ADVERTISEMENT

ಹುಣಸಗಿ: ಬರದಲ್ಲೂ ಹೆಚ್ಚಿದ ಹಾಲು ಉತ್ಪಾದನೆ, ತಿಂಗಳಲ್ಲಿ 56 ಸಾವಿರ ಲೀಟರ್ ಸಂಗ್ರಹ

ಭೀಮಶೇನರಾವ ಕುಲಕರ್ಣಿ
Published 15 ಮಾರ್ಚ್ 2024, 6:01 IST
Last Updated 15 ಮಾರ್ಚ್ 2024, 6:01 IST
ಹುಣಸಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಬಳಿ ಇರುವ ಹಾಲು ಶೀತಲೀಕರಣ ಘಟಕ
ಹುಣಸಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಬಳಿ ಇರುವ ಹಾಲು ಶೀತಲೀಕರಣ ಘಟಕ   

ಹುಣಸಗಿ: ರಾಜ್ಯದೆಲ್ಲಡೆ ಬರಗಾಲವಿದ್ದರೂ ತಾಲ್ಲೂಕಿನಲ್ಲಿ ಬರದ ಮಧ್ಯೆಯೂ ಹಾಲಿನ ಉತ್ಪಾದನೆ ಹೆಚ್ಚಿದ್ದು, ಇದು ಹೈನುಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಕೃಷಿಯ ಅವಿಭಾಜ್ಯ ಅಂಗವಾದ ಹೈನುಗಾರಿಕೆಯು ರೈತರ ಅಲ್ಪ ಆದಾಯದ ಮೂಲವೂ ಹೌದು. ಆದರೆ ಸದ್ಯ ತಾಲ್ಲೂಕಿನ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮತ್ತೆ ಹೈನುಗಾರಿಕೆಯತ್ತ ರೈತರು ಮುಖಮಾಡಿ ಹಾಲು ಉತ್ಪಾದನೆಯ ಕಾರ್ಯದಲ್ಲಿ ತೊಡಗಿಕೊಂಡಿರುವುದು ಹೆಚ್ಚಳಕ್ಕೆ ಕಾರಣ.

ನಿತ್ಯ 2500 ಲೀಟರ್ ಹಾಲು ಸಂಗ್ರಹ: ಹುಣಸಗಿ ತಾಲ್ಲೂಕು ಹಾಗೂ ಕಕ್ಕೇರಾ ವಲಯದಲ್ಲಿ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಈ ಸಂಘಗಳ ಮೂಲಕ ಸಾವಿರಾರು ಲೀಟರ್‌ ಹಾಲು ಹುಣಸಗಿ ಹಾಲು ಶೀತಲೀಕರಣ ಘಟಕಕ್ಕೆ ಬರುತ್ತಿದೆ. ಮಾರ್ಚ್ ಆರಂಭದಲ್ಲಿ ತಾಲ್ಲೂಕಿನಿಂದ ನಿತ್ಯ ಸರಾಸರಿ 2,000 ಲೀಟರ್ ಹಾಲು ಬರುತ್ತಿದೆ. ಕಳೆದ ಮೂರು ತಿಂಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಈಗ ಹಾಲು ಬರುತ್ತಿದೆ ಎಂದು ಶೀತಲೀಕರಣದ ಘಟಕದ ತಿರುಮಲರಾವ್ ಕುಲಕರ್ಣಿ ಮಾಹಿತಿ ನೀಡಿದರು.

ಕಳೆದ ವರ್ಷದ 2023ರ ಜನವರಿ ತಿಂಗಳಲ್ಲಿ 43 ಸಾವಿರ ಲೀಟರ್‌, ಫೆಬ್ರುವರಿ ತಿಂಗಳಲ್ಲಿ 45 ಸಾವಿರ ಹಾಗೂ ಮಾರ್ಚ್ ತಿಂಗಳಲ್ಲಿ 37 ಸಾವಿರ ಲೀಟರ್‌ ಹಾಲು ಉತ್ಪಾದನೆಯಾಗಿತ್ತು. ಈ ಪ್ರಸಕ್ತ ವರ್ಷದ ಜನವರಿಯಲಿ 55 ಸಾವಿರ, ಫೆಬ್ರುವರಿಯಲ್ಲಿ 56 ಸಾವಿರ, ಮಾರ್ಚ್ ತಿಂಗಳ ಆರಂಭದಲ್ಲಿ ಪ್ರತಿ ದಿನ ಸರಾಸರಿ 2500 ಲೀಟರ್ ಹಾಲು ಸಂಗ್ರಹವಾಗುತ್ತಿದೆ ಎಂದು ಅವರು ತಿಳಿಸಿದರು.

ADVERTISEMENT

‘ಕಲಬುರಗಿ–ಬೀದರ್‌ ಯಾದಗಿರಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾಗಿ ನಮ್ಮ ಭಾಗದಿಂದ ಕಕ್ಕೇರಾದ ಹನುಮಂತ್ರಾಯಗೌಡ ಪಾಟೀಲ ಅವರು ಆಯ್ಕೆಯಾದ ಬಳಿಕ  ಕಾಳಜಿ ವಹಿಸಿ ಗ್ರಾಮೀಣ ಭಾಗದ ಸಂಘಗಳನ್ನು ಆರಂಭಿಸಿ ಅವರಿಗೆ ಉತ್ತೇಜನ ನೀಡುತ್ತಿದ್ದಾರೆ’ ಎಂದು ನಿಂಗಾಪುರ ಗ್ರಾಮದ ಹಾಲು ಉತ್ಪಾದಕರಾದ ದೇವಮ್ಮ ಬಸಪ್ಪ ತಾಳಿಕೋಟಿ, ಲಕ್ಷ್ಮಿ ಅಯ್ಯಣ್ಣ ಚಿಂಚೋಡಿ ಹೇಳಿದರು.

ಬೈಲಕುಂಟಿ, ಕಡದರಾಳ, ನಿಂಗಾಪುರ ಸೇರಿದಂತೆ ಇತರ ಗ್ರಾಮಗಳಲ್ಲಿ ನಾಲ್ಕು ಮಹಿಳಾ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರು ಹಾಲು ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದಾರೆ.

ಹುಣಸಗಿ, ಕಕ್ಕೇರಾ, ನಾರಾಯಣಪುರ, ಐಬಿ ತಾಂಡಾ, ಜೋಗುಂಡಬಾವಿ, ಬರದೇವನಾಳ, ದ್ಯಾಮನಹಾಳ, ಕುಪ್ಪಿ, ಗುಳಬಾಳ, ಮಾಳನೂರು, ಎಣ್ಣಿವಡಗೇರಾ, ರಾಯನಗೋಳ, ಹನುಮಸಾಗರ, ಗೆದ್ದಲಮರಿ, ಕಡದರಾಳ, ಬೊಮ್ಮನಗುಡ್ಡ, ಬೈಲಕುಂಟಿ, ತೋಳದಿನ್ನಿ, ಹೊಂಬಳಕಲ್ಲ, ನಿಂಗಾಪುರ ಮುಂತಾದ ಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ.

ಫ್ಯಾಟ್ ಮತ್ತು ಡಿಗ್ರಿಗನುಗುಣವಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಬೈಲಕುಂಟಿ ಗ್ರಾಮದ ಗದ್ದೆಪ್ಪ ಸಾಲವಾಡಗಿ ತಿಳಿಸಿದರು.

‘ಆರ್ಥಿಕ ಭದ್ರತೆ ತಂದುಕೊಟ್ಟ ಹೈನುಗಾರಿಕೆ’

ಅನಾದಿ ಕಾಲದಿಂದಲೂ ಹೈನುಗಾರಿಗೆ ರೈತರ ಕೈಹಿಡಿಯುತ್ತಾ ಬಂದಿದ್ದು ಸದ್ಯದ ದಿನಮಾನದಲ್ಲಿ ಇದು ಆರ್ಥಿಕವಾಗಿ ಬಲ ಕೊಡುವ ಕಾಯಕವಾಗಿದೆ.  ಹೈನುಗಾರಿಕೆಯಲ್ಲಿ ತೊಡಗಿಕೊಂಡ ಕುಟುಂಬಗಳಿಗೆ ಆರ್ಥಿಕ ಭದ್ರತೆಯ ಜತೆಯಲ್ಲಿ ಕುಟುಂಬ ನಿರ್ವಹಣೆಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ರೈತರು ಹೈನುಗಾರಿಕೆಯನ್ನು ಮಾಡುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಳಾಗಬೇಕಿದೆ ಎಂದು  ಕಲಬುರಗಿ–ಬೀದರ್‌ ಯಾದಗಿರಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಹನುಮಂತ್ರಾಯಗೌಡ ಪಾಟೀಲ ಕಕ್ಕೇರಾ ಹೇಳಿದರು.

ಬರದ ಸಂದರ್ಭದಲ್ಲಿಯೂ ಹುಣಸಗಿ ಹಾಲು ಶೀತಲೀಕರಣ ಘಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಬರುತ್ತಿರುವುದು ಸಂತಸದ ಸಂಗತಿ. ಹೈನುಗಾರಿಕೆ ಸ್ವಾವಲಂಬನೆಯ ಸಂಕೇತವಾಗಿದೆ.
-ಹನುಮಂತ್ರಾಯಗೌಡ ಪಾಟೀಲ ನಿರ್ದೇಶಕ ಕಲಬುರಗಿ– ಯಾದಗಿರಿ–ಬೀದರ್‌ ಹಾಲು ಒಕ್ಕೂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.