ADVERTISEMENT

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ: ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 3:27 IST
Last Updated 13 ಜನವರಿ 2021, 3:27 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಯಾದಗಿರಿ: ‘ಸಂಪುಟ ವಿಸ್ತರಣೆ ಇರಲಿ ಅಥವಾ ಪುನರ್ ರಚನೆ ಇರಲಿ ಇದು ಮುಖ್ಯಮಂತ್ರಿಯವರ ಪರಮಾಧಿಕಾರ. ಪಕ್ಷ ಬಿಟ್ಟು ಬಂದವರಿಗೆ ಸಚಿವ ಸ್ಥಾನ ನೀಡೋದು ನನಗೆ ಮಾಹಿತಿ ಇಲ್ಲ. ಆದರೆ, ಸಿಎಂ ಬದಲಾವಣೆ ಇಲ್ಲ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ನಗರದಲ್ಲಿ ಬಿಜೆಪಿ ಆಯೋಜಿಸಿದ್ದ ಜನಸೇವಕ ಸಮಾವೇಶಕ್ಕೆ ಪಾಲ್ಗೊಳ್ಳಲು ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಮಾಡಲು ಹೊರಟಿದ್ದಾರೆ. ಇಂಥ ಸಮಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಲೋಚನೆ ಮಾಡುವುದಕ್ಕೂ ಸಾಧ್ಯವಿಲ್ಲ. ಮಾಡುವುದು ಅವಶ್ಯವಿಲ್ಲ’ ಎಂದರು.

ADVERTISEMENT

‘ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಯುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ವಕ್ತಾರರಾ ಅಥವಾ ಹೈಕಮಾಂಡ’ ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಹೇಳುವುದು ನೀವು ನಂಬುವೀದಾದರೆ ನಂಬಿ. ಸಿಎಂ ಬದಲಾವಣೆ ಯಾವುದೇ ಕಾರಣಕ್ಕೂ ಇಲ್ಲ. ಸಿದ್ದರಾಮಯ್ಯ ಅವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮಾತಾಡಲು ವಿಷಯ ಇಲ್ಲ. ಹೀಗಾಗಿ ಅನಿವಾರ್ಯವಾಗಿ ಬೆಳಿಗ್ಗೆಯಿಂದ ಸಂಜೆ ತನಕ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಸಿಎಂ ಖುರ್ಚಿ ಖಾಲಿ ಇಲ್ಲ’ ಎಂದರು.

ಸಚಿವ ಸ್ಥಾನದಿಂದ ನನ್ನ ಕೈಬಿಡಲ್ಲ: ಪ್ರಭು ಚವ್ಹಾಣ
ಯಾದಗಿರಿ: ‘30 ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದು, ನನ್ನ ಮಾಹಿತಿ ಪ್ರಕಾರ ಸಚಿವ ಸಂಪುಟ ಪುನರ್ ರಚನೆ ಇಲ್ಲ. ವಿಸ್ತರಣೆ ಆಗುತ್ತದೆ. ಕಳೆದ ಆರು ತಿಂಗಳಿನಿಂದ ಸಂಪುಟದಿಂದ ಕೈಬಿಡ್ತಾರೆ ಎನ್ನುವ ವಿಚಾರ ಕೇಳಿ ಬರುತ್ತಿದ್ದು, ನನ್ನನ್ನು ಕೈ ಬಿಡುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿದರು.

ಸಂಕ್ರಾಂತಿಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಸಂಪುಟದಿಂದ ಕೈಬಿಟ್ಟರೆ ಬಿಡಲಿ ನನಗೇನು ಅಭ್ಯಂತರವಿಲ್ಲ. ಸಾಮಾನ್ಯ ಕಾರ್ಯಕರ್ತ ಕೆಲಸ ಮಾಡುತ್ತೇನೆ. ಸಚಿವನಾಗಿ ಮುಂದುವರೆಸಿದರೆ ಜನ ಸೇವೆ ಮಾಡುತ್ತೇನೆ ಎಂದರು.

ನೂರಕ್ಕೆ ನೂರಷ್ಟು ನನ್ನನ್ನು ಕೈಬಿಡುವುದಿಲ್ಲ ಎನ್ನುವ ವಿಶ್ವಾಸವಿದೆ. ಒಂದು ವೇಳೆ ಕೈ ಬಿಟ್ಟರೆ ಯಾವುದೇ ತೊಂದರೆ ಇಲ್ಲ. ನಾನು ಹಿಂದೆಯು ಕಾರ್ಯಕರ್ತನಾಗಿದ್ದೆ. ಮುಂದೆಯು ಕಾರ್ಯಕರ್ತನಾಗಿರುತ್ತೇನೆ ಎಂದರು.

ನಾನು ಒಳ್ಳೆಯ ಕೆಲಸ ಮಾಡಿದ್ದೇನೆ. ನನಗೆ ಯಾಕೆ ಸಂಪುಟದಿಂದ ಕೈಬಿಡುತ್ತಾರೆ. ಇದೆಲ್ಲ ಊಹಾಪೋಹವಷ್ಟೆ. ಸಂಪುಟದಿಂದ ಎಚ್.ನಾಗೇಶ್ ಅವರಿಗೆ ಕೈಬಿಡುವ ವಿಚಾರ ನನಗೆ ಗೊತ್ತಿಲ್ಲ. ಖಾಲಿ ಇರುವ ಸ್ಥಾನಗಳನ್ನು ಯಾರಿಗೆ ನೀಡುತ್ತಾರೆ ಎನ್ನುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.