ADVERTISEMENT

ಕೆರೆ ತುಂಬಿಸುವ ಯೋಜನೆ: 10 ಹಳ್ಳಿಗಳನ್ನು ಕೈಬಿಟ್ಟ ಸರ್ಕಾರ

ಗುರುಮಠಕಲ್ ಕ್ಷೇತ್ರದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸಾಯಿಬಣ್ಣ ಬೋರಬಂಡಾ ಆರೋಪ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 15:36 IST
Last Updated 19 ಡಿಸೆಂಬರ್ 2018, 15:36 IST
ಸಾಯಿಬಣ್ಣ ಬೋರಬಂಡಾ
ಸಾಯಿಬಣ್ಣ ಬೋರಬಂಡಾ   

ಯಾದಗಿರಿ: ‘ಕೆರೆತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಂಡಿರುವ ಸರ್ಕಾರ ಗುರುಮಠಕಲ್‌ ಮತಕ್ಷೇತ್ರದ 10 ಹಳ್ಳಿಗಳನ್ನು ಕೈಬಿಟ್ಟಿದೆ’ ಎಂದು ಗುರುಮಠಕಲ್ ಕ್ಷೇತ್ರದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸಾಯಿಬಣ್ಣ ಬೋರಬಂಡಾ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟು ₹500 ಕೋಟಿ ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆಯಡಿ ಕಾಮಗಾರಿ ಆರಂಭಿಸಿವೆ. ಆದರೆ, ಜಿಲ್ಲೆಯ 10 ಹಳ್ಳಿಗಳನ್ನು ಕೈಬಿಟ್ಟು, ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ನಾಲ್ಕು ಹಳ್ಳಿಗಳನ್ನು ಈ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇದಕ್ಕೆ ಸಂಸದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ಶರಣಗೌಡ ಪ್ರಕಾಶ ಪಾಟೀಲ ಅವರ ರಾಜಕೀಯ ಕುಯುಕ್ತಿ ಕಾರಣವಾಗಿದೆ’ ಎಂದು ಆರೋಪಿಸಿದರು.

‘ರಾಜಕೀಯ ಭವಿಷ್ಯ ನೀಡಿದ ಮತಕ್ಷೇತ್ರದ ಜನರಿಗೆ ಮಲ್ಲಿಕಾರ್ಜುನ ಖರ್ಗೆ ಅನ್ಯಾಯ ಮಾಡಿದ್ದಾರೆ. ಅವರ ಹೊಟ್ಟೆ ತುಂಬಿಸಿದ ಇಲ್ಲಿನ ರೈತರ ಅನ್ನವನ್ನು ಅವರು ಕಿತ್ತುಕೊಂಡಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಖರ್ಗೆ ರಾಜಕೀಯ ಲಾಭ ಪಡೆಯಲು ಗುರುಮಠಕಲ್‌ ಜನರಿಗೆ ದ್ರೋಹ ಬಗೆದಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಗುರುಮಠಕಲ್ ಭಾಗದ 10 ಗ್ರಾಮಗಳ ರೈತರನ್ನು ಒಗ್ಗೂಡಿಸಿ ಖರ್ಗೆ ನಡೆಸಿರುವ ಕೃತ್ಯದ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು’ ಎಂದು ಸಾಯಿಬಣ್ಣ ಬೋರಬಂಡಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.