ADVERTISEMENT

ಅಧಿಕ ಲಾಭ ಗಳಿಕೆಗೆ ವೈಜ್ಞಾನಿಕ ಕೃಷಿ; ಬಿ.ಸಿ.ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 5:25 IST
Last Updated 13 ಜನವರಿ 2022, 5:25 IST
ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಬುಧವಾರ ₹4.11ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡದ ಶಂಕು ಸ್ಥಾಪನೆಯನ್ನು ಕೃಷಿ ಸಚಿವ ಬಿ.ಸಿ ಪಾಟೀಲ ನೆರವೇರಿಸಿದರು. ಶಾಸಕ ಶರಣಬಸಪ್ಪ ದರ್ಶನಾಪುರ, ಸಂಸದ ರಾಜಾ ಅಮರೇಶ ನಾಯಕ ಇದ್ದರು
ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಬುಧವಾರ ₹4.11ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡದ ಶಂಕು ಸ್ಥಾಪನೆಯನ್ನು ಕೃಷಿ ಸಚಿವ ಬಿ.ಸಿ ಪಾಟೀಲ ನೆರವೇರಿಸಿದರು. ಶಾಸಕ ಶರಣಬಸಪ್ಪ ದರ್ಶನಾಪುರ, ಸಂಸದ ರಾಜಾ ಅಮರೇಶ ನಾಯಕ ಇದ್ದರು   

ಭೀಮರಾಯನಗುಡಿ (ಶಹಾಪುರ): ಕೃಷಿಕರು ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಗಳಿಸಲು ವೈಜ್ಞಾನಿಕ ಬೇಸಾಯ ಹಾಗೂ ಕನಿಷ್ಠ ನೀರಿನಲ್ಲಿ ಅಧಿಕ ಬೆಳೆ ಬೆಳೆಯುವ ಪದ್ಧತಿಗಳನ್ನು ಅಳವಡಿಸಿ ಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಸಲಹೆ ನೀಡಿದರು.

ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದ ಆವರಣ ದಲ್ಲಿ ಬುಧವಾರ ₹4.11 ಕೋಟಿ ವೆಚ್ಚದ ವಿದ್ಯಾರ್ಥಿ ವಸತಿ ನಿಲಯದ ಕಟ್ಟಡ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಹೆಚ್ಚಾಗಿ ಭತ್ತ ಬೆಳೆಯುತ್ತಿದ್ದಾರೆ. ಇದರಿಂದ ಜಮೀನು ತನ್ನ ಫಲವತ್ತತೆ ಕಳೆದುಕೊಂಡುಸವಳು ಜವಳು ಭೂಮಿಯಾಗುತ್ತಿದೆ. ಭತ್ತ ಬೆಳೆದ ಯಾವ ರೈತರು ಶ್ರೀಮಂತರಾಗಿಲ್ಲ. ಅಲ್ಲದೆ, ಜಮೀನಿನಲ್ಲಿನ ಲವಣಾಂಶಗಳು ಕಡಿಮೆಯಾಗುತ್ತವೆ. ಈಗಾಗಲೇ ಕೃಷಿ ವಿಜ್ಞಾನಿಗಳಿಗೆ ಸೂಚನೆ ನೀಡಿದ್ದು, ಸವಳು ಜವಳು ಭೂಮಿ ಕಡಿಮೆ ಮಾಡಲು ಯಾವ ಕ್ರಮಗಳು ತೆಗೆದುಕೊಳ್ಳಬೇಕು ಎಂಬುವುದರ ಬಗ್ಗೆ ಅವರು ಸೂಚನೆ ನೀಡುವರು’ ಎಂದರು.

ADVERTISEMENT

‘ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ದಲ್ಲಾಳಿಗಳಿಂದ ಮುಕ್ತಿ ಹೊಂದಲು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು. ಕೃಷಿಯ ಉಪ ಕಸುಬುಗಳಾದ ಕುರಿ ಸಾಕಾಣಿಕೆ, ಜೇನು, ಮೀನು, ಹೈನುಗಾರಿಕೆಯಂತಹ ಪರ್ಯಾಯ ವ್ಯವಸ್ಥೆ ಮಾಡಿಕೊಂಡರೇ ಆರ್ಥಿಕ ನಷ್ಟದಿಂದ ಹೊರ ಬರಲು ಸಾಧ್ಯ' ಎಂದು ಹೇಳಿದರು.

ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿ, ‘ಜಿಲ್ಲೆಗೆ ಇಂದಿಗೂ ಬೆಳೆ ಪರಿಹಾರ ಬಂದಿಲ್ಲ. ಬ್ಯಾಂಕ್‌ನಲ್ಲಿ ರೈತರಿಗೆ ಬೆಳೆ ಸಾಲದ ಪ್ರಮಾಣವನ್ನು ಎಕರೆಗೆ ₹1 ಲಕ್ಷಕ್ಕೆ ಹೆಚ್ಚಿಸಬೇಕು. ಬೆಳೆ ಮಾರುಕಟ್ಟೆಗೆ ಬರುವ ಮುಂಚಿತವಾಗಿ ಖರೀದಿ ಕೇಂದ್ರ ಸ್ಥಾಪಿಸಬೇಕು. ಕೃಷಿ ಕಾರ್ಖಾನೆಯಾಗಿ ರೂಪಾಂತರಗೊಳ್ಳಬೇಕು. ರೈತರು ಸಂಕಷ್ಟದಿಂದ ಪಾರಾಗಲು ಬೆಂಬಲ ಬೆಲೆ ನೀಡಬೇಕು’ ಎಂದು ಅವರು ಆಗ್ರಹಿಸಿದರು.

ರಾಯಚೂರು ಸಂಸದ ರಾಜಾ ಅಮರೇಶ ನಾಯಕ, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್ ಕಟ್ಟಿಮನಿ, ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್., ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಮಲ್ಲಿಕಾರ್ಜುನ ಚಿಲ್ಲಾಳ, ಕಾಲೇಜು ಮುಖ್ಯಸ್ಥ ಡಾ.ಎ.ಎಸ್. ಚೆನ್ನಬಸವಣ್ಣ, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ತ್ರಿವಿಕ್ರಮ ಜೋಶಿ, ಕೊಟ್ರೆಪ್ಪ ಕೊರೇರ್, ಮಹಾಂತೇಶಗೌಡ ಪಾಟೀಲ, ಶ್ರೀಧರ ಕೆಸರಟ್ಟಿ, ಡಾ.ಎಂ.ಬಿ ಪಾಟೀಲ, ಜಂಟಿ ಕೃಷಿ ನಿರ್ದೇಶಕ ಅಬಿದ ಎಸ್.ಎಸ್., ಬಿಜೆಪಿ ಮುಖಂಡರಾದ ಗುರು ಕಾಮಾ, ರಾಜೂಗೌಡ ಉಕ್ಕಿನಾಳ, ಮರೆಪ್ಪ ಪ್ಯಾಟಿ ಶಿರವಾಳ, ಮಲ್ಲಿಕಾರ್ಜುನ ಕಂದಕೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.