ADVERTISEMENT

ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಿ: ಒರಡಿಯಾ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 4:36 IST
Last Updated 4 ನವೆಂಬರ್ 2025, 4:36 IST
ವಡಗೇರಾ ತಾಲ್ಲೂಕಿನ ತಡಿಬಿಡಿ ಗ್ರಾಮದ ಪ್ರೌಢಶಾಲೆಯ ಮಕ್ಕಳೊಂದಿಗೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಲವೀಶ್ಒರಡಿಯಾ ಸಂವಾದ ನಡೆಸಿದರು
ವಡಗೇರಾ ತಾಲ್ಲೂಕಿನ ತಡಿಬಿಡಿ ಗ್ರಾಮದ ಪ್ರೌಢಶಾಲೆಯ ಮಕ್ಕಳೊಂದಿಗೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಲವೀಶ್ಒರಡಿಯಾ ಸಂವಾದ ನಡೆಸಿದರು   

ವಡಗೇರಾ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ‌ ಲವೀಶ್ಒರಡಿಯಾ ಸೂಚಿಸಿದರು.

ವಡಗೇರಾ ತಾಲ್ಲೂಕಿನ ಗುಂಡಗುರ್ತಿ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಗುಂಡಗುರ್ತಿ ಅಗಸ್ತಿಹಾಳ ಗ್ರಾಮಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿ ವೀಕ್ಷಿಸಿದ ನಂತರ ಮಾತನಾಡಿದರು.

ಜನರು ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಯಾವುದೇ ಕಾರಣಕ್ಕೂ ಗುಳೆ ಹೋಗಬಾರದು. ನಿಮ್ಮ ಗ್ರಾಮದಲ್ಲಿಯೆ ನಿಮಗೆ ಉದ್ಯೋಗ ಸಿಗುತ್ತದೆ. ಇಲ್ಲಿಯೇ ಕೆಲಸ ಮಾಡಿ ನಿಮ್ಮ ಕುಟುಂಬದ ಜತೆ ನೆಮ್ಮದಿಯಾಗಿ ಜೀವನ ನಡೆಸಿ ಎಂದು ಹೇಳಿದರು

ADVERTISEMENT

ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಎಲ್‌ಡಬ್ಲ್ಯೂಎಮ್ ಕಾಮಗಾರಿ, ಎಸ್‌ಡಬ್ಲ್ಯೂಎಮ್ ಘಟಕ ಹಾಗೂ ಕ್ಷೇತ್ರ ಬದು ಕಾಮಗಾರಿ ಸೇರಿದಂತೆ ಇತರೆ ಕಾಮಗಾರಿಗಳನ್ನು ವೀಕ್ಷಿಸಿದ ನಂತರ ಗ್ರಾಪಂ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರ ಸಭೆ ನಡೆಸಿ ಸಾರ್ವಜನಿಕರ ಕುಂದುಕೊರತೆ ಆಲಿಸಿದರು.

ನಂತರ ತಡಿಬಿಡಿ ಗ್ರಾಮದ ಪ್ರೌಢಶಾಲೆಗೆ ತೆರಳಿ ಮಕ್ಕಳೊಂದಿಗೆ ಸಂವಾದ ನಡೆಸಿ ಹತ್ತನೇ ತರಗತಿಯಲ್ಲಿ ಉತ್ತಮ ಫಲಿತಾಂಶ ತರಬೇಕು. ಯಾವುದೇ ಕಾರಣಗಳಿಗೆ ಆಸ್ಪದವಿಲ್ಲ. ಎಲ್ಲಾ ಶಿಕ್ಷಕರು ಒಗ್ಗಟ್ಟಿನಿಂದ ಬೋಧನೆ ಮಾಡಿ ಮಕ್ಕಳ ಭಷ್ಯದ ಬಗ್ಗೆ ಚಿಂತನೆಯನ್ನು ಮಾಡಬೇಕು ಎಂದು ಶಿಕ್ಷಕರಿಗೆ ತಾಕಿತು ಮಾಡಿದರು.

ಗ್ರಂಥಾಲಯ, ಕೂಸಿನ ಮನೆ, ಹಾಗೂ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸಿಬ್ಬಂದಿಗಳಿಗೆ ಹೇಳಿದರು.

ತಾ.ಪಂ ಇಒ ಮಲ್ಲಿಕಾರ್ಜುನ ಸಂಗ್ವಾರ ತಾ.ಪಂ. ನಿರ್ದೇಶಕ ಶರಣಗೌಡ ಊಳ್ಳೆಸೂಗುರು, ಟಿಎಚ್ಓ ಡಾ. ರಮೇಶ ಗುತ್ತೇದಾರ, ಟಿ.ಸಿ ದೇಸಾಯಿ, ತಡಿಬಿಡಿ ಪಿಡಿಒ ಗೋವಿಂದ ರಾಠೊಡ, ಬಿ.ಆರ್. ಪಾಟೀಲ್, ಗ್ರಾಮಸ್ಥರು, ಗ್ರಾ.ಪಂ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ತಡಿಬಿಡಿ ಗ್ರಾಮದಲ್ಲಿ ಪಂಚಾಯಿತಿಯ ವತಿಯಿಂದ ಜಾರಿಗೆ ತಂದ ಒಂದು ಕೆಜಿ ಪ್ಲಾಸ್ಟಿಕ್ ನೀಡಿದರೆ 1 ಕೆ.ಜಿ ಸಕ್ಕರೆ ಉಚಿತ ಎಂಬ ಯೋಜನೆಯ ಬಗ್ಗೆ ತಾ.ಪಂ.ಇಒ ಹಾಗೂ ಪಿಡಿಒ ಅವರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ಒರಡಿಯಾ ಪ್ರಶಂಸೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.