ADVERTISEMENT

ಕೋವಿಡ್ ಆರೈಕೆ ಕೇಂದ್ರಕ್ಕೆ ಶಾಸಕರ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಮೇ 2021, 16:33 IST
Last Updated 27 ಮೇ 2021, 16:33 IST
ಸೈದಾಪುರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತೆರೆಯಲಾದ ಕೋವಿಡ್ ಆರೈಕೆ ಕೇಂದ್ರವನ್ನು ಶಾಸಕ ನಾಗನಗೌಡ ಕಂದಕೂರು ಅವರು ಗುರುವಾರ ಉದ್ಘಾಟಿಸಿದರು
ಸೈದಾಪುರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತೆರೆಯಲಾದ ಕೋವಿಡ್ ಆರೈಕೆ ಕೇಂದ್ರವನ್ನು ಶಾಸಕ ನಾಗನಗೌಡ ಕಂದಕೂರು ಅವರು ಗುರುವಾರ ಉದ್ಘಾಟಿಸಿದರು   

ಸೈದಾಪುರ: ಲಾಕ್‍ಡೌನ ಕಾರಣದಿಂದ ನಗರಗಳಿಗೆ ಗುಳೆ ಹೋಗಿದ್ದವರು ಹಳ್ಳಿಗಳಿಗೆ ವಾಪಸ್‌ ಆಗಿದ್ದರಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗ್ರಾಮೀಣ ಜನರು ಕೋವಿಡ್ ಮುಂಜಾಗ್ರತ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ತಿಳಿಸಬೇಕು ಎಂದು ಶಾಸಕ ನಾಗನಗೌಡ ಕಂದಕೂರು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ 10 ಆಮ್ಲಜನಕ ಸಹಿತ ಬೆಡ್ ಹಾಗೂ ಆಮ್ಲಜನಕ ರಹಿತ 10 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಕೊರೊನಾ ಪಾಸಿಟಿವ್ ಬಂದವರು ಮನೆಯಲ್ಲಿ ಹೋಂ ಕ್ವಾರಂಟೈನ್ ಆಗದೆ ಆರೈಕೆ ಕೇಂದ್ರಕ್ಕೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಆರೋಗ್ಯ ಇಲಾಖೆಯವರು ಮನವೊಲಿಸಬೇಕು. ಹಳ್ಳಿಗಳಲ್ಲಿ ಜನರಿಗೆ ಕೋವಿಡ್ ಲಕ್ಷಣಗಳಿದ್ದರೂ ಟೆಸ್ಟ್ ಮಾಡಿಸಿಕೊಳ್ಳಲು ಹೆದರಿಕೊಂಡು ಆಸ್ಪತ್ರೆಗೆ ಬರುತ್ತಿಲ್ಲ. ಇದರಿಂದ ಇವತ್ತು ಇದ್ದವರು ನಾಳೆ ಇಲ್ಲದಂತಾಗುತ್ತಿದೆ. ಆದ್ದರಿಂದ ಆರೋಗ್ಯ ಇಲಾಖೆಯವರು ಮನೆಗಳಿಗೆ ತೆರಳಿ ಟೆಸ್ಟ್ ಮಾಡಬೇಕು. ಯುವಕರು ಅನವಶ್ಯಕವಾಗಿ ಹೊರಗಡೆ ತಿರುಗಾಡಬೇಡಿ. ಮದುವೆ, ಗೃಹ ಪ್ರವೇಶಗಳಂತಹ ಸಾಮೂಹಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ನಿಮ್ಮ ಮನೆಯಲ್ಲಿ ಮುಂಜಾಗ್ರತ ಕ್ರಮಗಳನ್ನು ನೀವು ಪಾಲಿಸುವುದರ ಜೊತೆಗೆ ನಿಮ್ಮ ಅಕ್ಕಪಕ್ಕದವರೂ ಪಾಲಿಸುವಂತೆ ತಿಳುವಳಿಕೆ ನೀಡಬೇಕು ಎಂದು ಸೂಚಿಸಿದರು.

ADVERTISEMENT

ಗುರುಮಠಕಲ್ ಕ್ಷೇತ್ರದ ಆಸ್ಪತ್ರೆಗಳಲ್ಲಿ ಶೇ50 ರಷ್ಟು ವೈದ್ಯರ ಕೊರತೆಯನ್ನು ಕಾಣುತ್ತೇವೆ. ಈಗಾಗಲೇ ವೈದ್ಯರ ನೇಮಕಾತಿ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಜೊತೆ ಚರ್ಚಿಸಿ ಈ ಭಾಗದ ಎಲ್ಲಾ ಆಸ್ಪತ್ರೆಗಳಲ್ಲಿ ನುರಿತ ತಜ್ಞ ವೈದ್ಯರನ್ನು ನಿಯೋಜಿಸುವಂತೆ ಮನವಿ ಮಾಡುತ್ತೇನೆ ಎಂದು ಶಾಸಕರು ತಿಳಿಸಿದರು.

ಜಿಲ್ಲಾ ವೈದ್ಯಾಧಿಕಾರಿ ಇಂದುಮತಿ ಕಾಮಶೆಟ್ಟಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ಹಣಮಂತರಾಯ, ಡಾ. ಸತ್ಯಪ್ರಸಾದ, ತಾಲ್ಲೂಕು ದಂಡಾಧಿಕಾರಿ ಚೆನ್ನಮಲ್ಲಪ್ಪ ಘಂಟಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಬೈ,ಕಂದಾಯ ನಿರೀಕ್ಷ ಮುಸ್ತಾಫ್, ಮಾಜಿ ಎಪಿಎಂಸಿ ಅಧ್ಯಕ್ಷ ಭೀಮಣ್ಣಗೌಡ ಕ್ಯಾತನಾಳ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಳಪ್ಪ ಅರಿಕೇರಿ, ಬಸವಂತರಾಯಗೌಡ ಸೈದಾಪುರ, ರಾಜೇಶ ಉಡುಪಿ, ನರಸಪ್ಪ ಕವಡೆ ಬದ್ದೇಪಲ್ಲಿ, ಚಂದ್ರುಗೌಡ, ಶರಣಗೌಡ ಕ್ಯಾತನಾಳ, ದೇವು ಘಂಟಿ ಬಾಡಿಯಾಳ, ವೆಂಕಟೇಶ ಗಡದ ರಾಘವೇಂದ್ರ ಕಲಾಲ್, ಲಕ್ಷ್ಮಣ ನಾಯಕ ಕೂಡ್ಲೂರು ಸೇರಿದಂತೆ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.