
ವಡಗೇರಾ: ‘ಬಡವರ ಸೇವೆಯೇ ಭಗವಂತನ ಸೇವೆ. ಸರ್ಕಾರದ ವಿವಿಧ ಸೌಲಭ್ಯಗಳನ್ನು ಕಡು ಬಡವರಿಗೆ ಒದಗಿಸಲು ಪ್ರತಿಯೊಬ್ಬ ಸರ್ಕಾರಿ ನೌಕರರು ಶ್ರಮಿಸಬೇಕು ’ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು
ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ವಡಗೇರಾ ತಾಪಂ ವತಿಯಿಂದ ಆಯೋಜಿಸಿದ್ದ ನಾರಿ ಕಿಲ್ಫ್ ಯೋಜನೆ ಅಡಿಯಲ್ಲಿ ಅತೀ ಬಡವರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ವಿಶೇಷ ಮೇಳ ಹಾಗೂ ವಿವಿಧ ಇಲಾಖೆಯ ವತಿಯಿಂದ ಪ್ರದರ್ಶನಕ್ಕೆ ಇಟ್ಟ ವಸ್ತುಗಳ ಹಾಗೂ ಆಹಾರದ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸರ್ಕಾರದ ಯೋಜನೆಗಳು ಕಡು ಬಡವರಿಗೆ ತಲುಪಬೇಕಾದರೆ ಗ್ರಾಪಂ ಪಿಡಿಒ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮಗಳಲ್ಲಿ ಬಡಾವಣೆಗಳಲ್ಲಿ ಜನರಲ್ಲಿ ಜಾಗೃತಿಯನ್ನು ಮೂಡಿಸಿದಾಗ ಮಾತ್ರ ನೈಜ ಫಲಾನುಭವಿಗಳಿಗೆ ತಲುಪುತ್ತವೆ’ ಎಂದು ತಿಳಿಸಿದರು.
‘ವಡಗೇರಾ ತಾಲ್ಲೂಕು ಅಭಿವೃದ್ಧಿ ಪಡಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಹಂತ ಹಂತವಾಗಿ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿಯನ್ನು ಪಡಿಸಿ ಜಿಲ್ಲೆಯಲ್ಲಿಯೆ ಮಾದರಿಯ ತಾಲ್ಲೂಕು ಕೇಂದ್ರ ಮಾಡಲಾಗವುದು’ ಎಂದರು.
‘ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಕಾರ್ಯವನ್ನು ನಿರ್ವಹಿಸಿದಾಗ ಹಾಗೂ ಸರ್ಕಾರದ ಯೋಜನೆಗಳನ್ನು ಜಾರಿಗೆ ತರಲು ಸಹಕಾರ ನೀಡಿದಾಗ ಮಾತ್ರ ಸರ್ಕಾರದ ಹಾಗೂ ಅಧಿಕಾರಿಗಳು ಖ್ಯಾತಿ ಹೆಚ್ಚುತ್ತದೆ’ ಎಂದು ಅಭಿಪ್ರಾಯ ಪಟ್ಟರು.
ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಓರಡಿಯಾ ಮಾತನಾಡಿ, ‘ಹಿರಿಯ ನಾಗರೀಕರಿಗೆ, ತೃತಿಯ ಲಿಂಗಿಗಳಿಗೆ, ಸಕಾಲದಲ್ಲಿ ಸರ್ಕಾರಿ ಸೌಲಭ್ಯಗಳು ತಲುಪಿಸಲು ಸರ್ಕಾರದ ಯೋಜನೆಗಳನ್ನು ಪಡೆಯಬೇಕಾದರೆ ದಾಖಲೆ ಹಾಗೂ ಪ್ರಮಾಣ ಪತ್ರಗಳು ಬೇಕಾಗುತ್ತವೆ ಜನ ಸಾಮಾನ್ಯರು ಅಲೆಯಬಾರದು ಎಂಬ ಉದ್ದೇಶದಿಂದ ಒಂದೇ ಸೂರಿನ ಅಡಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಪ್ರಮಾಣ ಪತ್ರಗಳನ್ನು ಹಾಗೂ ಇನ್ನಿತರ ದಾಖಲೆಗಳನ್ನು ಒದಗಿಸಲಾಗುತ್ತದೆ’ ಎಂದು ಹೇಳಿದರು.
‘ಗುರಮಿಠಕಲ್ ಹಾಗೂ ವಡಗೇರಾ ತಾಲ್ಲೂಕಿನಲ್ಲಿ ಸುಮಾರು 2 ಸಾವಿರ ಜನರ ಹತ್ತಿರ ಯಾವುದೆ ದಾಖಲೆಗಳು ಇಲ್ಲ. ಇದರಿಂದ ಇವರೆಲ್ಲಾ ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ . ಮುಂಬರುವ ದಿನಗಳಲ್ಲಿ ಇವರೆಲ್ಲರೂ ಸರ್ಕಾರದ ಸೌಲಭ್ಯಗಳನ್ನು ಪಡೆಯವಂತೆ ಕ್ರಮಗಳನ್ನು ಕೈಗೊಳ್ಳಲು ತಾಪಂ ಇಒ ಮಲ್ಲಿಕಾರ್ಜುನ ಸಂಗ್ವಾರ ಶ್ರಮಿಸುತ್ತಿರುವದು ಶ್ಲಾಘನೀಯ’ ಎಂದರು.
ಪ್ರಾಸ್ತಾವಿಕವಾಗಿ ತಾಪಂ ಇಒ ಮಲ್ಲಿಕಾರ್ಜುನ ಸಂಗ್ವಾರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಗ್ರಾ.ಅ.ಪಂ.ರಾಜ್ ಇಲಾಖೆ, ಕೃಷಿ, ಶಿಕ್ಷಣ, ಆರೋಗ್ಯ, ಪಶುವೈದ್ಯಕೀಯ, ಶಿಶು ಅಭಿವೃದ್ಧಿ, ಅಂಗವಿಕಲರ ಕಲ್ಯಾಣ, ವಸತಿ ಶಿಕ್ಷಣ, ತೋಟಗಾರಿಕೆ ಇಲಾಖೆಯ ಸಿಬ್ಬಂದಿಗೆ ಸನ್ಮಾನಿಸಿ ಗೌರವ ಕಾಣಿಕೆಯನ್ನು ನೀಡಲಾಯಿತು.
ಜಿಪಂ ಯೋಜನಾ ನಿರ್ದೇಶಕರಾದ ಸಿಬಿ ದೇವರಮನಿ, ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷ ಖಾಜಾಮೈನೋದ್ದೀನ್ ಮಿರ್ಚಿ, ಜಿ.ಸ.ನೌ.ಸಂ ಅಧ್ಯಕ್ಷ ರಾಯಪ್ಪಗೌಡ ಹುಡೇದ, ತಾಲ್ಲೂಕು ಆರೋಗ್ಯಾಧಿಕಾರಿ ರಮೇಶ ಗುತ್ತೇದಾರ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ರಿಯಾಜ ಪಟೇಲ್ ವರ್ಕನಳ್ಳಿ ಮಾಡಿದರು. ಶರಣಪ್ಪ ಅಭಿನಂದಿಸಿದರು.
ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಪ್ರತಿಯೊಬ್ಬರ ಬ್ಯಾಣಕ್ ಖಾತೆಗೆ ₹ 15 ಲಕ್ಷ ಹಾಕುವುದಾಗಿ ಸುಳ್ಳು ಹೇಳಿದರು. ಆದರೆ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯ ಘೋಷಣೆಯಂತೆ ಪಂಚ ಗ್ಯಾರಂಟಿ ಜಾರಿಗೆ ತಂದಿದೆಚನ್ನಾರಡ್ಡಿ ಪಾಟೀಲ್ ತುನ್ನೂರು ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.