ADVERTISEMENT

ಕೃಷ್ಣಾ ನದಿಗೆ ನೀರು ಬಿಡುವ ಸಾಧ್ಯತೆ

ನದಿ ಪಾತ್ರದ ಗ್ರಾಮಗಳ ಜನ-ಜಾನುವಾರುಗಳ ಸುರಕ್ಷತೆಗೆ ಮುಂಜಾಗೃತೆ ವಹಿಸಲು ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 3:44 IST
Last Updated 24 ಜೂನ್ 2022, 3:44 IST
ನಾರಾಯಣಪುರ ಬಸವಸಾಗರ ಜಲಾಶಯದ ಹಿನ್ನೀರು ಚಿತ್ರ
ನಾರಾಯಣಪುರ ಬಸವಸಾಗರ ಜಲಾಶಯದ ಹಿನ್ನೀರು ಚಿತ್ರ   

ಯಾದಗಿರಿ/ ನಾರಾಯಣಪುರ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆ ಹೆಚ್ಚಾಗಿ ನಾರಾಯಣಪುರ ಜಲಾಶಯಕ್ಕೆ ಒಳಹರಿವು ಬಂದಲ್ಲಿ ಕೃಷ್ಣಾ ನದಿಗೆ ಯಾವುದೇ ಕ್ಷಣದಲ್ಲಿ ನೀರು ಹರಿಬಿಡುವ ಸಾಧ್ಯತೆಯಿದೆ. ನಾರಾಯಣಪುರ ಆಣೆಕಟ್ಟು ಕೆಳಭಾಗದ ಕೃಷ್ಣಾ ನದಿ ಪಾತ್ರದ ಗ್ರಾಮಗಳ ಜನರು-ಜಾನುವಾರುಗಳೊಂದಿಗೆ ಸುರಕ್ಷತೆ ಮತ್ತು ಮುಂಜಾಗೃತೆ ವಹಿಸಲು ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿದ್ದಾರೆ.
ಮಳೆ ಮುನ್ಸೂಚನೆ ಕಾರಣ ಬಸವಸಾಗರ ಜಲಾಶಯಕ್ಕೆ ಒಂದೊಮ್ಮೆ ಒಳಹರಿವು ಹೆಚ್ಚಾಗಿ ಜಲಾಶಯದ ಗರಿಷ್ಠ ಮಟ್ಟಕ್ಕೆ ನೀರು ಬಂದರೆ ಜಲಾಶಯದಿಂದ ಕೃಷ್ಣಾ ನದಿಗೆ ಯಾವುದೇ ಸಂದರ್ಭದಲ್ಲಿ ನೀರು ಹರಿಬಿಡುವ ಸಾಧ್ಯತೆಗಳಿವೆ. ಹೀಗಾಗಿ ನದಿ ತೀರದ ಗ್ರಾಮಗಳ ಜನ ಜಾನುವಾರುಗಳು ನದಿಗೆ ಇಳಿಯದಂತೆ ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದ್ದಾರೆ.

ಹವಾಮಾನ ಇಲಾಖೆಯ ಬೆಂಗಳೂರು ಜೂ.24 ರಿಂದ ಜೂ.26 ರವರೆಗೂ ಕರ್ನಾಟಕದ ಉತ್ತರ ಒಳನಾಡಿನ ಯಾದಗಿರಿ, ವಿಜಯಪುರ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು, ಈಗಾಗಲೇ ಜಲಾಶಯದಲ್ಲಿ 492.25 ಮೀಟರ್ ನೀರಿನ ಮಟ್ಟದಲ್ಲಿ 490.97 ಮೀಟರಿಗೆ ನೀರು ಇದ್ದು 27.72 ಟಿಎಂಸಿ ಇದೆ. ಜಲಾಶಯ ಭರ್ತಿಗೆ 5.59 ಟಿಎಂಸಿ ನೀರಿನ ಅವಶ್ಯಕತೆ ಇದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಆಣೆಕಟ್ಟು ವಿಭಾಗದ ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ.ಪ್ರಕಾಶ ತಿಳಿಸಿದರು.

‘ಪ್ರಜಾವಾಣಿ’ಗೆ ಮಾಹಿತಿ ನೀಡಿರುವ ಅವರು, ಒಂದೊಮ್ಮೆ ಬಸವಸಾಗರ ಜಲಾಶಯಕ್ಕೆ ಒಳಹರಿವು ಆರಂಭವಾದರೆ ಯಾವುದೇ ಸಂದರ್ಭದಲ್ಲಿ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಲಾಗುತ್ತದೆ. ಹೀಗಾಗಿ ಆಣೆಕಟ್ಟು ಕೆಳ ಭಾಗದ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಕೃಷ್ಣಾ ನದಿ ಪಾತ್ರಗಳ ಗ್ರಾಮಗಳ ಜನ, ಜಾನುವಾರುಗಳ ಸುರಕ್ಷತೆಗೆ ಎರಡು ಜಿಲ್ಲಾಡಳಿತಗಳಿಗೆ ಪ್ರವಾಹ ಮುನ್ಸೂಚನೆ ಕುರಿತು ಅಗತ್ಯ ಕ್ರಮ ವಹಿಸುವಂತೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು. ಈ ವೇಳೆ ಎಇ ಬಾಲಸುಬ್ರಹ್ಮಣ್ಯಂ, ವಿಜಯ ಅರಳಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.