
ಕೆಂಭಾವಿ: ‘ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಸಮಾಜದಲ್ಲಿ ಒಬ್ಬ ಆದರ್ಶ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ’ ಎಂದು ಪದ್ಮಶ್ರೀ ಪುರಸ್ಕೃತೆ ಜೋಗತಿ ಮಂಜಮ್ಮ ಹೇಳಿದರು.
ಸಮೀಪದ ಕೂಡಲಿಗಿ ಗ್ರಾಮದಲ್ಲಿ ಶಾಂತಾನಂದ ಸರಸ್ವತಿ ಮಹಾರಾಜರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಅಧ್ಯಾತ್ಮ ಪ್ರವಚನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ಮಕ್ಕಳು ವಿದ್ಯೆಯ ಜೊತೆಗೆ ಗುರುಗಳಿಗೆ, ತಂದೆ-ತಾಯಿಗಳಿಗೆ ಗೌರವ ನೀಡುವ ಸಂಸ್ಕಾರವನ್ನು ಕಲಿಯಬೇಕು’ ಎಂದರು.
ಟಿವಿ, ಮೊಬೈಲ್‍ನಿಂದಾಗಿ ಪರಸ್ಪರ ಬಾಂಧವ್ಯಗಳು ಕಳಚಿಕೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ ಪಾಲಕರು ಆಧುನಿಕ ಜೀವನಕ್ಕೆ ಒಳಗಾಗದೆ, ಒತ್ತಾಯದ ಶಿಕ್ಷಣವನ್ನು ಹೇರದೆ ಮಕ್ಕಳೊಂದಿಗೆ ಸ್ನೇಹಿತರಾಗಿ, ಸಲಹೆಗಾರರಾಗಿ, ಒಳ್ಳೆಯ ಮಾರ್ಗದರ್ಶಕರಾಗಬೇಕು ಎಂದರು.
ಶಾಂತ ಸೇವಾರತ್ನ ಪ್ರಶಸ್ತಿಯನ್ನು ಬಾಳಕೃಷ್ಣರಾವ ಕುಲಕರ್ಣಿ ಕೆಂಭಾವಿ, ಶಾಂತ ಸೇವಾ ಕಿಂಕರ ಪ್ರಶಸ್ತಿಯನ್ನು ಶಾಂತಗೌಡ ಶರಣಪ್ಪಗೌಡ ಮಾಲಿಪಾಟೀಲ ಕರಡಕಲ ಅವರಿಗೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಜೋಗತಿ ನೃತ್ಯ ಪ್ರದರ್ಶನ ನೀಡಿದರು.
ಶ್ರೀಮಠದ ಪೀಠಾದಿಪತಿ ಉಮಾಕಾಂತ ಸಿದ್ಧರಾಜ ಬಾಬಾಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಕದಳಿ ಮಠದ ಮಾತೋಶ್ರೀ ಅಕ್ಕಮಹಾದೇವಿ, ಶಿವಕುಮಾರ ಸ್ವಾಮೀಜಿ, ಚೆನ್ನವೀರಯ್ಯಸ್ವಾಮಿ ಹಿರೇಮಠ, ಜನಾರ್ದನ ಪಾಣಿಭಾತೆ, ಸದಾಶಿವರೆಡ್ಡಿ ಶಾಸ್ತ್ರೀ, ಶಂಕರ ಶಾಸ್ತ್ರೀ, ಸಂಗಮೇಶ ಶರಣರು ಅಧ್ಯಾತ್ಮ ಪ್ರವಚನ ನಡೆಸಿಕೊಟ್ಟರು. ಮೃತ್ಯುಂಜಯ ಮಹಾರಾಜ, ಗಜಾನನ ಮಹಾರಾಜ ಇದ್ದರು.
ಭೀಮಾಶಂಕರ ಜೋಶಿ ನಿರೂಪಿಸಿದರು, ಗಂಗಾಧರ ಜೋಶಿ ಸ್ವಾಗತಿಸಿದರು, ಶಿವಭಟ್ಟ ಜೋಶಿ ವಂದಿಸಿದರು.
ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಮೊದಲು 10ನೇ ತರಗತಿವರೆಗೂ ಕನ್ನಡ ಭಾಷೆಯಲ್ಲಿಯೇ ಶಿಕ್ಷಣ ಕೊಡಿಸಬೇಕು
- ಜೋಗತಿ ಮಂಜಮ್ಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.