ADVERTISEMENT

ಮುಂಗಾರು ಹಂಗಾಮು: ಬಿತ್ತನೆ ಬೀಜದ ದಾಸ್ತಾನು

ಈ ಬಾರಿ 3.92 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ, ಬೀಜ, ರಸಗೊಬ್ಬರ ಕೊರತೆ ಇಲ್ಲ: ಜೆಡಿ

​ಪ್ರಜಾವಾಣಿ ವಾರ್ತೆ
Published 25 ಮೇ 2021, 17:07 IST
Last Updated 25 ಮೇ 2021, 17:07 IST
ದೇವಿಕಾ ಆರ್
ದೇವಿಕಾ ಆರ್   

ಯಾದಗಿರಿ: 2021-22ನೇ ಸಾಲಿನ ಮುಂಗಾರು ಹಂಗಾಮು ಮೇ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, 3,92,799 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಮ್ಮಿಕೊಳ್ಳಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್ ತಿಳಿಸಿದ್ದಾರೆ.

ಹತ್ತಿ 1,56,467 ಹೆಕ್ಟೇರ್, ಭತ್ತ 8,700 ಹೆಕ್ಟೇರ್, ತೊಗರಿ 1,10,890 ಹೆಕ್ಟೇರ್, ಹೆಸರು 22,500 ಹೆಕ್ಟೇರ್, ಸಜ್ಜೆ 10,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮುಂಗಾರು ಹಂಗಾಮಿಗೆ ಬೇಕಾಗುವ ಬಿತ್ತನೆ ಬೀಜದ ಸಿದ್ಧತೆಯನ್ನು ಇಲಾಖೆಯಿಂದ ಮಾಡಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ ಹಾಗೂ ಖಾಸಗಿ ಬೀಜ ಮಾರಾಟ ಮಳಿಗೆಗಳಲ್ಲಿ ಬಿತ್ತನೆ ಬೀಜದ ದಾಸ್ತಾನು ಮಾಡಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ 3,870 ಕ್ವಿಂಟಲ್, ರಾಷ್ಟ್ರೀಯ ಬೀಜ ನಿಗಮದಲ್ಲಿ 4,000 ಕ್ವಿಂಟಲ್‌, ಖಾಸಗಿ ಮಾರಾಟಗಾರ ಬಳಿ 3,800 ಕ್ವಿಂಟಲ್ ಒಟ್ಟಾರೆಯಾಗಿ 11,670 ಕ್ವಿಂಟಲ್ ವಿವಿಧ ಬೆಳೆಗಳ ಬಿತ್ತನೆ ಬೀಜದ ದಾಸ್ತಾನು ಮಾಡಲಾಗಿದ್ದು, ಯಾವುದೇ ಬೀಜದ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ.

ಮುಂಗಾರು ಹಂಗಾಮಿಗೆ 46,588 ಟನ್ ಯೂರಿಯಾ, 25,912 ಟನ್ ಡಿಎಪಿ, 57,010 ಟನ್ ಕಾಂಪ್ಲೆಕ್ಸ್‌, 3,774 ಟನ್ ಎಂಒಪಿ, 104 ಟನ್ ಎಸ್‌ಎಸ್‌ಪಿ ಹೀಗೆ ಒಟ್ಟಾರೆ 1,33,388 ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆ ಇರುತ್ತದೆ. ಈಗಾಗಲೇ 25,841 ಟನ್ ಯೂರಿಯಾ 2,871 ಟನ್ ಡಿಎಪಿ, 16,956 ಟನ್ ಕಾಂಪ್ಲೆಕ್ಸ್, 2,284 ಟನ್ ಎಂಒಪಿ ಹೀಗೆ ಒಟ್ಟಾರೆಯಾಗಿ 48,394 ಮೆಟ್ರಿಕ್ ಟನ್ ರಸಗೊಬ್ಬರದ ದಾಸ್ತಾನನ್ನು ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳಿ ಹಾಗೂ ಖಾಸಗಿ ಮಾರಾಟಗಾರರಲ್ಲಿ ದಾಸ್ತಾನೀಕರಿಸಲಾಗಿದೆ. ರಸಗೊಬ್ಬರದ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ಜಿಲ್ಲೆಯ ರೈತರು ರೈತ ಸಂಪರ್ಕ ಕೇಂದ್ರಗಳಿಂದ ಬೀಜ ಪಡೆಯಲು ಎಫ್‌ಐಡಿ ನಂಬರ್‌ ಹಾಗೂ ಖಾಸಗಿ ಮಾರಾಟಗಾರರಿಂದ ರಸಗೊಬ್ಬರ ಪಡೆಯಲು ಆಧಾರ್ ಕಾರ್ಡ್ ತಪ್ಪದೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

***

ಜಿಲ್ಲೆಯ ಎಲ್ಲಾ ರೈತಸಂಪರ್ಕ ಕೇಂದ್ರಗಳ ಮುಖಾಂತರ ರಿಯಾಯತಿ ದರದಲ್ಲಿ ಬಿತ್ತನೆ ಬೀಜಗಳನ್ನು ಕೋವಿಡ್-19 ಮಾರ್ಗಸೂಚಿಗಳ ಅನ್ವಯ ವಿತರಿಸಲಾಗುವುದು.
-ದೇವಿಕಾ ಆರ್, ಜಂಟಿ ಕೃಷಿ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.