ಗುರುಮಠಕಲ್: ಆಗಸ್ಟ್ 18ರಂದು ಬೆಂಗಳೂರಿನಲ್ಲಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ‘ಮಾದಿಗರ ಮಹಾ ಧರ್ಮಯುದ್ಧ’ ಹೋರಾಟ ಕೈಗೊಳ್ಳಲಾಗಿದೆ’ ಎಂದು ಮಾದಿಗ ದಂಡೋರಾ(ಎಂಆರ್‌ಪಿಎಸ್) ರಾಜ್ಯ ಘಟಕದ ಅಧ್ಯಕ್ಷ ನರಸಪ್ಪ ಬಿ. ದಂಡೋರಾ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಿ, ಒಂದು ವರ್ಷವಾದರೂ ವಿಳಂಬ ಧೋರಣೆ ಅನುಸರಿಸುತ್ತಿದೆ. ಹೀಗಾಗಿ ಹೋರಾಟ ರೂಪಿಸುತ್ತಿದ್ದೇವೆ’ ಎಂದು ಹೇಳಿದರು.
‘ಕಾನನು ಪದವೀಧರರೂ ಆಗಿರುವ ಮುಖ್ಯಮಂತ್ರಿಯವರು, ಸುಪ್ರೀಂ ತೀರ್ಪನ್ನು ಪಾಲಿಸಬೇಕು. ಈಗಾಗಲೇ ಹರಿಯಾಣ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿ ಆಗಿದೆ. 2009ರಲ್ಲೇ ತಮಿಳುನಾಡು ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮಾಡಲಾಗಿದೆ’ ಎಂದು ಹೇಳಿದರು.
‘ಈಗಾಗಲೇ ಹಲವು ಬಾರಿ ಸಿಎಂ ಅವರನ್ನು ಭೇಟಿಯಾಗಿ ಒಳಒಸಲಾತಿ ಜಾರಿ ಮತ್ತು ಅಲ್ಲಿವೆರೆಗೆ ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡದಂತೆ ಕೋರಿದರೂ ಕಳ್ಳದಾರಿಯಲ್ಲಿ ಹುದ್ಧೆಗಳನ್ನು ಭರ್ತಿಮಾಡುವ ಸಂಚು ನಡೆದಿದೆ’ ಎಂದು ಆರೋಪಿಸಿದರು.
‘ನಾಗಮೋಹನದಾಸ್ ನೇತೃತ್ವದ ಆಯೋಗ ಈಗಾಗಲೇ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಲು ಸಿದ್ಧವಾಗಿದೆ. ಜುಲೈ 31ರಂದು ವರದಿ ನೀಡುವುದಾಗಿ ಹೇಳಲಾಗಿತ್ತು. ಆದರೆ, ಯಾರು ತಡೆದಿದ್ದಾರೆ ಅಥವಾ ಏಕೆ ವರದಿ ನೀಡಲಾಗಲಿಲ್ಲ? ರಾಜ್ಯ ಸರ್ಕಾರ ಆಗಸ್ಟ್ 15ರೊಳಗೆ ಒಳಮೀಸಲಾತಿ ಜಾರಿ ಮಾಡಬೇಕು. ಇಲ್ಲವಾದರೆ ಆಗಸ್ಟ್ 18ರಂದು ಹೋರಾಟ ನಡೆಯಲಿದೆ’ ಎಂದು ಎಚ್ಚರಿಸಿದರು.
2016ರಲ್ಲಿ ಬಸವನ ಬಾಗೇವಾಡಿಯಿಂದ ಹುಬ್ಬಳ್ಳಿ ಸಮಾವೇಶಕ್ಕೆ ಬರುವಾಗ ನಮ್ಮ ಸಮುದಾಯದ 20 ಜನರು ಮೃತಪಟ್ಟಿದ್ದು, ಈವರೆಗೂ ಪರಿಹಾರ ನೀಡಲಿಲ್ಲ. ಅಂದೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರು. ಸಮಾಜದ ಅಭಿವೃದ್ಧಿಗೆಂದು ಸಮಾವೇಶಕ್ಕೆ ಬರುವಾಗ ಮೃತಪಟ್ಟ ನಾಯಕರಿಗೆ ಗೌರವ ನೀಡಬೇಕಿದೆ. ಅವರ ಕುಟುಂಬಕ್ಕೆ ಕೈಹಿಡಯುವ ಕೆಲಸವಾಗಬೇಕು’ ಎಂದು ಹೇಳಿದರು.
ಎಐಬಿಎಸ್‌ಪಿಯ ಕೆ.ಬಿ. ವಾಸು ಹಾಗೂ ಎಂಆರ್‌ಪಿಎಸ್ ತೆಲಂಗಾಣ ರಾಜ್ಯ ಅಧಿಕಾರ ಪ್ರತಿನಿಧಿ ಸತೀಶ ಮಾತನಾಡಿದರು. ಸಂಘಟನೆ ತೆಲಂಗಾಣದ ಯೇಸು ಗಟ್ಟುಮಂಡಲ, ಮುಖಂಡ ಆಶನ್ನ ಬುದ್ಧ, ತಾಲ್ಲೂಕು ಘಟಕದ ಅಧ್ಯಕ್ಷ ರವಿ ಬುರನೋಳ, ಉಪಾಧ್ಯಕ್ಷ ಶರಣು ಅಮ್ಮಪಲ್ಲಿ, ಕಾನೂನು ಸಲಹೆಗಾರ ಕಿಷ್ಟಪ್ಪ ಸೈದಪೋಳ, ಭೀಮು ಗಿರಿಗಿರಿ, ಅನಿಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.