ADVERTISEMENT

ಹುಣಸಗಿ: ಚುರುಕುಗೊಂಡ ಭತ್ತದ ನಾಟಿ ಕಾರ್ಯ

ಭೀಮಶೇನರಾವ ಕುಲಕರ್ಣಿ
Published 21 ಜುಲೈ 2025, 7:17 IST
Last Updated 21 ಜುಲೈ 2025, 7:17 IST
ಹುಣಸಗಿ ಪಟ್ಟಣದ ಹೊರವಲಯಲ್ಲಿ ಭತ್ತ ನಾಟಿಗಾಗಿ ಸಸಿ ಬೆಳೆಸಿರುವುದು
ಹುಣಸಗಿ ಪಟ್ಟಣದ ಹೊರವಲಯಲ್ಲಿ ಭತ್ತ ನಾಟಿಗಾಗಿ ಸಸಿ ಬೆಳೆಸಿರುವುದು   

ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ 30 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯ ಭರದಿಂದ ನಡೆದಿದೆ.

ಅವಳಿ ಜಲಾಶಯಗಳು ಭರ್ತಿ ಆಗಿದ್ದು, ಐಸಿಸಿ ಸಭೆಯನ್ನು ಶೀಘ್ರ ಮುಗಿಸಲಾಯಿತು. ಹೀಗಾಗಿ ಜುಲೈ 8ರಿಂದ ಕಾಲುವೆಗೆ ನೀರು ಹರಿಸಲಾಗಿದೆ. ಆದರೆ ರೈತರು ತಡವಾಗಿ ಸಸಿ ಹಾಕಿಕೊಂಡಿದ್ದರಿಂದ ಕಳೆದ 2–3 ದಿನಗಳಿಂದ ಭತ್ತ ನಾಟಿ ಕಾರ್ಯ ಆರಂಭವಾಗಿದೆ. ಇನ್ನೂ 15 ದಿನಗಳವರೆಗೆ ಎಡಬಿಡದೆ ಭತ್ತ ನಾಟಿ ಕಾರ್ಯ ನಡೆಯಲಿದೆ ಎಂದು ರೈತರು ಹೇಳಿದರು.

‘ಯಾದಗಿರಿ, ಕಲಬುರಗಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳ ರೈತರಿಗೆ ನೀರು ಒದಗಿಸುತ್ತಿರುವ ಆಲಮಟ್ಟಿ ಮತ್ತು ನಾರಾಯಣಪುರ ಬಸವಸಾಗರ ಜಲಾಶಯ ಕಳೆದ 13 ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಅವಧಿಗೂ ಮುನ್ನ ಭರ್ತಿಯಾಗಿದೆ. ಹೀಗಾಗಿ ಈ ಬಾರಿ ಕೃಷ್ಣೆಗೆ ಬಾಗೀನ ಅರ್ಪಿಸಿ, ಪೂಜೆ ಸಲ್ಲಿಸಿರುವುದು ಖುಷಿ ತಂದಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲನಗೌಡ ನಗನೂರು ಹೇಳಿದರು.

ADVERTISEMENT

‘ಮಳೆಯಾಶ್ರಿತ ಪ್ರದೇಶದಲ್ಲಿ ಕೊಡೇಕಲ್ಲ ವಲಯದಲ್ಲಿ ತೊಗರಿ, ಸಜ್ಜೆ, ಹೆಸರು ಕಳೆದ ತಿಂಗಳ ಹಿಂದೆಯೇ ಬಿತ್ತನೆ ಮಾಡಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿದ್ದರಿಂದ ಬಿತ್ತಿದ ಬೆಳೆ ಚನ್ನಾಗಿದೆ ಎಂದು ಶ್ರೀನಿವಾಸಪುರ ಗ್ರಾಮದ ಭೀಮರಾಯ ತಿಳಿಸಿದರು.

‘ತಾಲ್ಲೂಕಿನಲ್ಲಿ ಬಹುತೇಕ ನೀರಾವರಿ ಕ್ಷೇತ್ರದಲ್ಲಿ ರೈತರು ಭತ್ತ ನಾಟಿಗಾಗಿ ಸೋನಾ ಹಾಗೂ ಕಾವೇರಿ ಸೋನಾ, ಆರ್‌ಎನ್‌ಆರ್ ತಳಿಯ ಭತ್ತ ನಾಟಿಗಾಗಿ ಸಸಿ ಹಾಕಿಕೊಂಡಿದ್ದು, ಒಂದು ತಿಂಗಳ ಸಸಿ ನಾಟಿಗೆ ಸಿದ್ಧವಾಗಿವೆ’ ಎನ್ನುತ್ತಾರೆ ಗೆದ್ದಲಮರಿ ಗ್ರಾಮದ ರೈತ ಶಿವರಾಜ ಹೊಕ್ರಾಣಿ, ಆಮಯ್ಯ ಮಠ, ಶಿವರಡ್ಡಿ ಬಿರಾದಾರ.

‘ಈಗಾಗಲೇ ಎರಡು ಬಾರಿ ಟಿಲ್ಲರ್ ಹಾಗೂ ಬಲ್ಲ ಹೊಡೆದು ಹೊಲವನ್ನು ಹದಗೊಳಿಸಲಾಗಿದೆ. ಇನ್ನೂ ಎರಡು ದಿನಗಳಲ್ಲಿ ನಾಟಿ ಆರಂಭಿಸಲಾಗುವುದು ಎಂದು ಕಾಮನಟಗಿ ಗ್ರಾಮದ ನರಸಿಂಹರಾವ ಜಹಾಗೀರದಾರ, ಮಾರುತಿ ಕುಲಕರ್ಣಿ, ದ್ಯಾಮನಹಾಳ ಗ್ರಾಮದ ಲಕ್ಷ್ಮೀಕಾಂತ ಕುಲಕರ್ಣಿ ತಿಳಿಸಿದರು.

ಒಂದೇ ಬಾರಿಗೆ ನಾಟಿ ಕಾರ್ಯ ಆರಂಭವಾಗಲಿದ್ದು, ಬಹುತೇಕ ಗ್ರಾಮಗಳಲ್ಲಿ ಕಾರ್ಮಿಕರ ಸಮಸ್ಯೆ ಎದುರಾಗಬಹುದು ಎಂದು ಹೇಳಲಾಗುತ್ತಿದೆ.

ಕೃಷ್ಣಾ ನದಿಗೆ ನೀರು: ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಭಾನುವಾರ ಬೆಳಿಗ್ಗೆ 85 ಸಾವಿರು ಕ್ಯೂಸೆಕ್ ಇದ್ದ, ಒಳ ಹರಿವು ಸಂಜೆ 65 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿದೆ. ಈ ಹಿನ್ನೆಲೆಯಲ್ಲಿ ಸಂಜೆ 15 ಗೇಟ್‌ಗಳ ಮೂಲಕ 48 ಸಾವಿರ ಕ್ಯೂಸೆಕ್ ಹಾಗೂ ಎಂಪಿಸಿಎಲ್ ಮುಖಾಂತರ 6 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ ಎಂದು ಅಣೆಕಟ್ಟೆಯ ವಿಭಾಗ ಸಹಾಯಕ ಎಂಜಿನಿಯರ್ ವಿಜಯಕುಮಾರ ಅರಳಿ ಮಾಹಿತಿ ನೀಡಿದರು. 

ನಾರಾಯಣಪುರ ಜಲಾಶಯ: ಇಲ್ಲಿನ ಎಡದಂಡೆ ಮುಖ್ಯ ಕಾಲುವೆಗೆ 4 ಸಾವಿರ ಹಾಗೂ ಬಲದಂಡೆ ಮುಖ್ಯ ಕಾಲುವೆಗೆ ಒಂದು ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.

‘ರಸಗೊಬ್ಬರದ ಬಳಕೆ ಮಿತವಾಗಿರಲಿ’
ಹುಣಸಗಿ: ತಾಲ್ಲೂಕಿನಲ್ಲಿ ಭತ್ತ ನಾಟಿ ಕಾರ್ಯ ಆರಂಭವಾಗಿದ್ದು ರೈತರು ರಸಗೊಬ್ಬರವನ್ನು ಹಿತ ಮತ್ತು ಮಿತವಾಗಿ ಬಳಸಬೇಕು ಎಂದು ಕೃಷಿ ಅಧಿಕಾರಿ ಸಿದ್ಧಾರ್ಥ ಪಾಟೀಲ ತಿಳಿಸಿದ್ದಾರೆ. ಅತಿಯಾದ ಗೊಬ್ಬರ ಹಾಗೂ ನೀರು ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಮಣ್ಣಿನ ಗುಣಧರ್ಮಕ್ಕೆ ತಕ್ಕಂತೆ ಗೊಬ್ಬರ ಮಿತಬಳಕೆ ಮಾಡಬೇಕು. ನ್ಯಾನೊ ಯೂರಿಯಾ ಹಾಗೂ ಡಿಎಪಿ ಗೊಬ್ಬರ ಬಳಸುವುದರಿಂದ ಬೆಳಗಳಿಗೂ ಹೆಚ್ಚು ಶಕ್ತಿ ನೀಡುತ್ತವೆ. ಈ ನ್ಯಾನೊ ಗೊಬ್ಬರ ಬಳಕೆಗೆ ಆದ್ಯತೆ ನೀಡಬೇಕು ಎಂದು ರೈತರಿಗೆ ಕಿವಿಮಾತು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.