ADVERTISEMENT

ಭೋವಿ ಸಮಾಜ ಸಂಘಟನೆಗೆ ಆದ್ಯತೆ: ಗೌತಮ್

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 5:35 IST
Last Updated 10 ಅಕ್ಟೋಬರ್ 2021, 5:35 IST

ರಾಮನಗರ: ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸಿ ಸಾಮಾಜಿಕ ನ್ಯಾಯದ ಮೂಲಕ ಸಮುದಾಯದ ಅಭಿವೃದ್ಧಿಗೆ ಸಹಕರಿಸಲಾಗುವುದು ಎಂದು ಕರ್ನಾಟಕ ಭೋವಿ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಗೌತಮ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಕರ್ನಾಟಕ ಭೋವಿ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಹಾಗೂ ರಾಮನಗರ ಜಿಲ್ಲಾ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಈಗಲೂ ಹಳ್ಳಿಗಳಲ್ಲಿ ಸ್ಮಶಾನ ಭೂಮಿ ಕುರಿತು ವಿವಾದಗಳು ನಡೆಯುತ್ತಲೇ ಇದೆ. ಸ್ವತ್ತಿನ ವಿಷಯಕ್ಕೆ ಸಂಬಂಧಿಸಿದ್ದಂತೆ ಅರ್ಜಿ 53, 50 ಹಾಗೂ 57 ಕುರಿತು ಜನತೆಗೆ ಅರಿವು ಮೂಡಿಸುವುದು, ಅರ್ಜಿ ದಾಖಲಿಸುವಂತೆ ಅರಿವು ಮೂಡಿಸುವ ಕೆಲಸವನ್ನು ಸಂಘಟನೆ ಮಾಡಲಿದೆ ಎಂದರು.

ADVERTISEMENT

ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರದಲ್ಲಿ ಸಮರ್ಥರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗುವುದು ಎಂದರು.

1939ರಲ್ಲಿ ಮೈಸೂರು ಮಹಾರಾಜರು ಸಮುದಾಯಕ್ಕೆ ಭೂಮಿ ನೀಡಿದ್ದರು. ಅಷ್ಟು ಭೂಮಿ ಕಳೆದುಕೊಳ್ಳಲಾಗಿದೆ. ಅದನ್ನು ಮತ್ತೆ ಪಡೆಯುವ ಸಲುವಾಗಿ ಹೋರಾಟ ನಡೆಯುತ್ತದೆ. ಇದೇ ರೀತಿ ಲೋಕಸಭೆ ಸದಸ್ಯರು ಹಾಗೂ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ಅನುದಾನವನ್ನು ಸಮುದಾಯದ ಅಭಿವೃದ್ಧಿಗೆ ಯಾವ ರೀತಿ ಬಳಕೆ ಮಾಡಿಕೊಳ್ಳಬಹುದು ಎಂಬುದಾಗಿ ಚಿಂತಿಸಿ, ಮುಂದಿನ ಹೆಜ್ಜೆ ಇಡಲಾಗುತ್ತದೆ ಎಂದು ಹೇಳಿದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟಪ್ಪ ಮಾತನಾಡಿ, ಮುಂದಿನ ಶನಿವಾರ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ಹೇಳಿದರು.

ಈ ವೇಳೆ ಕೃಷ್ಣ ಶ್ರೀನಿವಾಸಪುರ ಅವರನ್ನು ಸಂಘನೆಯ ರಾಜ್ಯ ಯುವ ಘಟಕದ ಅಧ್ಯಕ್ಷ, ಕೃಷ್ಣ ರಾಮಸಾಗರ ಅವರನ್ನು ಕಾರ್ಯಾಧ್ಯಕ್ಷ ಮತ್ತು ಗಿರಿಯಪ್ಪ ಅವರನ್ನು ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

ಸಂಘಟನೆಯ ಮುಖಂಡರಾದ ಕೃಷ್ಣ, ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.