ಯಾದಗಿರಿ: ‘ನಮ್ಮ ಕ್ಷೇತ್ರದ ವ್ಯಾಪ್ತಿಯ ಅನೇಕ ಊರುಗಳಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿವೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಜೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಇಲ್ಲಿನ ಜೆಸ್ಕಾಂ ಕಚೇರಿಯಲ್ಲಿ ಯಾದಗಿರಿ ಮತಕ್ಷೇತ್ರಕ್ಕೆ ಸಂಬಂಧಪಟ್ಟ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶುಕ್ರವಾರ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
‘ರೈತರಿಗೆ 7 ತಾಸು ವಿದ್ಯುತ್ ಕಡ್ಡಾಯವಾಗಿ ನೀಡಬೇಕು. ವಿದ್ಯುತ್ ಕಂಬ, ತಂತಿಗಳು ಹಳೆಯದಾದಲ್ಲಿ ಹೊಸದನ್ನು ಅಳವಡಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು. ಟಿಸಿ ಸುಟ್ಟ ಕಡೆ ಕೂಡಲೇ ಅಳವಡಿಸಬೇಕು. ವಡಗೇರಾ ತಾಲ್ಲೂಕು ಜೆಸ್ಕಾಂ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಕಾರಿ, ಸಿಬ್ಬಂದಿ ನೇಮಕ ಮಾಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಶಾಸಕರು ಸೂಚಿಸಿದರು.
ಹೊಸ ತಾಲ್ಲೂಕು ವಡಗೇರಾದಲ್ಲಿ ಉಪವಿಭಾಗ ಕಚೇರಿ ಆರಂಭಿಸುವ ಕುರಿತು ಪ್ರಸ್ತಾವ ಸಲ್ಲಿಸಿ ಅನೇಕ ತಿಂಗಳೇ ಕಳೆದಿವೆ. ಅದು ಕೂಡಲೇ ಕಾರ್ಯಗತವಾಗುವಂತೆಯೇ ಕ್ರಮ ತೆಗೆದುಕೊಳ್ಳಬೇಕು. ಗುರುಸಣಗಿ ಸಮೀಪದ ಗಡ್ಡೆಸೂಗುರು ಮತ್ತು ಅಡಕಬಂಡಲ್ ಗ್ರಾಮಗಳಲ್ಲಿ 110 ಕೆವಿ ಉಪ ಕೇಂದ್ರಗಳ ಕುರಿತಾದ ಪ್ರಸ್ತಾವನೆಯೂ ಬಹಳ ದಿನಗಳಿಂದ ಪೆಂಡಂಗ್ ಇದ್ದು ಅದು ಮಾಡುವಂತೆ ಕೆಪಿಟಿಸಿಎಲ್ ಮತ್ತು ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
ಕೆಇಬಿ ಅಧಿಕಾರಿಗಳು ಯಾಕೆ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವುದಿಲ್ಲ,. ಇರುವ ಸಮಸ್ಯೆಯನ್ನು ಬಿಟ್ಟು ಮಾಡುವ ಕೆಲಸವಾದರೂ ಬೇರೆ ಏನಿದೆ. ನಿಮಗೆ, ಲೈನ್‌ಮ್ಯಾನ್‌ಗಳ ನಿರ್ವಹಣೆ, ಲೋಡ್ ಶೆಡ್ಡಿಂಗ್ ಸೇರಿದಂತೆ ನಗರ ವಿದ್ಯುತ್ ಕಂಬಗಳ, ವೈಯರ್‌ಗಳ ನಿರ್ವಹಣೆ ಮಾಡುವಲ್ಲಿ ಇಲಾಖೆ ದಾರಿತಪ್ಪುತ್ತಿದೆ ಎಂದು ಶಾಸಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ದುರಸ್ತಿ ಮಾಡಿ: ಯಾದಗಿರಿ ನಗರದ ಅಜೀಜ್ ಕಾಲೊನಿಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಹಿಂದುಗಡೆ ರಸ್ತೆ ನಡುವೆ ಇರುವ ವಿದ್ಯುತ್ ಕಂಬ ತೆರವಿಗೆ ವ್ಯಕ್ತಿಯೊಬ್ಬರು ನೀಡಿದ ಮಾಹಿತಿ ಪರಿಶೀಲನೆ ನಡೆಸುವಂತೆ ಜೆಇ ದೇವಪ್ಪ ಅವರಿಗೆ ಶಾಸಕರು ಸೂಚಿಸಿದರು.
ಸಭೆಯಲ್ಲಿ ಎಸ್‌ಇ ಖಂಡಪ್ಪ, ಎಇಇಗಳಾದ ರಾಘವೇಂದ್ರ, ರಾಜೇಶ ಹಿಪ್ಪರಗಿ, ಶಂಕರ ಗುತ್ತಿ, ಸಂಜೀವಕುಮಾರ ಸೇರಿದಂತೆಯೇ ಕೆಪಿಟಿಸಿಎಲ್ ಮತ್ತು ಜೆಸ್ಕಾಂ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಶ್ನೆಗಳ ಸುರಿಮಳೆಗೈದ ಶಾಸಕರು:
ಪ್ರಗತಿ ಹೊಂದದೆ ಇರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ ನೀವು ನಗರಕ್ಕೆ ಹೇಗೆ ಬೆಳಕು ನೀಡುತ್ತೀರಾ ಎಂದು ಶಾಸಕ ತನ್ನೂರು ಪ್ರಶ್ನಿಸಿ ಗರಂ ಆದರು. ಅಧಿಕಾರಿಗಳ ಉತ್ತರಕ್ಕೆ ಸಮಾಧಾನವಾಗದ ಶಾಸಕ ತುನ್ನೂರು ಸ್ವತಃ ತಾವೇ ಕ್ಷೇತ್ರ ಮಾಡಿರುವ ವರದಿಯನ್ನು ಅಧಿಕಾರಿಗಳ ಮುಂದಿಟ್ಟು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆಗಳ ಕುರಿತು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.