ADVERTISEMENT

ಯಾದಗಿರಿ: ಪಾಂಡಿಚೇರಿ ನೋಂದಣಿ ವಾಹನಗಳ ತಡೆಗೆ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 6:59 IST
Last Updated 17 ಅಕ್ಟೋಬರ್ 2025, 6:59 IST
ಯಾದಗಿರಿ ನಗರದಲ್ಲಿ ಬೇರೆ ರಾಜ್ಯದ ನೊಂದಣಿ ವಾಹನಗಳನ್ನು ತಡೆದು ದಾಖಲಾತಿಗಳನ್ನು ಧಾರವಾಡ ಅಪರ್ ಪ್ರಾದೇಶಿಕ ಆಯುಕ್ತರಾದ ಕೆ.ಟಿ ಹಾಲಸ್ವಾಮಿ ಹಾಗೂ ಅಧಿಕಾರಿಗಳು ಪರಿಶೀಲಿಸಿದರು.
ಯಾದಗಿರಿ ನಗರದಲ್ಲಿ ಬೇರೆ ರಾಜ್ಯದ ನೊಂದಣಿ ವಾಹನಗಳನ್ನು ತಡೆದು ದಾಖಲಾತಿಗಳನ್ನು ಧಾರವಾಡ ಅಪರ್ ಪ್ರಾದೇಶಿಕ ಆಯುಕ್ತರಾದ ಕೆ.ಟಿ ಹಾಲಸ್ವಾಮಿ ಹಾಗೂ ಅಧಿಕಾರಿಗಳು ಪರಿಶೀಲಿಸಿದರು.   

ಯಾದಗಿರಿ: ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ತೆರಿಗೆ ವಂಚಿಸಿ ಓಡಾಡುತ್ತಿರುವ ಪಾಂಡಿಚೇರಿ ವಾಹನಗಳನ್ನು ತಡೆಗಟ್ಟಲು ವಿಶೇಷ ತಂಡಗಳನ್ನು ರಚಿಸಲಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಮೂರು ಪಾಂಡಿಚೇರಿ ವಾಹನಗಳಿಂದ ₹5 ಲಕ್ಷಕ್ಕೂ ಅಧಿಕ ದಂಡ ಹಾಗೂ ತೆರಿಗೆ ವಸೂಲು ಮಾಡಲಾಗಿದೆ ಎಂದು ಧಾರವಾಡ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಕೆ.ಟಿ ಹಾಲಸ್ವಾಮಿ ಅವರು ಹೇಳಿದರು.

ಈ ಕುರಿತು ನಗರದ ಆರ್.ಟಿ‌.ಒ ಕಚೇರಿಯಲ್ಲಿ ಗುರುವಾರ ಪ್ರಾದೇಶಿಕ ಸಾರಿಗೆ ಇಲಾಖೆಯ ಸಾಧನೆ ಹಾಗೂ ಮುನ್ನೋಟದ ಬಗ್ಗೆ ಮಾಹಿತಿ ನೀಡಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಈ ವಿಷಯವನ್ನು ಅವರು ತಿಳಿಸಿದರು.

ADVERTISEMENT

ಕರ್ಕಶ ಶಬ್ದ ಉಂಟುಮಾಡುವ, ಮಾಲಿನ್ಯ ಉಂಟು ಮಾಡುವ, ಪ್ರಕಾಶಮಾನವಾದ ದೀಪಗಳನ್ನು ಬಳಸುವ, ಪರವಾನಗಿ ಇಲ್ಲದೇ ಅನಧಿಕೃತವಾಗಿ ಸಂಚಾರ ಮಾಡುತ್ತಿರುವ, ಪರವಾನಗಿ ಇಲ್ಲದೆ ಪಟಾಕಿಗಳನ್ನು ಸಾಗಿಸುವ ಅನಧಿಕೃತ ವಾಹನಗಳ ವಿರುದ್ಧ ಕಾರ್ಯಾಚರಣೆ ಈಗಾಗಲೇ ಆರಂಭಿಸಲಾಗಿದೆ ಎಂದು ಹೇಳಿದರು.

ಏಪ್ರಿಲ್ ರಿಂದ ಸೆಪ್ಟೆಂಬರ್ ಅಂತ್ಯದ ವರೆಗೆ ₹32 ಲಕ್ಷ ದಂಡ ಹಾಗೂ ತೆರಿಗೆ ರೂಪದಲ್ಲಿ ಪಾವತಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಸಾರ್ವಜನಿಕರು ತಮ್ಮ ವಾಹನಗಳ ಕುರಿತು ಅಧಿಕೃತ ದಾಖಲೆಗಳಾದ ಡ್ರೈವಿಂಗ್ ಲೈಸೆನ್ಸ್, ತೆರಿಗೆ ಹಾಗೂ ಅರ್ಹತಾ ಪ್ರಮಾಣ ಪತ್ರ, ಅಧಿಕೃತ ವಿಮೆ ಪಾವತಿಯ ದಾಖಲಾತಿಗಳನ್ನು ಇಟ್ಟುಕೊಂಡು ಸಂಚರಿಸುವಂತೆ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಯಾದಗಿರಿ ಆರ್.ಟಿ.ಓ ಮಿಲಿಂದ್ ಕುಮಾರ್ ಎಸ್.ಎಸ್, ಮೋಟಾರ್ ವಾಹನ ನಿರೀಕ್ಷಕ ಹಯ್ಯಾಳಪ್ಪ, ಶಿವಕುಮಾರ್ ಇತರರು ಇದ್ದರು.

ಯುಡಾ ಅಧ್ಯಕ್ಷರಿಗೆ ನೋಟಿಸ್

ಕಾರ್ಯಕ್ರಮವೊಂದರ ಉದ್ಘಾಟನೆಗೆ ತೆರಳುತ್ತಿದ್ದ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ ಕಾಡ್ಲೂರ್ ಅವರ ಕಾರನ್ನು ಪ್ರಾದೇಶಿಕ ಸಾರಿಗೆ ಇಲಾಖೆ ಧಾರವಾಡದ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಹಾಲಸ್ವಾಮಿ ಕೆ.ಟಿ. ತಪಾಸಣೆ ಮಾಡಿ ನೋಟಿಸ್‌ ನೀಡಿದ ಪ್ರಸಂಗ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಬಳಿ ಗುರುವಾರ ನಡೆಯಿತು. ತಪಾಸಣೆ ಮಾಡಿದಾಗ ವಾಹನದ ನಂಬರ್‌ ಪ್ಲೆಟ್ ಮೇಲೆ ನಾಮಫಲಕ ಹಾಕಿದ್ದು ಸಾರಿಗೆ ನಿಯಮಕ್ಕೆ ವಿರುದ್ಧವಾಗಿದ್ದು ಇದಕ್ಕೆ ನೋಟಿಸ್‌ ನೀಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.