ಯರಗೋಳ: ಸುತ್ತಲಿನ ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ವಾತಾವರಣವನ್ನು ಹಚ್ಚಹಸಿರಾಗಿಸಿದೆ.
ಹತ್ತಿಕುಣಿ, ಬಾಚವಾರ, ಕೋಟಗೇರಾ, ಮೋಟ್ನಳ್ಳಿ, ಗುಲಗುಂಜಿ, ಕಟ್ಟಿಗೆ ಶಹಾಪುರ, ಸಮಣಾಪುರ, ಸುತಾರ್ ಹೊಸಳ್ಳಿ ಗ್ರಾಮದ ಗುಡ್ಡಗಳಲ್ಲಿ ಮಳೆಯಿಂದಾಗಿ ಕುರುಚುಲು ಗಿಡ–ಪೊದೆಗಳಲ್ಲಿ ಹಸಿರು ನಳನಳಿಸುತ್ತಿದೆ.
ಗುಡ್ಡದಲ್ಲಿನ ಹೊಂಡಗಳಲ್ಲಿ ನೀರು ಸಂಗ್ರಹವಾಗಿದ್ದು, ಪ್ರಾಣಿ, ಪಕ್ಷಿಗಳಿಗಳಾದ ನವಿಲು, ಮೊಲ, ನರಿ, ತೋಳ, ಕಾಡುಹಂದಿಗಳು ಹೆಚ್ಚಿನ ಪ್ರಮಾಣದಲ್ಲಿ ನೆಲೆಸಿವೆ.
ಯರಗೋಳ ಸುತ್ತಲಿನ ಗುಡ್ಡಗಳಲ್ಲಿ ನೈಸರ್ಗಿಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಸೀತಾಫಲ ಹಣ್ಣಿನ ಗಿಡಗಳು ಬೆಳೆಯುತ್ತವೆ. ಗುಲಗುಂಜಿ ಗ್ರಾಮದ ಕಾಡು ಪ್ರದೇಶದಲ್ಲಿ ನೇರಳೆ ಹಣ್ಣಿನ ಗಿಡಗಳಿವೆ.
ಬಿರುಸಿನ ಮಳೆ ಸುರಿದಾಗೆಲ್ಲ ಕೋಟಗೇರಾ ಗುಡ್ಡದಲ್ಲಿನ ಕಲ್ಲು ಬಂಡೆಗಳ ನಡುವೆ ನೀರು ಬೋರ್ಗರೆದು ಜಲಪಾತ ಸೃಷ್ಟಿಸುತ್ತದೆ. ಈ ವರ್ಷವೂ ಜಲಪಾತ ಕಳೆಗಟ್ಟಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಪ್ರತೀ ಮಳೆಗಾಲದಲ್ಲಿ ಗುಡ್ಡಕ್ಕೆ ಲಗ್ಗೆಹಾಕುವ ಪ್ರವಾಸಿಗರು, ಗುಡ್ಡದಲ್ಲಿ ಬೋರ್ಗರೆದು ಹರಿಯುವ ನೀರು ಕಣ್ತುಂಬಿಕೊಂಡು ಖುಷಿಪಡುತ್ತಿದ್ದಾರೆ. ಯುವಜನರು ಮೊಬೈಲ್ ಫೋನ್‌ಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.
‘ಪ್ರತಿ ವರ್ಷ ಮಳೆಗಾಲದಲ್ಲಿ ಜಲಪಾತ ವೀಕ್ಷಣೆಗೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ’ ಎನ್ನುತ್ತಾರೆ ಗ್ರಾಮದ ಉಪನ್ಯಾಸಕ ವೆಂಕಟೇಶ ಚಂದನಕೇರಿ.
ಹತ್ತಿಕುಣಿ ಜಲಾಶಯಕ್ಕೂ ನೀರು ಹರಿದು ಬರುತ್ತಿದ್ದು, ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಜಲಾಶಯದ ಸುತ್ತಲಿನ ಗುಡ್ಡಗಳಲ್ಲಿ ಹಸಿರು ಪ್ರವಾಸಿಗರಿಗೆ ಸೆಳೆಯುತ್ತಿದೆ. ಬಹುತೇಕ ಗ್ರಾಮಗಳ ಹಳ್ಳ, ಕೆರೆಗಳಲ್ಲಿ ಮಳೆ ನೀರು ಸಂಗ್ರಹವಾಗುತ್ತಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.
ಪ್ರತೀ ವರ್ಷ ಮಳೆಗಾಲದಲ್ಲಿ ಬಿರುಸಿನ ಮಳೆಗೆ ಕೋಟಗೇರಾ ಗ್ರಾಮದ ಗುಡ್ಡದಲ್ಲಿ ಜಲಪಾತ ಸೃಷ್ಟಿಯಾಗುತ್ತದೆ. ನಾನು ಚಿಕ್ಕಂದಿನಿಂದಲೂ ಜಲಪಾತ ನೋಡಿ ಸಂಭ್ರಮಿಸುತ್ತೇನೆಜಾಫರ್ ಕೋಟೆಗೇರಾ ಗ್ರಾಮದ ಯುವಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.