ADVERTISEMENT

‘ಕುಡಿವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ’

ದೂರವಾಣಿ ಮೂಲಕ ಸಾರ್ವಜನಿಕರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2018, 14:00 IST
Last Updated 1 ಡಿಸೆಂಬರ್ 2018, 14:00 IST
ಯಾದಗಿರಿಯ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಕುಡಿಯುವ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರಿಂದ ದೂರವಾಣಿ ಕರೆ ಆಲಿಸಿದರು
ಯಾದಗಿರಿಯ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಕುಡಿಯುವ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರಿಂದ ದೂರವಾಣಿ ಕರೆ ಆಲಿಸಿದರು   

ಯಾದಗಿರಿ: ‘ಜಿಲ್ಲೆಯ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದಾಗಿ ದೂರು ಬಂದಾಗ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ ಮತ್ತು ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ದೂರವಾಣಿ ಮೂಲಕ ಸಮಸ್ಯೆಗಳನ್ನು ಆಲಿಸಿ, ಅವರು ಮಾತನಾಡಿದರು.

ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ಆರಂಭಿಸಿ, ಬೆಳಿಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ದೂರುಗಳನ್ನು ಸ್ವೀಕರಿಸಬೇಕು. ಬಂದ ದೂರುಗಳನ್ನು ರಿಜಿಸ್ಟರ್‌ನಲ್ಲಿ ನೋಂದಾಯಿಸಿ, ಪರಿಹಾರಕ್ಕೆ ಮುಂದಾಗಬೇಕು. ಪರಿಹರಿಸಿದ ವರದಿಯೂ ಕೂಡ ರಿಜಿಸ್ಟರ್‌ನಲ್ಲಿ ನಮೂದು ಮಾಡಬೇಕು. ಅದರಂತೆ ನಗರಸಭೆಗಳಲ್ಲಿಯೂ ಸಹಾಯವಾಣಿ ಆರಂಭಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಸಹಾಯವಾಣಿ ಬಗ್ಗೆ ಪ್ರಚಾರ ನಡೆಸಲು ತಿಳಿಸಿದರು.

ADVERTISEMENT

‘ಕುಡಿಯುವ ನೀರು ಸರಬರಾಜಿಗಾಗಿ ಅನುದಾನದ ಕೊರತೆಯಿಲ್ಲ. ಕೈಕೊಳವೆಬಾವಿ ಅವಶ್ಯಕತೆ ಇರುವ ಗ್ರಾಮಗಳನ್ನು ಗುರುತಿಸಿ, ಕೊರೆಸಬೇಕು. ಕಡಿಮೆ ನೀರು ಬರುತ್ತಿರುವ ಬೋರ್‌ವೆಲ್‌ಗಳಿಗೆ ಫ್ಲಸ್ಸಿಂಗ್ ಮಾಡಿಸಬೇಕು. ಸಮಸ್ಯೆಗೆ ಅನುಗುಣವಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರೆ ಅಲ್ಲಿರುವ ಸ್ಥಿತಿಗತಿ ಅರ್ಥವಾಗುತ್ತದೆ. ಕುಡಿಯುವ ನೀರು ಸರಬರಾಜು ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಮೊಬೈಲ್ ವಾಹನದ ವ್ಯವಸ್ಥೆ: ಕೈಕೊಳವೆ ಬಾವಿ ದುರಸ್ತಿ ಮತ್ತು ಇನ್ನಿತರ ಸಣ್ಣಪುಟ್ಟ ಕೆಲಸಗಳನ್ನು ನಿರ್ವಹಿಸಲು ಮೊಬೈಲ್ ವಾಹನದ ವ್ಯವಸ್ಥೆ ಮಾಡಬೇಕು. ಅದಕ್ಕೆ ತಗುಲುವ ವೆಚ್ಚ, ವಾಹನದಲ್ಲಿ ಇರಿಸಬಹುದಾದ ಸಲಕರಣೆ ಮತ್ತು ಅಗತ್ಯ ವಸ್ತುಗಳು ಹಾಗೂ ಬೇಕಾಗುವ ಸಿಬ್ಬಂದಿ ಕುರಿತು ಮಾಹಿತಿ ನೀಡುವಂತೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತರಾವ್ ವಿ.ಕುಲಕರ್ಣಿ ಅವರಿಗೆ ಸೂಚಿಸಿದರು.

ಶಹಾಪುರ ತಾಲ್ಲೂಕಿನ ರಸ್ತಾಪುರದ ಹಯ್ಯಾಳಪ್ಪ ಅವರು ತಮ್ಮ ಗ್ರಾಮದಲ್ಲಿ ಮನೆಗಳಿಗೆ ನಲ್ಲಿ ವ್ಯವಸ್ಥೆ ಇಲ್ಲ. ಕೊಳವೆಬಾವಿಯಿಂದ ನೀರು ಪಡೆಯುತ್ತಿದ್ದೇವೆ. ನಳ ವ್ಯವಸ್ಥೆ ಮಾಡಿಸಲು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು. ಶಾಖಾಪುರದ ಶಿವನಗೌಡ ಅವರು ಕೊಳವೆಬಾವಿ ದುರಸ್ತಿಗೆ ಒತ್ತಾಯಿಸಿದರೆ, ಆರ್.ಹೊಸಳ್ಳಿ ತಾಂಡಾದ ರಾಮು ಅವರು ಕೊಳವೆಬಾವಿ ಕೊರೆಸಲು ಮನವಿ ಮಾಡಿದರು.

ಯಾದಗಿರಿ ನಗರದ 11ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ತೊಂದರೆ ಹೆಚ್ಚಾಗಿದೆ. 24 ಗಂಟೆ ನೀರು ಸರಬರಾಜಿಗಾಗಿ ಪೈಪ್‌ಲೈನ್ ಮಾಡಲಾಗಿದೆ. ಆದರೆ, ನೀರು ಬರುತ್ತಿಲ್ಲ ಎಂಬುದಾಗಿ ಸಿದ್ದು ಸೇರಿದಂತೆ ಇನ್ನಿತರರು ಕರೆ ಮಾಡಿ, ಸಮಸ್ಯೆಯನ್ನು ಹೇಳಿಕೊಂಡರು. ಜಿಲ್ಲಾಧಿಕಾರಿ ಈ ಬಗ್ಗೆ ನಗರಸಭೆ ಪೌರಾಯುಕ್ತರನ್ನು ಕೇಳಿದಾಗ, ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದೆ. ನೀರು ಪೂರೈಕೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಸಂಗಪ್ಪ ಉಪಾಸೆ ಉತ್ತರಿಸಿದರು.

ಹೆಚ್ವುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಉಪ ವಿಭಾಗಾಧಿಕಾರಿ ಡಾ.ಬಿ.ಎಸ್.ಮಂಜುನಾಥ ಸ್ವಾಮಿ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್ ರಾಜ್‌ಕುಮಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಂಡೆಪ್ಪ ಆಕಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.