ಸೈದಾಪುರ (ಯಾದಗಿರಿ ಜಿಲ್ಲೆ): ಸೈದಾಪುರ ಹೋಬಳಿ ವ್ಯಾಪ್ತಿಯ ಕಡೇಚೂರು ಗ್ರಾಮಕ್ಕೆ ಬಸ್‌ಗಳು ಬಾರದ ಕಾರಣ ಶಾಲಾ–ಕಾಲೇಜು ವಿದ್ಯಾರ್ಥಿಗಳು ಮೂರು ಕಿ.ಮೀ ನಡೆಯಬೇಕಾದಪರಿಸ್ಥಿತಿಯಿದೆ.
ಕಡೇಚೂರಿನಿಂದ ಪಟ್ಟಣದ ವಿದ್ಯಾವರ್ಧಕ ಪೌಢಶಾಲೆ, ಕಾಲೇಜು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಿಗೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳುಹೋಗುತ್ತಾರೆ.
‘ಕೊರೊನಾ ಲಾಕ್‌ಡೌನ್‌ಗೂ ಮುನ್ನ ಬರುತ್ತಿದ್ದ ಬಸ್‌ಗಳು ಈಗ ಗ್ರಾಮಗಳಿಗೆ ಬರುತ್ತಿಲ್ಲ. ಬಹುತೇಕ ಎಲ್ಲಾ ಬಸ್‌ಗಳು ಗ್ರಾಮದ ಹೊರವಲಯದ ರಾಜ್ಯ ಹೆದ್ದಾರಿ ಮೂಲಕವೇ ಸಂಚರಿಸುತ್ತವೆ. ಇದರಿಂದ ನಾವು ರಾಜ್ಯ ಹೆದ್ದಾರಿಯವರೆಗೆ ನಡೆದುಕೊಂಡು ಹೋಗಬೇಕಿದೆ’ ಎಂದು ವಿದ್ಯಾರ್ಥಿಗಳು ತಿಳಿಸಿದರು.
‘ಬಸ್‌ಗಳು ಸಕಾಲಕ್ಕೆ ಸಿಗದ ಕಾರಣ ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ. ಬಸ್‌ಪಾಸ್ ಇದ್ದರೂ ಕೆಲ ಬಸ್‌ಗಳಲ್ಲಿ ಟಿಕೆಟ್ ಪಡೆದು ಪ್ರಯಾಣಿಸುವಂತೆ ನಿರ್ವಾಹಕರು ಸೂಚಿಸುತ್ತಾರೆ’ ಎಂದರು.
‘ಕಡೇಚೂರು ಸಮೀಪದ ಶೆಟ್ಟಿಹಳ್ಳಿ ಗ್ರಾಮದಲ್ಲಿ ಬಸ್ ನಿಲುಗಡೆ ಆಗದ ಕಾರಣ ವಿದ್ಯಾರ್ಥಿಗಳು, ಸಾರ್ವಜನಿಕರು ಖಾಸಗಿ ವಾಹನಗಳಲ್ಲಿ ಪ್ರಯಾಣಿಸಬೇಕಿದೆ. ಗ್ರಾಮಕ್ಕೆ ಬಸ್ ಬರುವಂತೆ ಮಾಡಿ, ಪ್ರಯಾಣಿರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಕಡೇಚೂರು ನಿವಾಸಿ ವೀರೇಶ ಸಾಹುಕಾರ ಆವಂಟಿ ಅವರು ಒತ್ತಾಯಿಸಿದರು.
***
ಬಸ್ ಬಾರದ ಕಾರಣ ನಾವು ಪ್ರತಿದಿನ ಕೆಐಎಡಿಬಿ ಕ್ರಾಸ್‍ವರೆಗೆ ನಡೆದುಕೊಂಡು ಹೋಗಬೇಕಿದೆ. ಇದರಿಂದ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಲು ಆಗುತ್ತಿಲ್ಲ.
-ಅನಿಲ, ವಿದ್ಯಾರ್ಥಿ ಕಡೇಚೂರು
***
ಗ್ರಾಮದ ಪುರುಷರು ನಡೆದುಕೊಂಡು ಹೋಗಿ ಬಸ್ ಹಿಡಿಯುತ್ತಾರೆ. ಆದರೆ, ವಿದ್ಯಾರ್ಥಿನಿಯರಿಗೆ 3 ಕಿ.ಮೀ ನಡೆದುಕೊಂಡು ಹೋಗಲು ಕಷ್ಟವಾಗುತ್ತಿದೆ.
-ಶಿರೀಷಾ, ವಿದ್ಯಾರ್ಥಿನಿ ಕಡೇಚೂರು
***
ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ರಾಜ್ಯ ಹೆದ್ದಾರಿಯನ್ನು ತಡೆದು ಹೋರಾಟ ಮಾಡಬೇಕಿದೆ.
-ವಿರೇಶ ಸಜ್ಜನ್, ಯುವ ಮುಖಂಡ ಕಡೇಚೂರು
***
ಕಡೇಚೂರು ಗ್ರಾಮದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ಈಗಾಗಲೇ ನಮ್ಮ ಗಮನಕ್ಕೆ ಬಂದಿದೆ. ಸೋಮವಾರದಿಂದ ಗ್ರಾಮದ ಒಳಗಡೆ ಬಸ್ ಸೌಲಭ್ಯಕ್ಕೆ ಆದೇಶ ಮಾಡುತ್ತೇನೆ.
-ಎಂ.ಪಿ.ಶ್ರೀಹರಿಬಾಬು, ವಿಭಾಗೀಯ ನಿಯಂತ್ರಣಾಧಿಕಾರಿ, ಎನ್ಇಕೆಆರ್‌ಟಿಸಿ ಯಾದಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.