
ಶಹಾಪುರ: ‘ಇಲ್ಲಿನ ಮೂರು ನ್ಯಾಯಾಲಯದ ಸಭಾಂಗಣದಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಡಿ.13ರಂದು ರಾಷ್ರೀಯ ಲೋಕ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಕ್ಷಿದಾರರ ತಮ್ಮ ಪ್ರಕರಗಳನ್ನು ಪರಸ್ಪರ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಉತ್ತಮ ಅವಕಾಶವಿದೆ’ ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಹಾಗೂ ನ್ಯಾಯಾಧೀಶೆ ಹೇಮಾ ಪಸ್ತಾಪುರ ತಿಳಿಸಿದ್ದಾರೆ.
ಈ ಕುರಿತು ಶನಿವಾರ ಮಾಹಿತಿ ನೀಡಿದ ಅವರು, ‘ಕಳೆದ ಸೆಪ್ಟಂಬರ 13ರಂದು ನಮ್ಮ ಮೂರು ನ್ಯಾಯಾಲಯ ಸೇರಿ ಒಟ್ಟು 2,476 ಪ್ರಕರಣ ಇತ್ಯಾರ್ಥಪಡಿಸಿದೆ. ಅಲ್ಲದೆ ₹ 1.76 ಕೋಟಿ ಹಣ ಸಂದಾಯ ಮಾಡಿದೆ. ಈಗ ಮೂರು ನ್ಯಾಯಾಲಯದಲ್ಲಿ ಸೇರಿ 6,689 ಪ್ರಕರಣ ಇತ್ಯಾರ್ಥಕ್ಕೆ ಬಾಕಿ ಇವೆ’ ಎಂದರು.
‘ಲೋಕ ಅದಾಲತ್ ನಲ್ಲಿ ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ಬ್ಯಾಂಕ ವಸೂಲಾತಿ, ಚೆಕ್ ಅಮಾನ್ಯ, ಜನನ ನೊಂದಣಿ, ಮೋಟಾರು ಅಪಘಾತ ಪರಿಹಾರ ಅಲ್ಲದೆ ರಾಜೀಯಾಗಬಲ್ಲ ಸಿವಿಲ್ ಪ್ರಕರಣಗಳನ್ನು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿದೆ’ ಎಂದರು.
‘ಲೋಕ ಅದಾಲತ್ ಮುಖ್ಯ ಉದ್ದೇಶವೆಂದರೆ, ಪರಸ್ಪರ ಸಂಧಾನದ ಮೂಲಕ ಪ್ರಕರಣ ಇತ್ಯಾರ್ಥಪಡಿಸಿಕೊಳ್ಳುವುದರಿಂದ ಸಮಯ, ಹಣ, ದ್ವೇಷ, ಭಿನ್ನಾಭಿಪ್ರಾಯಕ್ಕೆ ಅವಕಾಶವಿಲ್ಲ. ಅಲ್ಲದೆ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯಾರ್ಥಪಡಿಸಿಕೊಂಡಲ್ಲಿ ನ್ಯಾಯಾಲಯದ ಶುಲ್ಕ ಪೂರ್ಣವಾಗಿ ಮರುಪಾವತಿಸಲಾಗುವುದು. ರಾಜೀ ಸಂಧಾನವೆ ರಾಜ ಮಾರ್ಗವಾಗಿದೆ. ವ್ಯಾಜ್ಯರಹಿತ ಸಮಾಜ ನಿರ್ಮಾಣ ಪ್ರಾಧಿಕಾರದ ಮೂಲ ಧ್ಯೇಯವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.