ಯಾದಗಿರಿ: ನವರಾತ್ರಿಯ ಒಂಬತ್ತು ದಿನಗಳು ಆದಿ ಶಕ್ತಿಯನ್ನು ನವವಿಧಗಳಲ್ಲಿ ಪೂಜಿಸುವ ದೇವಿಯ ಮೂರ್ತಿ ಪ್ರತಿಷ್ಠಾಪನೆಯ ಪೂಜಾ ಕೈಂಕರ್ಯಗಳು ಸೋಮವಾರ ರಾತ್ರಿ ಸುರಿದ ಮಳೆಯೊಂದಿಗೆ ಆರಂಭವಾದವು.
ಭಾನುವಾರ ತಡರಾತ್ರಿಯಿಂದ ನಸುಕಿನ ಜಾವದವರೆಗೆ ಸುರಿದ ಮಳೆ ಇಡೀ ದಿನ ಬಿಡುವು ಕೊಟ್ಟಿತ್ತು. ತರುಣ ಸಂಘಗಳು, ಮಹಿಳಾ ಮಂಡಳಿಗಳು, ಗೆಳೆಯರ ಬಳಗಗಳು ದೇವಿಯ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತಂದು, ತಮ್ಮ ಶಕ್ತಾನುಸಾರ ಪ್ರತಿಷ್ಠಾಪನೆ ಮಾಡಿದವು. ಸಂಜೆ ಪೂಜಾ ಕಾರ್ಯಗಳು ಆರಂಭಿಸುವ ಹೊತ್ತಿಗೆ ಮಳೆಯೂ ಶುರುವಾಯಿತು.
ನಗರದ ಸ್ಟೇಷನ್ ಏರಿಯಾದ ಶಿವಾಜಿ ನಗರ, ಶಹಾಪುರಪೇಟ, ಬೋವಿವಾಡ ನಗರ, ಡಾ.ಬಾಬು ಜಗಜೀವನರಾಂ ನಗರ, ಆತ್ಮಲಿಂಗ ದೇವಸ್ಥಾನದ ಮಲ್ಲಿನಾಥ ಆಶ್ರಮ, ಶರಣ ನಗರ, ಕೋಟೆ ಸೇರಿದಂತೆ ವಿವಿಧೆಡೆ ದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಒಂಬತ್ತು ದಿನಗಳಕಾಲ ನಗರದ ವಿವಿಧೆಡೆ ದುರ್ಗೆ ಮಾತೆ, ತುಳಜಾ ಭವಾನಿ, ಭಗುಳಾಂಬಿಕೆ, ಮಹಾಲಕ್ಷ್ಮಿ, ಜಗದಂಬೆ ಸೇರಿದಂತೆ ಶಕ್ತಿದೇವತೆಗೆ ಫಲ, ತಾಂಬೂಲ, ಪುಷ್ಪ, ವಸ್ತ್ರ, ವಿವಿಧ ದ್ರವ್ಯಗಳ ಅಲಂಕಾರ ನೆರವೇರಿಸಲಾಗುತ್ತದೆ. ಪಂಚಾಮೃತ ಅಭಿಷೇಕ, ಫಲ ಅಲಂಕಾರ, ಮಂಗಳಾರತಿ, ನೈವೇದ್ಯ ಸಮರ್ಪಿಸಲಾಗುತ್ತದೆ. ದಾಂಡಿಯಾ ನೃತ್ಯವೂ ಜರುಗಲಿವೆ.
ಸ್ಟೇಷನ್ ಏರಿಯಾದ ಅಂಭಾ ಭವಾನಿ ದೇವಸ್ಥಾನಲ್ಲಿ ಮೂರ್ನಾಲ್ಕು ದಶಕಗಳಿಂದ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಮೂರ್ತಿ ಪ್ರತಿಷ್ಠಾಪನಾ ಸಮಿತಿಯವರು ಪ್ರತಿ ವರ್ಷದಂತೆ ಈ ವರ್ಷವು ದೇವಿ ಮೂರ್ತಿಯನ್ನು ಭೀಮಾ ನದಿಗೆ ತೆಗೆದುಕೊಂಡು ಹೋಗಿ, ವಿಧಿವಿಧಾನಗಳನ್ನು ಪೂರ್ಣಗೊಳಿಸಿ, ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪನೆ ಮಾಡಲಾಯಿತು.
ನಗರದ ಕೋಟೆ ಪ್ರದೇಶದಲ್ಲಿ ಭುವನೇಶ್ವರಿ ದೇವಿ ಬೆಟ್ಟದಲ್ಲಿ ದಸರಾ ಹಬ್ಬದ ವಿವಿಧ ಪೂಜೆ ಕೈಂಕರ್ಯಗಳು ಜರುಗಲಿವೆ. ನಗರದ ಶರಣ ನಗರದಲ್ಲಿ ಜೈ ಭವಾನಿ ತರುಣ ಸಂಘ, ಜೈ ಜಿನೇಂದ್ರ ಗೆಳೆಯರ ಬಳಗದಿಂದ ಉತ್ಸವ ಹಮ್ಮಿಕೊಳ್ಳಲಾಗಿದೆ. ಬೋವಿವಾಡದ ದುರ್ಗಾ ದೇವಿ ದೇವಸ್ಥಾನದಲ್ಲಿ ಒಂಬತ್ತು ದಿನಗಳು ವಿಶೇಷ ಪೂಜೆ, ದಾಂಡಿಯಾ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರಿಗೆ ಪ್ರಸಾದದ ವ್ಯವಸ್ಥೆಯೂ ಇರಲಿದೆ.
‘ಆದಿಶಕ್ತಿಯನ್ನು ಭಕ್ತಿಯಿಂದ ಆರಾಧಿಸಬೇಕು’
ಯಾದಗಿರಿ: ‘ನವರಾತ್ರಿ ಉತ್ಸವದ ಸಂದರ್ಭದಲ್ಲಿ ಪ್ರತಿಯೊಬ್ಬರು ಶ್ರದ್ಧೆ ಮತ್ತು ಭಕ್ತಿಯಿಂದ ಆದಿಶಕ್ತಿ ಭಗುಳಾಂಬಿಕೆಯನ್ನು ಭಜಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ’ ಎಂದು ಅಬ್ಬೆತುಮಕೂರಿನ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಹೇಳಿದರು. ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠದಲ್ಲಿ ಸೋಮವಾರ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ‘ಶಿವನ ಪತ್ನಿಯಾದ ದುರ್ಗಾಮಾತೆಯು ಅತ್ಯಂತ ಶಕ್ತಿಶಾಲಿಯಾದ ದೇವತೆ. ಅವಳನ್ನು ಆದಿಶಕ್ತಿ ಎಂದು ಕರೆಯಲಾಗುತ್ತದೆ. ಆದಿಶಕ್ತಿಯನ್ನು ಕಾಳಿ ಪಾರ್ವತಿ ಗೌರಿ ಮಹಾಮಾಯೆ ಸೇರಿ ವಿವಿಧ ರೂಪಗಳಲ್ಲಿ ಆರಾಧಿಸುವ ಪರಂಪರೆ ನಮ್ಮದಾಗಿದೆ’ ಎಂದರು. ‘ದುಷ್ಟರ ಸಂಹಾರಕ್ಕಾಗಿ ಶಿಷ್ಟರ ರಕ್ಷಣೆಗಾಗಿ ನವ ಅವತಾರಗಳನ್ನು ಎತ್ತಿ ಅಸುರನನ್ನು ಸಂಹರಿಸಿದ ಶಕ್ತಿ ರೂಪಿಣಿಯೇ ದುರ್ಗಾದೇವಿ. ಅದಕ್ಕಾಗಿಯೇ ನಮ್ಮಲ್ಲಿ ನವರಾತ್ರಿಯ ಒಂಬತ್ತು ದಿನಗಳಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜಿಸಗುತ್ತಿದೆ’ ಎಂದು ಹೇಳಿದರು. ‘ದುರ್ಗಾಮಾತೆಯನ್ನು ಪ್ರತಿದಿನವು ಶೈಲಪುತ್ರಿ ಬ್ರಹ್ಮಚಾರಿಣಿ ಚಂದ್ರಘಂಟದೇವಿ ಕೂಷ್ಮಾಂಡಿನಿ ದೇವಿ ಸ್ಕಂದಮಾತೆ ಕಾತ್ಯಾಯಿನಿ ಕಾಳರಾತ್ರಿ ಮಹಾಗೌರಿ ಸಿದ್ಧಿರಾತ್ರಿ ಹೀಗೆ ಒಂದೊಂದು ಹೆಸರಿನಲ್ಲಿ ನವರಾತ್ರಿಯ ಒಂಬತ್ತು ದಿನಗಳ ಕಾಲ ಪೂಜಿಸಲಾಗುತ್ತದೆ’ ಎಂದರು. ವಿವಿಧ ಗ್ರಾಮಗಳಿಂದ ಬಂದಿದ್ದ ಕಲಾವಿದರಿಂದ ಚೌಡಕಿ ಹಾಡುಗಳು ಡೊಳ್ಳು ಕುಣಿತ ಕೋಲಾಟ ಕಣಿ ಹಲಿಗೆ ದಾಂಡಿಯ ನೃತ್ಯ ಭಜನಾ ತಂಡದವರಿಂದ ಭಜನೆ ನಡೆಯಿತು. ಮಲ್ಲಿಕಾರ್ಜುನ ಶಾಸ್ತ್ರಿ ಐನಾಪೂರ ಅವರು ದೇವಿಯ ಪಾರಾಯಣ ಮಾಡಿದರು. ಬಸವರಾಜ ಶಾಸ್ತ್ರಿ ಎಲೆಕೂಡಗಿ ಪೌರೋಹಿತ್ಯ ವಹಿಸಿ ವಿಶೇಷ ಪೂಜೆ ನೆರವೇರಿಸಿದರು. ಸುಭಾಶ್ಚಂದ್ರ ಕೌಲಗಿ ಸೇರಿದಂತೆ ಹಲವು ಭಕ್ತರು ಇದ್ದರು.
ಝಗಮಗಿಸುವ ವಿದ್ಯುದೀಪಾಲಂಕಾರ ಬೃಹತ್ ಪೆಂಡಾಲ್‌ಗಳನ್ನು ಹಾಕಿ ದೇವಿಯ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಮೂರ್ತಿ ಪ್ರತಿಷ್ಠಾಪನ ಮಂಡಳಿಗಳು ಜಿದ್ದಿಗೆ ಬಿದ್ದಂತೆ ಬಣ್ಣ–ಬಣ್ಣದ ಮಂಟಪಗಳು ಝಗಮಗಿಸುವ ವಿದ್ಯುದೀಪಾಲಂಕಾರ ತಳಿರು ತೋರಣಗಳಿಂದ ಬೀದಿಗಳನ್ನು ಅಲಂಕರಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.