ADVERTISEMENT

ಯಾದಗಿರಿ| ಉದ್ಯೋಗ ಸೃಷ್ಟಿಯಲ್ಲಿ ಎಂಎಸ್‌ಎಂಇಗೆ 2ನೇ ಸ್ಥಾನ: ಬಿ.ಸತೀಶಕುಮಾರ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 5:35 IST
Last Updated 7 ಜನವರಿ 2026, 5:35 IST
ಯಾದಗಿರಿಯಲ್ಲಿ ಮಂಗಳವಾರ ನಡೆದ ಕಾರ್ಯಾಗಾರವನ್ನು ಕೆನರಾ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕಿ ಮಧುರಾ ಅವರು ಉದ್ಘಾಟಿಸಿದರು. ಗಣ್ಯರು ಉಪಸ್ಥಿತರಿದ್ದರು
ಯಾದಗಿರಿಯಲ್ಲಿ ಮಂಗಳವಾರ ನಡೆದ ಕಾರ್ಯಾಗಾರವನ್ನು ಕೆನರಾ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕಿ ಮಧುರಾ ಅವರು ಉದ್ಘಾಟಿಸಿದರು. ಗಣ್ಯರು ಉಪಸ್ಥಿತರಿದ್ದರು   

ಯಾದಗಿರಿ: ‘ದೇಶದಲ್ಲಿ ಕೃಷಿ ಬಳಿಕ ಅತ್ಯಧಿಕವಾಗಿ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ) ಎರಡನೇ ಸ್ಥಾನದಲ್ಲಿದೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಸತೀಶಕುಮಾರ ಹೇಳಿದರು.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ರೈಸ್ ಮಿಲ್, ಕಡೇಚೂರು ಕೈಗಾರಿಕಾ ಪ್ರದೇಶದ ಫಾರ್ಮಾ ಮತ್ತು ಕೆಮಿಕಲ್ ಮ್ಯಾನ್‌ಫ್ಯಾಕ್ಷರಿಂಗ್, ಜಿಲ್ಲಾ ಹತ್ತಿ ಜಿನ್ನಿಂಗ್ ಮಿಲ್ಸ್ ಸಂಘಟನೆಗಳು ಹಾಗೂ ಕೆಎಸ್‌ಎಂಸಿ ವತಿಯಿಂದ ರ್‍ಯಾಂಪ್‌ ಯೋಜನೆಯಡಿ ಆಯೋಜಿಸಿದ ‘ಟ್ರೇಡ್ಸ್‌’ ಮತ್ತು ಇಎಸ್‌ಎಂ ಕುರಿತ ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರವು ಎಂಎಸ್‌ಎಂಇ ಬಲವರ್ಧನೆಗೆ ಪ್ರತಿ ವರ್ಷ ₹1,100 ಕೋಟಿಯಷ್ಟು ಅನುದಾನ ಖರ್ಚು ಮಾಡುತ್ತಿದೆ. ಉದ್ಯಮಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ADVERTISEMENT

‘ಸರ್ಕಾರಗಳು ಉದ್ಯಮ ಸ್ಥಾಪನೆಗಾಗಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಅರಿವು ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಾಗಾರವನ್ನು ಆಯೋಜಿಸುತ್ತಿದೆ. ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಹೇಳಿದರು.

ಗ್ರಾಮೀಣ ಕೈಗಾರಿಕೆಯ ಜಿಲ್ಲಾ ಪಂಚಾಯಿತಿ ಉಪ ನಿರ್ದೇಶಕ ಮುಕುಂದ ರೆಡ್ಡಿ ಮಾತನಾಡಿ, ‘ಕೇಂದ್ರದ ರ್‍ಯಾಂಪ್‌ ಯೋಜನೆಯು ಎಂಎಸ್‌ಎಂಇ ಬಲವರ್ಧನೆಗಾಗಿ ಜಾರಿಗೆ ತರಲಾಗಿದೆ. ಉತ್ಪಾದಕರು, ಖರೀದಿದಾರರು ಹಾಗೂ ಬ್ಯಾಂಕ್‌ಗಳ ನಡುವೆ ವ್ಯವಹಾರದ ಸಮನ್ವಯತೆ ಸಾಧಿಸಲು ಟಿಆರ್‌ಇಡಿಎಸ್‌ ಸಹ ಅನುಷ್ಠಾನಗೊಳಿಸಲಾಗಿದೆ’ ಎಂದರು.

‘ಉತ್ಪಾದನೆ ಸಾಮರ್ಥ್ಯ ಹೆಚ್ಚಳ, ಸಕಾಲದಲ್ಲಿ ವಹಿವಾಟಿನ ಹಣ ಪಾವತಿ, ಗ್ರಾಹಕರ ವಿಶ್ವಾಸರ್ಹತೆಯನ್ನು ಸಾಧಿಸುವಲ್ಲಿ ಟಿಆರ್‌ಇಡಿಎಸ್‌ ಡಿಜಿಟಲ್ ವೇದಿಕೆಯು ನೆರವಾಗಲಿದೆ. ಜಿಲ್ಲೆಯ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆದಾರರು ಬಾಕಿ ಹಣ ವಿಳಂಬ ಸೇರಿದಂತೆ ಇತರೆ ಸವಾಲುಗಳನ್ನು ಇತ್ಯರ್ಥ ಮಾಡಿಕೊಳ್ಳಬಹುದು. ಉದ್ದಮಿಗಳ ಕಾರ್ಯಾಚರಣೆಗೆ ತೊಂದರೆ ಆಗದಂತೆ ಟಿಆರ್‌ಇಡಿಎಸ್ ಡಿಜಿಟಲ್ ವೇದಿಕೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕೆನರಾ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕಿ ಮಧುರಾ ಮಾತನಾಡಿ, ‘ಜಿಲ್ಲೆಯಲ್ಲಿ ರೈಸ್ ಮಿಲ್ ಹಾಗೂ ಹತ್ತಿ ಮಿಲ್‌ಗಳ ಬೆಳವಣಿಗೆಗೆ ಬೇಕಾದ ಪೂರಕವಾದ ವಾತಾವರಣವಿದೆ. ಉದ್ಯಮ ಸ್ಥಾಪನೆ ಮಾಡಿ ನಿಷ್ಠೆಯಿಂದ ಸಾಲ ಮರು ಪಾವತಿಸಿ, ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಎತ್ತರಕ್ಕೆ ಬೆಳದವರು ಸಾಕಷ್ಟು ಉದ್ಯಮಿಗಳಿದ್ದಾರೆ’ ಎಂದರು.

‘ಕಡೆಚೂರು ಕೈಗಾರಿಕಾ ಪ್ರದೇಶವಿದೆ ಸಾಕಷ್ಟು ಫಾರ್ಮಾ ಕಂಪನಿಗಳು ಬಂದು ಉದ್ಯಮಗಳನ್ನು ಆರಂಭಿಸಿವೆ. ಜಿಲ್ಲೆಯ ಯುವಕರು ಉದ್ಯಮ ಸ್ಥಾಪನೆಗೆ ಮುಂದೆ ಬರಬೇಕು. ಸರ್ಕಾರ ಸಬ್ಸಿಡಿ, ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು’ ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಎಸ್‌ಬಿಐ ಲೀಡ್‌ ಬ್ಯಾಂಕ್ ಮುಖ್ಯ ಮ್ಯಾನೇಜರ್ ಸುನಿಲ್ ಸತ್ಯನಾರಾಯಣ ಬತ್ತಿನಿ, ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಮಹೇಶ್, ಎಂ.ಎ.ಸಲೀಂ, ಜಿಲ್ಲಾ ಪರಿಸರ ಅಧಿಕಾರಿ ಆದಮ್‌ ಪಟೇಲ್‌, ವಿವಿಧ ಸಂಘಟನೆಗಳ ಮುಖ್ಯಸ್ಥರಾದ ದಿನೇಶ್ ಕುಮಾರ್ ಜೈನ್, ಜಿ.ವೆಂಕಟೇಶ್ವರ ರಾವ್, ಸುಮೇರ್‌ಮಲ್ ಜೈನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.