ಯಾದಗಿರಿ: ‘ಜಿಲ್ಲೆಯ ಅಭಿವೃದ್ದಿಗೆ ನನ್ನ ಇಲಾಖೆಯಿಂದ ಮತ್ತು ಸಚಿವನಾಗಿ ನಿಮ್ಮೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಸದಾ ಕೈಜೋಡಿಸುವೆ’ ಎಂದು ಎಂದು ಪ್ರಾಥಮಿಕ ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಭರವಸೆ ನೀಡಿದರು.
ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿ ನಂತರ ಜಿಲ್ಲಾ ಬಿಜೆಪಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ನಾನು ಉಸ್ತುವಾರಿ ಸಚಿವನಾಗಲಿ ಬಿಡಲಿ, ಜಿಲ್ಲೆಯ ಅಭಿವೃದ್ಧಿಗೆ ಸದಾ ನಿಮ್ಮೊಂದಿಗಿರುವೆ. ಸರ್ಕಾರದ ಆದೇಶದ ಭಾಗವಾಗಿ ಇಲ್ಲಿಗೆ ಕೋವಿಡ್ ಮತ್ತು ಪ್ರವಾಹ ಪರಿಸ್ಥಿತಿ ಅವಲೋಕಿಸಿ ಸರ್ಕಾರಕ್ಕೆ ವರದಿ ಮುಟ್ಟಿಸಲು ಬಂದಿದ್ದೇನೆ. ಹೊರಗಡೆ ಸಚಿವನಾದರೆ ಪಕ್ಷದ ಕಚೇರಿಯಲ್ಲಿ ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ. ಪಕ್ಷಕ್ಕಾಗಿ ಅನೇಕರು ತ್ಯಾಗ, ಬಲಿದಾನ ನೀಡಿದ್ದಾರೆ. ಅದರಲ್ಲಿ ಮೊದಲಿಗೆ ಎಲ್.ಕೆ. ಅಡ್ವಾಣಿಯವರು ಪಕ್ಷಕ್ಕೆ ದೊಡ್ಡ ತ್ಯಾಗ ಮಾಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರು ಇಡೀ ರಾಜ್ಯದ ಉದ್ದಗಲಕ್ಕೆ ಸಂಚರಿಸಿ ಪಕ್ಷವನ್ನು ದೊಡ್ಡ ಪ್ರಮಾಣದಲ್ಲಿ ಕಟ್ಟಿ ಬೆಳೆಸಿದ್ದಾರೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಪರವಾಗಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್ ಸಚಿವರನ್ನು ಸನ್ಮಾನಿಸಿ ಪ್ರಸ್ತಾವಿಕವಾಗಿ ಮಾತನಾಡಿ,ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವಲ್ಲಿ ಕಾರ್ಯಕರ್ತರು ಮತ್ತು ಎಲ್ಲ ಮುಖಂಡರು ಹೆಚ್ಚಿನ ಕೆಲಸ ಮಾಡಬೇಕಾಗಿ ಹೇಳಿದರು.
ಶಾಸಕ ರಾಜೂಗೌಡ ಮಾತನಾಡಿ, ಸಚಿವ ನಾಗೇಶ್ ಅವರು ಪಕ್ಷದ ಉತ್ತಮ ಕಾರ್ಯಕರ್ತರಾಗಿದ್ದು, ಸರಳ ವ್ಯಕ್ತಿಯಾಗಿದ್ದಾರೆ. ಅಂಥವರನ್ನು ಗುರುತಿಸಿ ಪಕ್ಷ ಅವರಿಗೆ ಸಚಿವ ಸ್ಥಾನ ನೀಡಿದೆ ಎಂದು ಹೇಳಿದರು.
ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಭೀಮರಾಯನಗುಡಿ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ರಾಜ್ಯ ವಿಶೇಷ ಆಹ್ವಾನಿತರಾದ ನಾಗರತ್ನ ಕುಪ್ಪಿ, ಸಾಯಿಬಣ್ಣ ಬೋರಬಂಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರನಾಥ ನಾದ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಚಂದ್ರಶೇಖರಗೌಡ ಮಾಗನೂರ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಲಲಿತಾ ಅನಪುರ, ನಗರ ಮಂಡಲ ಅಧ್ಯಕ್ಷ ಸುರೇಶ್ ಅಂಬಿಗೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ಶರಣು ಆಶನಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.