ಯಾದಗಿರಿ: ‘ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಹೆಚ್ಚಾಗಿದೆ. ಆರ್ಥಿಕ ಶಕ್ತಿ ಕುಂದಿದೆ. ಗ್ಯಾರಂಟಿಗಳ ನೆಚ್ಚಿಕೊಂಡು ಕುಳಿತ್ತಿದ್ದು, ಇಂಥವರಿಂದ ರಾಜ್ಯದಲ್ಲಿ ಉತ್ತಮ ಆಡಳಿತ ನಿರೀಕ್ಷಿಸಲು ಹೇಗೆ ಸಾಧ್ಯ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು..
ನಗರ ಹೊರವಲಯದ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಜೆಡಿಎಸ್ ವತಿಯಿಂದ ಶನಿವಾರ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಮತ್ತು ಸದಸ್ಯತ್ವ ನೋಂದಣಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಜೆಡಿಎಸ್ ಪಕ್ಷ ಮುಗಿದು ಹೋಗಿದೆ ಎಂದು ಕಾಂಗ್ರೆಸ್‌ನವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ನೂರಾರು ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷದಲ್ಲಿ ಹಿಮಾಚಲ ಪ್ರದೇಶ, ತೆಲಂಗಾಣ, ಕರ್ನಾಟಕ ಬಿಟ್ಟರೆ ಬೇರೆಲ್ಲೂ ಇಲ್ಲ. ಎಲ್ಲ ಕಡೆ ಗ್ಯಾರಂಟಿಗಳಿಂದ ಅನುದಾನಕ್ಕೆ ಕೊರತೆ ಉಂಟಾಗಿದೆ’ ಎಂದು ಹೇಳಿದರು.
2028ಕ್ಕೆ ಜೆಡಿಎಸ್ ಸರ್ಕಾರ: ರಾಜ್ಯದಲ್ಲಿ ಮುಂಬರುವ 2028ರಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಪೂರ್ಣ ಪ್ರಮಾಣದ ಸರ್ಕಾರ ರಚನೆಗೊಂಡು ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಶತಸಿದ್ಧ ಎಂದರು.
ಜೆಡಿಎಸ್ ಮಹಿಳಾ ರಾಜ್ಯ ಘಟಕದ ರಶ್ಮಿ ರಾಮೇಗೌಡ ಮಾತನಾಡಿ, ‘ಎಚ್.ಡಿ.ದೇವೇಗೌಡರ ನಿರ್ಧಾರದಿಂದ ಮಹಿಳಾ ಮೀಸಲಾತಿ ಸಿಕ್ಕಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಸಾರಾಯಿ, ಲಾಟರಿ ನಿಷೇಧ ಮಾಡಿದ್ದಾರೆ. ಇದರಿಂದ ಮಹಿಳೆಯರಿಗೆ ಬಹಳಷ್ಟು ಅನುಕೂಲವಾಗಿದೆ ಎಂದು ಹೇಳಿದರು.
ಮಾನ್ವಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕ ದೊಡ್ಡಪ್ಪಗೌಡ ನರಿಬೋಳ, ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿದರು.
ಜಿಲ್ಲಾಧ್ಯಕ್ಷ ಸುಭಾಷ್ ಕಟಕಟಿ ಸ್ವಾಗತಿಸಿದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.
ಈ ವೇಳೆ ಪಕ್ಷದ ಗುರುಮಠಕಲ್ ತಾಲ್ಲೂಕು ಅಧ್ಯಕ್ಷ ಪ್ರಕಾಶ ನಿರೇಟಿ, ಹಿರಿಯ ಮುಖಂಡರಾದ ಎಸ್.ಬಿ.ಪಾಟೀಲ, ಅನ್ಸಾರಿ ಪಟೇಲ್, ಚನ್ನಪ್ಪಗೌಡ ಮೊಸಂಬಿ, ವಿಶ್ವನಾಥ ಸಿರವಾಳ, ಮಹಿಳಾ ಅಧ್ಯಕ್ಷೆ ನಾಗರತ್ನ ಅನಪುರ, ಕಲಬುರಗಿ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ, ವಕ್ತಾರ ಮಲ್ಲಣ್ಣಗೌಡ ಕೌಳೂರು ಭಾಗವಹಿಸಿದ್ದರು. ಆರಂಭದಲ್ಲಿ ಕುಂಭ ಹೊತ್ತ ನೂರಾರು ಮಹಿಳೆಯರು ನಿಖಿಲ್ ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದರು. ಸಭಾಂಗಣದಲ್ಲಿ ಕಿಕ್ಕಿರಿದು ಜನ ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.