ADVERTISEMENT

‘ಯಾದಗಿರಿ ಜನರ ಶಾಪದಿಂದ ಸಿಎಂಗೆ ಸಂಕಷ್ಟ’

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 12:33 IST
Last Updated 10 ಜುಲೈ 2019, 12:33 IST
ವೆಂಕಟರಡ್ಡಿ ಮುದ್ನಾಳ
ವೆಂಕಟರಡ್ಡಿ ಮುದ್ನಾಳ   

ಯಾದಗಿರಿ: ‘ಜಿಲ್ಲೆಯ ಚಂಡರಕಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಅಗತ್ಯವಿಲ್ಲ ಎಂದು ಹೇಳಿದ್ದರು. ಹೀಗಾಗಿ ಈ ಜಿಲ್ಲೆಯ ಜನರ ಶಾಪವೇ ಮುಖ್ಯಮಂತ್ರಿ ಕುರ್ಚಿ ಅಲ್ಲಾಡಲು ಕಾರಣವಾಗಿದೆ’ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಆರೋಪಿಸಿದರು.

ಬುಧವಾರ ಮೆಡಿಕಲ್‌ ಕಾಲೇಜಿಗೆ ಆಗ್ರಹಿಸಿ ಯಾದಗಿರಿ ಬಂದ್ ಅಂಗವಾಗಿ ನಡೆದ ಬೃಹತ್‌ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯ ಜನರ ಶಾಪವೇ ಮುಖ್ಯಮಂತ್ರಿಗೆ ಈ ಸ್ಥಿತಿ ಬಂದಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಮಂಜೂರಾಗಿರುವ ಮೆಡಿಕಲ್ ಕಾಲೇಜು ಬೇಡ ಎಂದು ಹೇಳಿರುವುದು ಜಿಲ್ಲೆಯ ಜನರ ಆಕ್ರೋಶ ಮತ್ತು ಶಾಪಕ್ಕೆ ಕಾರಣವಾಗಿದೆ’ ಎಂದು ವಿಶ್ಲೇಷಿಸಿದರು.

ADVERTISEMENT

‘ಯಾದಗಿರಿ ಬಂದ್‌ ಯಶಸ್ವಿಯಾಗಿದ್ದು, ಇನ್ನು ಮುಂದೆಯಾದರೂ ಸರ್ಕಾರ ವೈದ್ಯಕೀಯ ಕಾಲೇಜಿಗೆ ಅನುದಾನ ನೀಡಬೇಕು. ಇದರಿಂದ ಬೇರೆ ಜಿಲ್ಲೆಗೆ ರೋಗಿಗಳನ್ನು ಶಿಫಾರಸು ಮಾಡುವುದು ತಗ್ಗಲಿದೆ. ಇಲ್ಲದಿದ್ದರೆ ಬಿಜೆಪಿ ಸರ್ಕಾರದಲ್ಲಿ ಮೆಡಿಕಲ್ ಕಾಲೇಜು ಆರಂಭವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎ.ಬಿ.ಮಾಲಕರೆಡ್ಡಿ ಮಾತನಾಡಿ, ‘ಜಿಲ್ಲೆಯ ಜನರ ಬೇಡಿಕೆ ಈಡೇರಿಸದಿದ್ದರೆ ಪ್ರತ್ಯೇಕ ಕರ್ನಾಟಕ ಕೇಳಬೇಕಾಗುತ್ತಿದೆ. ಹೀಗಾಗಿ ಮೆಡಿಕಲ್ ಕಾಲೇಜಿಗಾಗಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.