ಯಾದಗಿರಿ: ಜಿಲ್ಲೆಯು ತೆಲಂಗಾಣ ಗಡಿಯನ್ನು ಹಂಚಿಕೊಂಡಿದ್ದು, ಈ ಗಡಿ ಗ್ರಾಮಗಳಲ್ಲಿ ಹಳ್ಳಿಗಳ ಹೆಸರು ‘ಪಲ್ಲಿ’ಗಳಾಗಿವೆ. ‘ಹಳ್ಳಿ’ಗಳನ್ನು ಮಾಡಿ ಎಂದು ಕನ್ನಡಪರ ಹೋರಾಟಗಾರರು ನವೆಂಬರ್ 1ಕ್ಕೆ ಮಾತ್ರ ಒತ್ತಾಯಿಸುತ್ತಾರೆ. ಆನಂತರ ಮತ್ತೆ ಹೋರಾಟಕ್ಕೆ ಇನ್ನೊಂದು ನವೆಂಬರ್ ತಿಂಗಳಿಗಾಗಿ ಕಾಯಬೇಕಿದೆ. ಕಂದಾಯ ಇಲಾಖೆಯೂ ಬಗ್ಗೆ ಬದಲಾವಣೆಗೆ ಮನಸ್ಸು ಮಾಡಿಲ್ಲ.
ಇತ್ತೀಚೆಗೆ ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕು ಅನ್ನು ಭಾಗ್ಯನಗರ ಎಂದು ನಿರ್ಣಯಿಸಲಾಗಿದೆ. ಹೀಗಾಗಿ ತೆಲಂಗಾಣ ಗಡಿ ಹೊಂದಿಕೊಂಡಿರುವ ಜಿಲ್ಲೆಯ ಗ್ರಾಮಗಳು ಪಲ್ಲಿಗಳಾಗಿದ್ದು, ಇವುಗಳನ್ನು ಕನ್ನಡದ ಹಳ್ಳಿಗಳಾಗಿ ಮಾರ್ಪಾಡು ಮಾಡಬೇಕು ಎಂದು ಈ ಭಾಗದ ಕನ್ನಡ ಅಭಿಮಾನಿಗಳ ಒತ್ತಾಯವಾಗಿದೆ.
ಯಾದಗಿರಿ ತಾಲ್ಲೂಕಿನ ಕೆಲ ಗ್ರಾಮಗಳು, ಗುರುಮಠಕಲ್ ತಾಲ್ಲೂಕು ವ್ಯಾಪ್ತಿಯಲ್ಲಿ ಹಳ್ಳಿಗಳ ಹೆಸರುಗಳು ಪಲ್ಲಿಗಳಿಂದಲೇ ಇಂದಿಗೂ ಕರೆಸಿಕೊಳ್ಳುತ್ತವೆ. ತೆಲುಗಿನಲ್ಲಿ ಪಲ್ಲಿ ಎಂದರೆ ಹಳ್ಳಿ ಎಂದರ್ಥ. ಆದರೆ, ಕನ್ನಡ ಅರ್ಥ ಬರುವ ಹಳ್ಳಿ ಎನ್ನುವ ಪದಬಳಕೆ ಇಲ್ಲ. ಶಾಲಾ ದಾಖಲಾತಿ, ಕಂದಾಯ ದಾಖಲೆಯಲ್ಲಿಯೂ ಪಲ್ಲಿಗಳ ಪದ ಬಳಕೆ ಕಾಣಬಹುದಾಗಿದೆ. ಜನರು ಪಲ್ಲಿಗಳಿಗೆ ಹೊಂದಿಕೊಂಡಿದ್ದಾರೆ. ಕನ್ನಡದ ನೆಲದಲ್ಲೂ ತೆಲುಗು ಪ್ರಭಾವದಿಂದ ಕನ್ನಡ ಭಾಷೆಗೆ ಕುತ್ತು ತಂದಿದೆ.
ಕನ್ನಡ ಅಸ್ತಿತ್ವ ಮಾಯ: ಕಲೆ, ಸಾಹಿತ್ಯ, ಸಂಸ್ಕೃತಿ ಇಲ್ಲದೆ ಕನ್ನಡಿಗರ ಅಸ್ತಿತ್ವವೇ ನಾಶವಾಗುತ್ತಿದೆ. ಕನ್ನಡ ಶಾಲೆಗಳು, ಕನ್ನಡ ಸಂಸ್ಥೆಗಳು ನಿಷ್ಕ್ರಿಯವಾಗಿವೆ. ಗಡಿನಾಡು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಅಲ್ಲಿನ ಕನ್ನಡಿಗರೇ ದೂರುತ್ತಾರೆ.
ನವೆಂಬರ್‌ಗೆ ಮಾತ್ರ ಸೀಮಿತ: ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡಪರ ಸಂಘಟನೆಗಳು ಕನ್ನಡ ಪ್ರೇಮವನ್ನು ಮೆರೆಯುತ್ತವೆ. ಆನಂತರ ಗಡಿ ಭಾಗದ ಕನ್ನಡಿಗರ ಬಗ್ಗೆ ಯಾವುದೇ ಚಕಾರವೆತ್ತುವುದಿಲ್ಲ. ಇದರಿಂದ ಗಡಿ ಭಾಗದ ಬಗ್ಗೆ ಸರ್ಕಾರಕ್ಕೆ ನಿರ್ಲಕ್ಷ್ಯ ವಹಿಸಿವೆ ಎಂದು ಗಡಿ ಗ್ರಾಮಸ್ಥರ ಆರೋಪವಾಗಿದೆ.
ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಗುರುಮಠಕಲ್ ತಾಲ್ಲೂಕಿನ ಹಲವು ಹಳ್ಳಿಗಳು ‘ಪಲ್ಲಿ’ಗಳಾಗಿ ಇನ್ನು ಉಳಿದುಕೊಂಡಿವೆ. ಮಿನಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಸ್ಲೇಪಲ್ಲಿ ಅಮ್ಮಾಪಲ್ಲಿ ಅಜಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬದ್ದೇಪಲ್ಲಿ ಬದ್ದೇಪಲ್ಲಿ ತಾಂಡಾ ಕೊಂಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಮೇಶಪಲ್ಲಿ ನಂದೇಪಲ್ಲಿ ಪಾಡಪಲ್ಲಿ ಕಂದಕೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಂತನಪಲ್ಲಿ ಚಿಂತನಪಲ್ಲಿ ತಾಂಡಾ ಅನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡೇಪಲ್ಲಿ ಕಾಕಲವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಟಿಪಲ್ಲಿ ಚಂಡ್ರಿಕಿ ಗ್ರಾಮ ಪಂಚಾಯಿತಿ ಮಾಡೇಪಲ್ಲಿ ಪಲ್ಲಿಗಳಾಗಿ ಉಳಿದುಕೊಂಡಿವೆ. ಯಾದಗಿರಿ ತಾಲ್ಲೂಕಿನ ಕಡೇಚೂರು ಗ್ರಾಮ ಪಂಚಾಯಿತಿಯ ದುಪ್ಪಲ್ಲಿ ಹಾಗೇ ಉಳಿದುಕೊಂಡಿದೆ.
ಸಚಿವ ಸಂಪುಟದಲ್ಲಿ ಬಾಗೇಪಲ್ಲಿಯನ್ನು ಭಾಗ್ಯನಗರವಾಗಿ ಮಾಡಿರುವುದು ಸ್ವಾಗತಾರ್ಹ ಮತ್ತು ಅಭಿನಂದನೆ. ಅದರಂತೆ ಕಲ್ಯಾಣ ಕಲ್ಯಾಣ ಕರ್ನಾಟಕದ ತೆಲಂಗಾಣ ಆಂಧ್ರದ ಗಡಿಯನ್ನು ಹಂಚಿಕೊಂಡಿರುವ ಪಲ್ಲಿಗಳನ್ನು ಹಳ್ಳಿಗಳಾಗಿ ಹೆಸರು ಮಾರ್ಪಡಿಸಬೇಕು ಎಂದು ಗುರುಮಠಕಲ್‌ನ ಖಾಸಾ ಮಠದ ಪೀಠಾಧಿಪತಿ ಗುರು ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿಗೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಲು ಕನ್ನಡದ ಹೆಸರುಗಳು ಬಳಕೆಯಲ್ಲಿರಬೇಕು. ಆದರೆ ತೆಲುಗು ಪ್ರಭಾವದಿಂದ ಪಲ್ಲಿಗಳ ಹೆಸರು ಬಳಕೆಯಲ್ಲಿದೆ. ಕೂಡಲೇ ಅವುಗಳನ್ನು ಬದಲಾಯಿಸಲು ಜಿಲ್ಲಾಡಳಿತ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ಈ ಮೂಲಕ ಕನ್ನಡತನವನ್ನು ಉಳಿಸಬೇಕು ಎನ್ನುತ್ತಾರೆ ಅವರು.
ಜಿಲ್ಲೆಯ ತೆಲಂಗಾಣದ ಗಡಿ ಭಾಗದಲ್ಲಿ ಪಲ್ಲಿಗಳಿವೆ. ಸಂಘಟನೆಗಳು ಪಲ್ಲಿಗಳನ್ನು ಹಳ್ಳಿಗಳನ್ನು ಪರಿವರ್ತಿಸಲು ಮನವಿ ಮಾಡಿದರೆ ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು.-ಉತ್ತರದೇವಿ, ಸಹಾಯಕಿ ನಿರ್ದೇಶಕಿ ಕನ್ನಡ ಸಂಸ್ಕೃತಿ ಇಲಾಖೆ ಯಾದಗಿರಿ
ಕಂದಾಯ ಗ್ರಾಮಗಳಲ್ಲಿ ಪಲ್ಲಿಗಳ ಹೆಸರೇ ಬಳಕೆಯಲ್ಲಿದೆ. ಕೂಡಲೇ ಅವುಗಳ ಹೆಸರುಗಳನ್ನು ಕನ್ನಡೀಕರಣ ಮಾಡುವತ್ತ ಸಂಬಂಧಿಸಿದವರು.-ಮುಂದಾಗಲಿ ನಾಗೇಶ, ಗದ್ದುಗೆ ಸಾಮಾಜಿಕ ಹೋರಾಟಗಾರ
ಪಲ್ಲಿಗಳ ಬದಲಾಗಿ ಹಳ್ಳಿಗಳಾಗಿ ಮಾಡಲು ಈ ಬಗ್ಗೆ ಹಲವಾರು ಬಾರಿ ಪತ್ರ ಬರೆಯಲಾಗಿದೆ. ಆದರೆ ಜಿಲ್ಲಾಡಳಿತ ಸರ್ಕಾರ ಇದಕ್ಕೆ ಸ್ಪಂದಿಸಿಲ್ಲ. ಕೂಡಲೇ ಹಳ್ಳಿಗಳ ನಾಮಕರಣ ಮಾಡಿ.-ಶರಣು ಎಲ್ಹೇರಿ ಸಾಮಾಜಿಕ ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.