
ಯಾದಗಿರಿ: ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ 50 ದಿನ ಹೆಚ್ಚುವರಿ ಕೆಲಸ ಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ಜಿಲ್ಲಾ ಸಮಿತಿ ಮುಖಂಡರು ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
‘ವಿಪರೀತ ಮಳೆ ಹಾಗೂ ಪ್ರವಾಹದಿಂದಾಗಿ ಬೆಳೆ ಕಳೆದುಕೊಂಡ ರೈತರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಿದೆ. ಆದರೆ, ಕೃಷಿ ಕೂಲಿಯನ್ನು ನಂಬಿಕೊಂಡಿರುವ ಕಾರ್ಮಿಕರಿಗೆ ಕೆಲಸ ಇಲ್ಲದಂತೆ ಆಗಿದೆ. ಹೀಗಾಗಿ, ಪ್ರಕೃತಿ ವಿಕೋಪ ಸಂಭವಿಸಿದಾಗ ನರೇಗಾದಡಿ ಹೆಚ್ಚುವರಿಯಾಗಿ 50 ದಿನ ಕೂಲಿ ಕೆಲಸ ನೀಡಬೇಕು ಎಂಬ ನಿಯಮ ಇದೆ’ ಎಂದರು.
‘ನರೇಗಾ ಕೆಲಸದ ಅವಧಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಿ, ಹಾವು ಕಚ್ಚಿ ಆಸ್ಪತ್ರೆ ಚಿಕಿತ್ಸೆಗೆ ಮಾಡಿದ ಖರ್ಚು ಸಹ ಭರಿಸಬೇಕು. ಉದ್ಯೋಗ ಕಾರ್ಡ್ ಕೊಡಲು ವಿಳಂಬ ಮಾಡುವ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
‘ಪ್ರತಿ ತಿಂಗಳು ಪಂಚಾಯಿತಿ ಕಚೇರಿಗಳಲ್ಲಿ ಉದ್ಯೋಗ ದಿನ ಆಚರಣೆ ಮಾಡಬೇಕು. ಕೆಲಸದ ಸ್ಥಳದಲ್ಲಿ ಔಷಧಿ ಸಹಿತ ಮೂಲಸೌಕರ್ಯಗಳು ಕಲ್ಪಿಸಿ, 5 ವರ್ಷಗಳ ಒಳಗಿನ ಮಕ್ಕಳ ಪೋಷಕರು ಕೆಲಸಕ್ಕೆ ಬಂದರೆ ಮಕ್ಕಳ ಪಾಲನೆಗೆ ಆರೈಕೆದಾರರನ್ನು ನಿಯೋಜನೆ ಮಾಡಬೇಕು. ಕಾಯಕ ಬಂಧುಗಳಿಗೆ 7 ದಿನ ತರಬೇತಿ ನೀಡಿ, ಬ್ಯಾಗ್, ಮೊಬೈಲ್, ಡೈರಿ ಕೊಡಬೇಕು’ ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಮಿತಿಯ ಪದಾಧಿಕಾರಿಗಳಾದ ದಾವಲ್‌ಸಾಬ್ ನದಾಫ್, ಅಯ್ಯಪ್ಪ ಅನ್ಸೂರ, ರಂಗಮ್ಮ ಕಟ್ಟಿಮನಿ, ಅಂಬ್ಲಯ್ಯ ಬೇವಿನಕಟ್ಟಿ, ಈಶಮ್ಮ ದೊಡ್ಮನಿ, ಶರಣಬಸವ ಜಂಬಲದಿನ್ನಿ, ಅನ್ನಪೂರ್ಣ ಪೂಜಾರಿ, ಮಹಾದೇವಪ್ಪ ಪ್ಯಾಪ್ಲಿ ಸೇರಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.