿಸಲಾಯಿತು. ಡಿಸೆಂಬರ್ ಒಂದರಿಂದ ನಡೆದ ವಿವಿಧ ಕಾರ್ಯಕ್ರಮಗಳ ಮೆಲುಕು, ದಾನಿಗಳ ಸ್ಮರಣೆಯೊಂದಿಗೆ ವಂದನಾರ್ಪಣೆ ಮಾಡಲಾಯಿತು.
ವಂದನಾರ್ಪಣೆ ಮುಗಿಯುತ್ತಿದ್ದಂತೆ ಕ್ರಿಸ್‌ಮಸ್ ಶುಭಾಷಯದ ಬೃಹತ್ ಕೇಕ್ ಮೇಲೆ ನಕ್ಷತ್ರ ಆಕಾರದ ದೀಪ ಬೆಳಗಿಸಿ ಧರ್ಮಗುರುಗಳು ಮಕ್ಕಳೊಂದಿಗೆ ಕೇಕ್ ಕತ್ತರಿಸಿದರು. ಯೇಸುವಿನ ಜನನದ ಭಕ್ತಿಯ ಗೀತೆಯೊಂದಿಗೆ ನೆರೆದವರು ಹರ್ಷ ವ್ಯಕ್ತಪಡಿಸಿದರು. ಕೇಕ್ ತುಂಡರಿಸಿ ಪರಿಸ್ಪರ ತಿನಿಸಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಹೊಸ ಬಟ್ಟೆ ತೊಟ್ಟು ಕುಟುಂಬ ಸಮೇತರಾಗಿ ಬಂದಿದ್ದ ಕ್ರೈಸ್ತರು ಮಧ್ಯಾಹ್ನನದವರೆಗೆ ನಡೆದ ಪ್ರಾರ್ಥನೆ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಚರ್ಚ್ ಆವರಣದಲ್ಲಿ ಕ್ರಿಸ್ತ ಜನಿಸಿದ ಗೋದಲಿ, ಮೇರಿ ಮಾತೆಯ ಚಿತ್ರಗಳನ್ನು ಅಳವಡಿಸಿದ್ದು ಗಮನಸೆಳೆಯಿತು. ಯುವಕ–ಯುವತಿಯರು ಗೋದಲಿ ಬಳಿ ನಿಂತು ತಂಡೋಪತಂಡವಾಗಿ ಸೆಲ್ಫಿ, ಗ್ರೂಪ್ ಫೋಟೊಗಳನ್ನು ತೆಗೆಸಿಕೊಂಡು ಸಂಭ್ರಮಿಸಿದರು.
ಹಬ್ಬಕ್ಕಾಗಿ ಬಗೆಬಗೆಯ ಕೇಕ್, ಕುಕ್ಕೀಸ್, ಬಿಸ್ಕತ್ ಸೇರಿದಂತೆ ವೈವಿಧ್ಯಮ ತಿಂಡಿಗಳಯ, ನಾನಾ ತರಹದ ಮಾಂಸಾಹಾರದ ಖಾದ್ಯಗಳನ್ನು ತಯಾರಿಸಿ ಬಂಧು, ಮಿತ್ರರನ್ನು ಆಹ್ವಾನಿಸಿದರು. ಧರ್ಮಾತೀತವಾಗಿ ತಮ್ಮ ಬಳಗವನ್ನು ಮನೆಗೆ ಕರೆದು ಭರ್ಜರಿ ಭೋಜನ ಸವಿದರು.
ಗ್ರಾಮೀಣ ಭಾಗದ ಯಡ್ಡಳ್ಳಿ, ಅಬ್ಬೆತುಮಕೂರು, ಎಲ್ಹೇರಿ, ಕಂದಕೂರು, ಭೀಮನಳ್ಳಿ, ಕೌಳೂರು, ಹಿರೇನೂರು, ಬಳಿಚಕ್ರ, ಕಾಳಬೆಳಗುಂದಿ, ಯರಗೋಳ, ಕ್ಯಾಸಪನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿನ ಚರ್ಚ್‌ಗಳಲ್ಲಿ ಯೇಸುಕ್ರೈಸ್ತನ ಸ್ಮರಣೆ ಮಾಡಲಾಯಿತು. ನಗರದ ಚರ್ಚ್‌ಗಳಲ್ಲಿ ಸಂಜೆ ಯೇಸು ಕುರಿತ ಭಕ್ತಿ ಗೀತೆಗಳ ಗಾಯನ ಸ್ಪರ್ಧೆ ಜರುಗಿತು.
‘ರಕ್ಷಣಾ ಸುವಾರ್ತೆ ಸರ್ವರಿಗೂ ತಿಳಿಸಿ’ ‘
ಯೇಸು ಪ್ರಭು ನಮ್ಮೆಲ್ಲರ ರಕ್ಷಣೆ ಹಾಗೂ ಪಾಪದಿಂದ ಬಿಡುಗಡೆ ಮಾಡಲು ಭೂಮಿಗೆ ಬಂದವರು. ನಮ್ಮೆಲ್ಲರ ರಕ್ಷಕನಾದ ಯೇಸುವಿನ ಸುವಾರ್ತೆಗಳನ್ನು ಪ್ರತಿಯೊಬ್ಬರಿಗೆ ತಿಳಿಸುವುದೇ ನಿಜವಾದ ಕ್ರಿಸ್‌ಮಸ್’ ಎಂದು ತಾತಾ ಸಿಮೆಂಡ್ಸ್ ಮೆಮೋರಿಯಲ್ ಚರ್ಚ್ ಅಸಿಸ್ಟೆಂಟ್ ಫಾಸ್ಟರ್ ಅರುಣಕುಮಾರ್ ಹೇಳಿದರು. ಕ್ರಿಸ್‌ಮಸ್ ಅಂಗವಾಗಿ ಧರ್ಮ ಸಂದೇಶ ನೀಡಿ ಮಾತನಾಡಿದ ಅವರು, ‘ಕಷ್ಟದಲ್ಲಿರುವ ಹಲವು ಆತ್ಮಗಳಿಗೆ ದೇವರ ಕಡೆಗೆ ತಿರುಗಿಸಿ ಸುವಾರ್ತೆಗಳನ್ನು ಆಲಿಸುವಂತೆ ಮಾಡಿದವರು ಯೇಸು ಪ್ರಭು. ಪರ ಲೋಕದಲ್ಲಿಯೂ ಸಂತೋಷದಿಂದ ಇರುವಂತೆ ಕರುಣಿಸಿದವರು. ದೇವರ ಮಕ್ಕಳಾಗಿ ಬದುಕಿ, ಅನ್ಯರಿಗೂ ದೇವರ ವಾಣಿಗಳನ್ನು ತಿಳಿಸಬೇಕು’ ಎಂದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ವಿಜಯರತ್ನ, ಬಿ.ಕೆ. ಆನಂದ್, ಮೇಘನಾಥ ಅಬ್ರಾಹಂ ಬೆಳ್ಳಿ, ಕ್ರಿಸ್ಟೋಫರ್ ಇಮ್ಯಾನುವಲ್ ಬೆಳ್ಳಿ, ಬೆಂಜಮಿನ್ ವಿಜಯಕುಮಾರ, ಗಿಜಿಯೋನ್ ಮೋಜೇಶ್, ಲಾರೆನ್ಸ್ ರೋನಿ, ಸುರೇಶ್ ಸೈಲೇಶ್, ಇಮ್ಯಾನುವಲ್ ಸೈಲೇಶ್, ಮೆಘನಾಥ ಬೆಳ್ಳಿ, ಸಂಷಾನ್, ಸಾಲಮೋನ್ ಅಲ್ಫ್ರೆಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಿಕ್ಕಿರಿದು ಸೇರಿದ ಭಕ್ತರು
ನಗರದ ಸೆಂಟ್ರಲ್ ಮೆಥೋಡಿಸ್ಟ್ ದೇವಾಲಯವು ಭರ್ತಿಯಾಗಿ ಮುಂಭಾಗದಲ್ಲಿ ಹಾಕಿದ್ದ ಟೆಂಟ್‌ನಲ್ಲಿಯೂ ನೂರಾರು ಜನರು ಸೇರಿದ್ದು ಎಲ್ಲರೂ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಬೆಳಿಗ್ಗೆಯಿಂದಲೇ ಕ್ರೈಸ್ತ ಸಮುದಾಯದವರು ತಂಡೋಪತಂಡವಾಗಿ ಬಂದು ಆಸನಗಳಲ್ಲಿ ಕುಳಿತರು. ಧರ್ಮಗುರುಗಳ ಸಂದೇಶಗಳು ಯುವಕ–ಯುವತಿಯರ ಸುಶ್ರಾವ್ಯದ ಭಕ್ತಿ ಗೀತೆಗಳಿಗೆ ಕಿವಿಯಾದರು. ಮೇಲ್ವಿಚಾರಕ ರೆ.ಸುನಂದಕುಮಾರ್ ಮಾತನಾಡಿ ‘ಯೇಸು ಜನಸಿದ ಪವಿತ್ರವಾದ ಕ್ರಿಸ್‌ಮಸ್ ಹಬ್ಬವು ಪ್ರತಿಯೊಬ್ಬರಲ್ಲಿ ಹೊಸ ಭರವಸೆ ಮೂಡಿಸಲಿ. ಸಕಲರಿಗೆ ಸಂಪತ್ತು ಆರೋಗ್ಯ ಅಂತಸ್ತು ಪ್ರಾಪ್ತವಾಗಲಿ. ಜಗತ್ತಿನಲ್ಲಿ ಸದಾ ಶಾಂತಿ ನೆಲಸಲಿ’ ಎಂದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ರೇವರೆಂಡ್ ಜಾನ್‌ವೆಸ್ಲಿ ಪ್ರತಾಪ ಮಿತ್ರ ಜೇಮ್ಸ್ ಉದಯಕುಮಾರ ಬಾಲಮಿತ್ರ ವಿಜಯಕುಮಾರ ಅಶೋಕ ಆಸನಳ ಸುನಿಲ್ ಕಂದಕೂರ ಇಮ್ಯಾನುವಲ್ ಕಾಳಬೆಳಗುಂದಿ ಸ್ವಾಮಿವೇಲ್ ಡಾ.ಎಸ್.ರೆಡ್ಸನ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
‘ಜಗತ್ತಿನ ಒಳಿಗೆ ಬಂದ ಯೇಸು’
ಯಾದಗಿರಿ: ‘ಶಾಂತಿ ಪ್ರೀತಿ ಮತ್ತು ಸಹೋದರತ್ವದ ಪ್ರತೀಕವಾಗಿ ಕ್ರಿಸ್‌ಮಸ್ ಆಚರಿಸಲಾಗುತ್ತದೆ. ಜನರನ್ನು ಪಾಪದಿಂದ ಮುಕ್ತಗೊಳಿಸಿ ಜಗತ್ತಿನ ಒಳಿತು ಮಾಡಲು ದೇವರು ತನ್ನ ಮಗನನ್ನು ಯೇಸು ಕ್ರೀಸ್ತರ ರೂಪದಲ್ಲಿ ಭೂಮಿಗೆ ಕಳುಹಿಸಿದರು’ ಎಂದು ಚಿರಂಜೀವಿ ನಗರದ ಫೆಲೋಶಿಪ್ ಚರ್ಚ್ ಪಾಸ್ಟರ್ ದಿನೇಶ್ ಹೇಳಿದರು. ವಿಶೇಷ ಪ್ರಾರ್ಥನೆ ಸಾಧಕರಿಗೆ ಸನ್ಮಾನ ಗಾಯನ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಯೇಸುವಿನ ಬೋಧನೆಗಳು ಮಾನವೀಯ ಮೌಲ್ಯಗಳಿಂದ ತುಂಬಿವೆ. ನೆರೆಯವರನ್ನು ನಿನ್ನಂತೆ ಪ್ರೀತಿಸು ಎಂಬ ಬೋಧನೆ ಸಮಾಜಕ್ಕೆ ಶಾಶ್ವತ ಮೌಲ್ಯ ನೀಡಿದೆ’ ಎಂದರು. ಬೆಂಗಳೂರಿನ ರೆವರೆಂಡ್ ಚಾರ್ಲ್ಸ್ ಮಾತನಾಡಿ ‘ಯೇಸು ಪ್ರೀತಿ ಕ್ಷಮೆ ಕರುಣೆ ಸೇವೆ ವಿನಯಗಳನ್ನು ಜೀವನದ ಕೇಂದ್ರವನ್ನಾಗಿ ಮಾಡಿದರು. ದೀನ-ದುರ್ಬಲರ ಪರ ನಿಂತವರು ಸಮಾಜದಿಂದ ತಳ್ಳಲ್ಪಟ್ಟವರು ಬಡವರು ರೋಗಿಗಳು ಪಾಪಿಗಳು ಮಹಿಳೆಯನ್ನು ಗೌರವದಿಂದ ನಡೆಸಿಕೊಂಡರು. ದೇವರ ಪ್ರೀತಿ ಎಲ್ಲರಿಗೂ ಸಮಾನವೆಂಬ ಸಂದೇಶ ಸಾರಿದರು’ ಎಂದು ಹೇಳಿದರು. ಪತ್ರಕರ್ತ ಚಂದಪ್ಪ ದೋರನಹಳ್ಳಿ ಪ್ರಮುಖರಾಧ ಸುಭಾಷಚಂದ್ರ ಬಡಿಗೇರ ಮಹಾಂತೇಶ ಸ್ವಾಮಿ ಎಸ್.ಬಿ.ನಾಯಕ್ ರಾಘವೇಂದ್ರ ಶೆಟ್ಟಿ ಮೈಲಾರಪ್ಪ ಮಾರ್ಥಂಡಪ್ಪ ಪರಶುರಾಮ್ ಮಾಚನೂರ್ ವಿಶ್ವನಾಥ್ ಬಡಿಗೇರ ಸೇರಿ ಹಲವರು ಉಪಸ್ಥಿತರಿದ್ದರು.