ADVERTISEMENT

ಎಇ ಮೊಬೈಲ್ ಹ್ಯಾಕ್: ₹4.90 ಲಪಟಾಯಿಸಿದ ವಂಚಕರು

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 8:25 IST
Last Updated 29 ಜನವರಿ 2026, 8:25 IST
ಅಮೆಜಾನ್‍ ಕಂಪೆನಿಗೆ ಮೋಸ ಮಾಡಿ ಹಣ ಲಪಟಾಯಿಸಿದ ಯುವಕನ ಬಂಧನ
ಅಮೆಜಾನ್‍ ಕಂಪೆನಿಗೆ ಮೋಸ ಮಾಡಿ ಹಣ ಲಪಟಾಯಿಸಿದ ಯುವಕನ ಬಂಧನ   

ಯಾದಗಿರಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಎಂಜಿನಿಯರ್ (ಎಇ) ಒಬ್ಬರ ಮೊಬೈಲ್ ಹ್ಯಾಕ್‌ ಮಾಡಿದ ಆನ್‌ಲೈನ್‌ ವಂಚಕರು ₹4.90 ಲಕ್ಷ ಲಪಟಾಯಿಸಿದ್ದಾರೆ.

ನಗರದ ಸ್ಟೇಷನ್ ಏರಿಯಾ ನಿವಾಸಿ ಸಹಾಯಕ ಎಂಜಿನಿಯರ್ ರಾಜಕುಮಾರ ದೇವಿಂದ್ರಪ್ಪ ಹಣ ಕಳೆದುಕೊಂಡವರು. ಯಾದಗಿರಿ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜಕುಮಾರ ಅವರು ಡಿಜಿಟಲ್ ಪಾವತಿ ಆ್ಯಪ್‌ಗಳನ್ನು ಬಳಸುತ್ತಿದ್ದು, ಅವುಗಳಿಗೆ ಮಾಸಿಕ ವೇತನ ಜಮೆಯಾಗುವ ಬ್ಯಾಂಕ್ ಖಾತೆಯನ್ನು ಜೋಡಣೆ ಮಾಡಿದ್ದರು. ಆನ್‌ಲೈನ್ ವಂಚಕರು ಅವರ ಮೊಬೈಲ್‌ಗೆ ದೋಷಪುರಿತ ಆ್ಯಪ್‌ ಒಂದನ್ನು ಕಳುಹಿಸಿದ್ದರು. ಜ.21ರ ರಾತ್ರಿ 11ರ ಸುಮಾರಿಗೆ ನಿರಂತರವಾಗಿ ಒಟಿಪಿ ಬಂದಿದ್ದು, ಅದನ್ನು ನಿರ್ಲಕ್ಷಿಸಿ ನಿದ್ರೆಗೆ ಜಾರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮರುದಿನ ಬೆಳಿಗ್ಗೆ 8ರ ಸುಮಾರಿಗೆ ಹಲವು ಒಟಿಪಿಗಳು ಬಂದಿದ್ದವು. ಇದರಿಂದ ಅನುಮಾನ ಬಂದು ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಪರಿಶೀಲಿಸಿದಾಗ ₹4.90 ಲಕ್ಷ ಬಳಕೆದಾರರ ಗಮನಕ್ಕೆ ಬಾರದಂತೆ ಬೇರೊಂದು ಖಾತೆಗೆ ವರ್ಗಾವಣೆ ಮಾಡಿ ವಂಚಿಸಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ದೀಪ ತಗಲಿ ಬಾಲಕಿ ಸಾವು

ಯಾದಗಿರಿ: ಪೂಜೆಗೆ ಇರಿಸಿದ್ದ ದೀಪ ಬಾಲಕಿಯ ಮೈಮೇಲಿನ ಬಟ್ಟೆಗೆ ತಗುಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾಳೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ದಂಡಗುಂಡ ಮೂಲದ ಚನ್ನಪ್ಪ ಹುಳಗೋಳ ಅವರ ಪುತ್ರಿ ಭೂಮಿಕಾ (6) ಮೃತ ಬಾಲಕಿ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚನ್ನಪ್ಪ ಅವರ ಮಗಳು ಮುಂಡರಗಿಯ ಸಂಬಂಧಿಕರ ಮನೆಯ ಗೃಹ ಪ್ರವೇಶಕ್ಕೆ ತಾಯಿಯೊಂದಿಗೆ ಬಂದಿದ್ದಳು. ರಾತ್ರಿ 9ರ ಸುಮಾರಿಗೆ ಮನೆಯ ಸದಸ್ಯರು ಹೊರಗಡೆ ಮಾತನಾಡುತ್ತಾ ಕುಳಿತಿದ್ದರು. ಬಾಳೆಹಣ್ಣು ತರುವುದಾಗಿ ಮನೆಯೊಳಗೆ ಹೋದ ಭೂಮಿಕಾಗೆ ಪೂಜೆಗೆ ಇರಿಸಿದ್ದ ದೀಪದ ಬೆಂಕಿ ಮೈಮೇಲಿನ ಬಟ್ಟೆಗೆ ತಗುಲಿತ್ತು. ಚಿರಾಡುವ ಸದ್ದು ಕೇಳುತ್ತಿದ್ದಂತೆ ಓಡಿ ಬಂದು ರಕ್ಷಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಭೂಮಿಕಾಳನ್ನು ಕಲಬುರಗಿಯ ಜಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಜನವರಿ 26ರಂದು ಮೃತಪಟ್ಟಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.