
ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹಾಗೂ ತಾಲ್ಲೂಕಿನ ಮುಂಗಾರು ಹಂಗಾಮಿನಲ್ಲಿ ಬೆಳೆಯಲಾಗಿರುವ ಭತ್ತ ಬಹುತೇಕ ರಾಶಿ ಮಾಡುವ ಹಂತಕ್ಕೆ ಬಂದಿದ್ದು, ಕಳೆದ ಎರಡು ಮೂರು ದಿನಗಳಲ್ಲಿ ತಾಲ್ಲೂಕಿನಲ್ಲಿ ಭತ್ತದ ಕಟಾವು ಆರಂಭವಾಗಿದ್ದು, ಇನ್ನೂ ಒಂದು ವಾರದಲ್ಲಿ ಕಟಾವು ವೇಗ ಪಡೆದುಕೊಳ್ಳಲಿದೆ.
ಪ್ರತಿ ವರ್ಷವೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಅದರಲ್ಲೂ ತಾಲ್ಲೂಕಿನಲ್ಲಿ ಶೇ 60 ರಷ್ಟು ಕೃಷಿ ಭೂಮಿಯಲ್ಲಿ ಭತ್ತ ನಾಟಿ ಮಾಡಲಾಗುತ್ತಿದೆ. ಈ ಬಾರಿ ಹುಣಸಗಿ ತಾಲ್ಲೂಕಿನಲ್ಲಿಯೇ ಸುಮಾರು 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ ಎಂದು ಅಂದಾಜಿಸಲಾಗಿದೆ.
‘ಕಳೆದ ಒಂದು ವಾರದಿಂದಲೂ ಮಂಜು ಕವಿದ ವಾತಾವರಣ ಹಾಗೂ ಚಳಿಯಿಂದಾಗಿ ಬೆಳಿಗ್ಗೆ 9 ಗಂಟೆಗೆ ಬಳಿಕ ಕಟಾವು ಆರಂಭಿಸಲಾಗುತ್ತಿದೆ. ಆರಂಭಿಕ ಹಂತದಲ್ಲಿ ಆರ್‌ಎನ್‌ಆರ್ ತಳಿಯ ಭತ್ತ 1700 ರಿಂದ 1750 ವರೆಗೆ ಖರೀದಿ ನಡೆದಿತ್ತು. ಇನ್ನೂ ಹೆಚ್ಚಿನ ಧಾರಣಿ ಬರುವ ನೀರಿಕ್ಷೆಯಲಿದ್ದೇವೆ’ ಎಂದು ಕೆಲ ರೈತರು ಹೇಳಿದರು.
‘ಹುಣಸಗಿ ಸುತ್ತಮುತ್ತಲಿನ ಪ್ರದೇಶದಲ್ಲಿಆರ್‌ಎನ್‌ಆರ್ ತಳಿಯ ಭತ್ತ ಎಕರೆಗೆ 50 ಚೀಲದಷ್ಟು ಇಳುವರಿ ಬಂದಿದೆ. ಆದರೆ ಸೋನಾ ತಳಿಯ ಭತ್ತದ ಕಟಾವು ಆರಂಭವಾದ ಬಳಿಕವಷ್ಟೇ ಆ ತಳಿಯ ಇಳಿವರಿಯ ಮಾಹಿತಿ ಲಭ್ಯವಾಗಲಿದೆ. ಆದರೆ ಮಾಳನೂರು, ಗುಳಬಾಳ, ರಾಜನಕೋಳುರು ಭಾಗದಲ್ಲಿ ಇಳುವರಿ ಕಡಿಮೆ ಬರುತ್ತಿದೆ. ಈ ಹಿಂದೆ ಎಕರೆಗೆ 40 ಚೀಲದಷ್ಟು ಮಾತ್ರ ಇಳುವರಿ ಬರುತ್ತಿತ್ತು’ ಎನ್ನುತ್ತಾರೆ ರೈತರಾದ ತಿರುಪತಿ ವಡಗೇರಿ ಹಾಗೂ ರಾಮನಗೌಡ ವಠಾರ.
‘ಲಕ್ಷಾಂತರ ಹಣ ಖರ್ಚು ಮಾಡಿ ಭತ್ತದ ಕೃಷಿಯಲ್ಲಿ ತೊಡಗಿಕೊಂಡಿರುತ್ತೇವೆ. ನಾಟಿ ಮಾಡುವದು, ಮೂರು ಬಾರಿ ಗೊಬ್ಬರ, ಕಳೆ ತೆಗೆಯುವದು ಹೀಗೆ ವಾರವೂ ಖರ್ಚು ಇದೆ. ಎಲ್ಲಿ ಮತ್ತೆ ಸಾಲದ ಸುಳಿಯಲ್ಲಿಯೇ ಕಾಲ ಕಳೆಯುಂತಾಗುತ್ತದೆ’ ಎಂದು ವಜ್ಜಲ ಗ್ರಾಮದ ರೈತರಾದ ಸಿದ್ದನಗೌಡ ಗುರಡ್ಡಿ, ಬಸವರಾಜ ಮೇಟಿ ತಿಳಿಸಿದರು.
‘ಜುಲೈ ಆರಂಭದಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದಾಗಿ ಅವಧಿಗೂ ಮುನ್ನವೇ ಕಾಲುವೆಗೆ ನೀರು ಹರಿಸಲಾಗಿತ್ತು. ಅಲ್ಲದೇ ಆಗಾಗ ಮತ್ತೆ ಮಳೆಯಾಗಿದ್ದರಿಂದಾಗಿ ಭತ್ತದ ಬೆಳೆಗೆ ಅನುಕೂಲವಾಗಿದೆ’ ಎಂದು ಮಾಳನೂರು ಗ್ರಾಮದ ತಿಪ್ಪಣ್ಣ ಕಾರನೂರು ಹಾಗೂ ಗುಳಬಾಳ ಗ್ರಾಮದ ಮಲ್ಲನಗೌಡ ಪಾಟೀಲ ವಿವರಿಸಿದರು.
ಅಂದಾಜು 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಎಕರೆಗೆ ₹ 35 ರಿಂದ 40 ಸಾವಿರ ಖರ್ಚು ಆರ್‌ಎನ್‌ಆರ್ ತಳಿ 47 ರಿಂದ 52 ಚೀಲ ಇಳುವರಿ
ಎರಡು ದಿನದಲ್ಲಿ ದರ ಹೆಚ್ಚಳ
‘ಕಳೆದ ಎರಡು ದಿನಗಳಿಂದ ಆರ್‌ಎನ್‌ಆರ್ ತಳಿಯ 75 ಕೆ.ಜಿ ಭತ್ತಕ್ಕೆ ಕಳೆದ ಐದು ದಿನಗಳ ಹಿಂದೆ ₹ 1700 ಇತ್ತು ಸೋಮವಾರ ₹ 1850 ಇದೆ. ಅನ್ನಪೂರ್ಣ ತಳಿಯ ಭತ್ತಕ್ಕೆ ₹ 1650 ಇತ್ತು ₹ 1750 ಇದೆ’ ಎಂದು ಖರೀದಿದಾರ ಆರ್.ವೆಂಕಟರಾವ್ ‘ಪ್ರಜಾವಾಣಿ’ ಮಾಹಿತಿ ನೀಡಿದರು. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರಿಗೆ ನೀರು ಲಭ್ಯವಾಗುತ್ತಿಲ್ಲವಾದ್ದರಿಂದಾಗಿ ಅಲ್ಲಿನ ರೈತರು ಶೇಖರಣೆಗೆ ಮುಂದಾಗಿದ್ದಾರೆ. ಆದ್ದರಿಂದ ತುಮಕೂರು ದಾವಣಗೆರೆ ಸಿರಗುಪ್ಪಾ ಸೇರಿದಂತೆ ಇತರೆ ಭಾಗಗಳಿಂದ ಖರೀದಿದಾರರು ಇಲ್ಲಿನ ಭತ್ತ ಖರೀದಿಗೆ ಆಸಕ್ತಿ ತೋರಿಸಿದ್ದಾರೆ. ಆದ್ದರಿಂದ ಈ ಭಾಗದ ರೈತರಿಗೆ ದರದಲ್ಲಿ ಅನುಕೂಲವಾಗುತ್ತಿದೆ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.