ADVERTISEMENT

ಸುರಪುರ | ಮಠಕ್ಕೊಂದು ಕೆರೆ, ಬಾವಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 2 ಜುಲೈ 2023, 4:48 IST
Last Updated 2 ಜುಲೈ 2023, 4:48 IST
ಸುರಪುರದ ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠ
ಸುರಪುರದ ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠ   

ಅಶೋಕ ಸಾಲವಾಡಗಿ

ಸುರಪುರ:ನಗರದ ಕಬಾಡಗೇರಾ ದಲ್ಲಿರುವ ಶತಮಾನಗಳ ಇತಿಹಾಸ ಇರುವ ನಿಷ್ಠಿ ಕಡ್ಲಪ್ಪನವರ ವಿರಕ್ತಮಠ 250ಕ್ಕೂ ಹೆಚ್ಚು ವರ್ಷಗಳಿಂದ ಅನ್ನ, ಜ್ಞಾನ ದಾಸೋಹ ಕೇಂದ್ರವಾಗಿದೆ. 

ಸುರಪುರ ಸಂಸ್ಥಾನದ ಅರಸ ರಾಜಾ ಮುಮ್ಮಡಿ ರಾಘವ ಪಾಮನಾಯಕ (1752-74) ಕಾಲದಲ್ಲಿ ಪ್ರಧಾನ ಮಂತ್ರಿಗಳಾಗಿದ್ದ ನಿಷ್ಠಿ ಕಡ್ಲಪ್ಪ ಮತ್ತು ವೀರಪ್ಪ ಅವರ ಜನಪರ ಸೇವೆ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ.

ADVERTISEMENT

ಸುರಪುರದ ನಿಷ್ಠಿ ಕಡ್ಲಪ್ಪನವರ ವಿರಕ್ತಮಠ ಮೂಲವಾದದ್ದು ಆರು ಪೀಠಾಧಿಕಾರಿಗಳು ಆಗಿ ಹೋಗಿದ್ದಾರೆ. ಸಧ್ಯ ಪ್ರಭುಲಿಂಗ ಮಹಾಸ್ವಾಮಿಗಳು 2001ರಿಂದ ಏಳನೇ ಪೀಠಾಧಿಪತಿಯಾಗಿದ್ದಾರೆ. ಇದಕ್ಕೆ ಮೊದಲು ಪ್ರಭುಲಿಂಗ ಮಹಾಸ್ವಾಮಿಗಳು, ಬಸವಲಿಂಗ ಮಹಾಸ್ವಾಮಿಗಳು, ರುದ್ರಮುನಿ ಮಹಾಸ್ವಾಮಿಗಳು, ಗುರುಶಾಂತ ಮಹಾಸ್ವಾಮಿಗಳು, ಸಿದ್ಧಲಿಂಗ ಮಹಾಸ್ವಾಮಿಗಳು, ಮಲ್ಲಿಕಾರ್ಜುನ ಮಹಾಸ್ವಾಮಿಗಳು ಪೀಠದಲ್ಲಿದ್ದರು.

ಬಸವತತ್ವವನ್ನು ಮೂಲವಾಗಿಟ್ಟುಕೊಂಡು ಅತ್ಯಂತ ಸರಳ ಜೀವನ ನಡೆಸುವ ಪೀಠಾಧಿಪತಿಗಳು, ನಿತ್ಯ ಜಪ, ಅನುಷ್ಠಾನ, ಇಷ್ಟಲಿಂಗ ಪೂಜೆ, ಅಷ್ಟ ವಿದ್ಯೆ ಸಂಪಾದನೆ, ಧರ್ಮ ಜಾಗ್ರತಿ, ಭಕ್ತರ ಉದ್ಧಾರದಲ್ಲಿ ತೊಡಗಿಕೊಳ್ಳುವುದರಿಂದ ಪೀಠಾಧಿಕಾರಿಗಳ ಹೆಸರಿನ ಪೂರ್ವಾರ್ಧದಲ್ಲಿ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಎಂದು ಕರೆಯಲಾಗುತ್ತದೆ.

ಸುರಪುರದ ನಿಷ್ಠಿ ಕಡ್ಲಪ್ಪನವರ ವಿರಕ್ತಮಠ ವಿಶಿಷ್ಟ ಶಿಲ್ಪ ಶೈಲಿ ಹೊಂದಿದ್ದು ವಿಶಾಲವಾಗಿದೆ. ಸ್ನಾನ ಗೃಹ, ವಿಶ್ರಾಂತಿ ಕೋಣೆ, ದಾಸೋಹ ಮನೆ, ಯಾತ್ರಿಗಳ ವಾಸ್ತವ್ಯ ಕೋಣೆ ಹೊಂದಿದೆ. ಕಲ್ಲು ಮತ್ತು ಗಾರೆ ಬಳಸಿ ಸುಂದರ ಕಮಾನುಗಳನ್ನು ನಿರ್ಮಿಸಲಾಗಿದೆ.

ಮಠದಲ್ಲಿ ಪ್ರಥಮ ಮತ್ತು 6ನೇ ಪೀಠಾಧಿಕಾರಿಗಳ ಹಾಗೂ ಮಠದ ಸ್ಥಾಪಕರಾದ ನಿಷ್ಠಿ ವೀರಪ್ಪ ಮತ್ತು ನಿಷ್ಠಿ ಕಡ್ಲಪ್ಪನವರ ಗದ್ದುಗೆಗಳಿವೆ. ಗೋಶಾಲೆ ಇದೆ. ಪ್ರತಿ ವರ್ಷ ಶ್ರಾವಣ ಮಾಸ ಪೂರ್ತಿ ಹಾಗೂ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಪುಣ್ಯತಿಥಿ ನಡೆಸಿ ಧಾರ್ಮಿಕ ಜಾಗ್ರತೆ ಮೂಡಿಸಲಾಗುತ್ತಿದೆ. ಉಚಿತ ಆರೋಗ್ಯ ಶಿಬಿರ, ಸಾಧಕರಿಗೆ ಸನ್ಮಾನ ಮಾಡಲಾಗುತ್ತಿದೆ.

ಪ್ರಸ್ತುತ ಪೀಠಾಧಿಪತಿ ಪ್ರಭುಲಿಂಗ ಮಹಾಸ್ವಾಮಿಗಳು ವೀರಶೈವ ಲಿಂಗಾಯತ ಧರ್ಮ ಪರಿಪಾಲನೆಯೊಂದಿಗೆ ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ತ್ರಿಕರಣ ಶುದ್ಧಿಯಿಂದ ಕೈಗೊಳ್ಳುವುದರೊಂದಿಗೆ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದಾರೆ.

ಆರನೇ ಪೀಠಾಧಿಪತಿ ಮಲ್ಲಿಕಾರ್ಜುನ ಮಹಾಸ್ವಾಮಿಗಳು (1886-1974) ಪವಾಡ ಪುರುಷರಾಗಿ, ವಾಕ್‍ಸಿದ್ಧಿ ಮಹಿಮರಾಗಿ ಹೆಸರುವಾಸಿಯಾಗಿದ್ದರು. ನಡೆದಾಡುವ ದೇವರೆಂದದೇ ಖ್ಯಾತಿ ಪಡೆದಿದ್ದರು.

ಅರಿವು, ಆಚಾರ, ಅನ್ನ ತ್ರಿವಿಧ ದಾಸೋಹ ಮೂರ್ತಿಗಳಾಗಿದ್ದರು. ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ತೀಡಿ ಭಕ್ತರ ಪಾಲಿನ ಭಗವಂತರಾಗಿದ್ದರು. ಅವರ ಅನೇಕ ಪವಾಡಗಳು ದಂತ ಕಥೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.