ADVERTISEMENT

ಹುಣಸಗಿ | ಭತ್ತದ ಹುಲ್ಲಿಗೆ ಬೆಂಕಿ: ಸುಧಾರಿತ ಕ್ರಮಕ್ಕೆ ಸಲಹೆ

ಹಿಂಗಾರು ಹಂಗಾಮಿಗೆ ನಾಟಿ ಮಾಡಿಕೊಳ್ಳಲು ಅಳಿದುಳಿದ ಭತ್ತಕ್ಕೆ ಬೆಂಕಿ

ಭೀಮಶೇನರಾವ ಕುಲಕರ್ಣಿ
Published 1 ಡಿಸೆಂಬರ್ 2025, 5:39 IST
Last Updated 1 ಡಿಸೆಂಬರ್ 2025, 5:39 IST
ಹುಣಸಗಿ ಪಟ್ಟಣದ ಹೊರವಲಯದಲ್ಲಿ  ಭತ್ತದ ಹುಲ್ಲು ಸುಟ್ಟಿರುವದು
ಹುಣಸಗಿ ಪಟ್ಟಣದ ಹೊರವಲಯದಲ್ಲಿ  ಭತ್ತದ ಹುಲ್ಲು ಸುಟ್ಟಿರುವದು   

ಹುಣಸಗಿ: ತಾಲ್ಲೂಕು ಸೇರಿದಂತೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ರಾಶಿ ಕೆಲ ಹಳ್ಳಿಗಳಲ್ಲಿ ಮುಕ್ತಾಯದ ಹಂತದಲ್ಲಿಯೇ ಇದ್ದರೇ, ಇನ್ನೂ ಕೆಲ ಗ್ರಾಮಗಳಲ್ಲಿ ಬಹುತೇಕ ಪೂರ್ಣಗೊಂಡಿವೆ. ಆದರೆ ಮತ್ತೆ ಹಿಂಗಾರು ಹಂಗಾಮಿಗೆ ನಾಟಿ ಮಾಡಿಕೊಳ್ಳಲು ರಾಶಿ ಮಾಡಿ ಅಳಿದುಳಿದ ಭತ್ತದ ಹುಲ್ಲನ್ನು ಹಾಗೂ ತಳ ಭಾಗದಲ್ಲಿರುವ ಗಡ್ಡಿಗಳನ್ನು ರೈತರು ಸುಡುತ್ತಿರುವದು ಕಂಡು ಬರುತ್ತಿದೆ.

ಇದರಿಂದಾಗಿ ಕಳೆದ ಮೂರು ದಿನಗಳಿಂದ ಅಲ್ಲಲ್ಲಿ ದಟ್ಟ ಹೊಗೆ ಕಂಡು ಬರುತ್ತಿದೆ. ಇದು ಚಿಕ್ಕ ಮಕ್ಕಳು ಹಾಗೂ ವೃದ್ಧರಿಗೂ ತೊಂದರೆಯುಂಟು ಮಾಡುತ್ತಿದೆ. ವಾತಾವರಣ ಕಲುಷಿತವಾಗುತ್ತಿದ್ದರಿಂದಾಗಿ ಅಲ್ಲಲ್ಲಿ ನೆಗಡಿ ಹಾಗೂ ಕೆಮ್ಮು, ದಮ್ಮು, ಉಸಿರಾಟದ ಸಮಸ್ಯೆ ಕೂಡಾ ಕಾಣಿಸುವ ಸಾಧ್ಯತೆಯಿದೆ.

‘ಇದರಿಂದ ಯಾರಿಗಾದರೂ ತೊಂದರೆ ಇದ್ದಲ್ಲಿ ಅವರು ಮುಂಜಾಗ್ರತೆ ವಹಿಸುವದು ಅಗತ್ಯ ಇದೆ ಎನ್ನುತ್ತಾರೆ’ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ.ನಾಯಕ.

ADVERTISEMENT

ಮಾಲಿನ್ಯದ ಜೊತೆಗೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಜಮಿನುಗಳಲ್ಲಿ ಬರುವ ಹೊಗೆಯಿಂದ ಮುಂದೆ ಬರುವ ವಾಹನಗಳು ಕೂಡಾ ಕಾಣದಂತಾಗುತ್ತದೆ. ಪ್ರತಿ ವರ್ಷವೂ ಭತ್ತದ ಹುಲ್ಲು ಸುಡದಂತೆ ಅದನ್ನು ಗೊಬ್ಬರವಾಗಿ ಮಾಡಿಕೊಳ್ಳಲು ಕೃಷಿ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ತಿಳಿವಳಿಕೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕಿದೆ. ಕೆಲವು ರೈತರು ಇನ್ನೂ ಸುಧಾರಿತ ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

‘ರೈತರು ಮಣ್ಣಿನ ಫಲವತ್ತತೆ ಕಾಪಾಡುವ ನಿಟ್ಟಿನಲ್ಲಿ ಸುಧಾರಿತ ಕ್ರಮಗಳನ್ನು ಅನುಸರಿಸುವದು ಅಗತ್ಯವಿದೆ. ಆದ್ದರಿಂದ ಹುಲ್ಲು ಸುಡಬೇಡಿ’ ಎಂದು ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಯ್ಯಸ್ವಾಮಿ ದೇಸಾಯಿಗುರು ಹಾಗೂ ತಾಲ್ಲೂಕು ಅಧ್ಯಕ್ಷ ಮಲ್ಲನಗೌಡ ನಗನುರು ಹೇಳಿದರು.

‘ಯಂತ್ರಗಳ ಸಹಾಯದಿಂದ ಹುಲ್ಲು ತೆಗೆಯಿರಿ’

‘ಫಲವತ್ತಾದ ಮಣ್ಣಿನಲ್ಲಿ ಅತ್ಯಂತ ಮಹತ್ವದ ಪೋಷಕಾಂಶಗಳು ಜೀವಕೋಶಗಳು ರೈತ ಸ್ನೇಹಿ ಕೀಟಗಳು ಇರುತ್ತವೆ. ಅವುಗಳ ರಕ್ಷಣೆ ಮಾಡಿಕೊಳ್ಳುವದು ರೈತರ ಪ್ರಮುಖ ಕರ್ತವ್ಯವಾಗಿದೆ. ಆದರೆ ಕೆಲವೇ ದಿನ ಅವಧಿಯಲ್ಲಿ ಹಿಂಗಾರು ನಾಟಿಗೆ ಅಣಿಯಾಗುವದು ಅನಿವಾರ್ಯತೆ ಇದ್ದರೂ ಯಾವುದೇ ಕಾರಣಕ್ಕೂ ಹುಲ್ಲನ್ನು ಸುಡದೇ ಯಂತ್ರಗಳ ಸಹಾಯದಿಂದ ಎಲ್ಲ ಹುಲ್ಲನ್ನು ತೆಗೆಯಲು ಸಾಧ್ಯ ಎನ್ನುತ್ತಾರೆ’ ವಿಜ್ಞಾನಿ ಹಾಗೂ ಮಾಳನೂರು ಕೃಷಿ ಶಂಶೋಧನಾ ಕೇಂದ್ರದ ಆವರಣ ಮುಖ್ಯಸ್ಥ ವಿಜಯಕುಮಾರ ಪಲ್ಲೇದ. ‘ಈ ಕುರಿತು ಕೇಂದ್ರ ಆವರಣದಲ್ಲಿ ರೈತರ ಜಾಗೃತಿ ಸಭೆಯನ್ನು ಮಾಡಲಾಗಿದ್ದು ಟ್ರಾಕ್ಟರ್‌ ಚಾಲಿತ ರವದಿ ಕಟಾವು ಹಾಗೂ ಹೊದಿಕೆ ಯಂತ್ರ (ಮಲ್ಚರ್‌) ಬಂದಿದೆ. ಇದು ಭತ್ತದ ಎಲ್ಲ ಅಳಿದುಳಿದ ಹುಲ್ಲು ರವದಿಯನ್ನು ಕಟಾವು ಮಾಡಿ ಮಣ್ಣಿನಡಿ ಸೇರಿಸುತ್ತದೆ’ ಎಂದು ವಿವರಿಸಿದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 98445 44007.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.