ಸುರಪುರ: ‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರ ವರ್ಗಾವಣೆ ಆದೇಶ ರದ್ದು ಪಡಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಮುಖಂಡರು ಗಾಂಧಿ ವೃತ್ತದಲ್ಲಿ ಸೋಮವಾರ ರಸ್ತೆ ತಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ. ಅವಧಿಗೂ ಮುನ್ನವೇ ಅವರನ್ನು ವರ್ಗಾವಣೆ ಮಾಡುತ್ತಿರುವುದು ಸರಿಯಲ್ಲ’ ಎಂದರು.
ನಿವೃತ್ತ ಉಪನ್ಯಾಸಕ ಮಾನು ಗುರಿಕಾರ ಮಾತನಾಡಿ, ‘ಶಂಕರ್ ಅವರು ಅಧಿಕಾರ ವಹಿಸಿಕೊಂಡಾಗಿನಿಂದ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾರೆ. ಮರಳು ಅಕ್ರಮ ಸಾಗಣೆ, ಇಸ್ಪೀಟ್, ಮಟಕಾ, ಕೋಳಿ ಪಂದ್ಯಾಟ ನಡೆಸುತ್ತಿದ್ದವರಿಗೆ ಸಿಂಹಸ್ವಪ್ನವಾಗಿ ಕಾಡಿದ್ದಾರೆ. ಅವರ ವರ್ಗಾವಣೆಯ ಹಿಂದೆ ರಾಜಕೀಯ ಪಿತೂರಿ ಇದೆ’ ಎಂದು ದೂರಿದರು.
ಮಾನಪ್ಪ ಕಟ್ಟಿಮನಿ, ಚಂದ್ರಶೇಖರ ಜಡಿಮರಳ, ಮೂರ್ತಿ ಬೊಮ್ಮನಳ್ಳಿ ಮಾತನಾಡಿದರು.
‘ಪೃಥ್ವಿಕ್ ಶಂಕರ್ ಅವರ ವರ್ಗಾವಣೆ ಆದೇಶ ಹಿಂಪಡೆಬೇಕು. ಅವಧಿಪೂರ್ಣಗೊಳಿಸುವ ತನಕ ಜಿಲ್ಲೆಯಲ್ಲಿಯೇ ಮುಂದುವರಿಸಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ’ ಎಂದು ಪೊಲೀಸ್ ಇನ್‍ಸ್ಪೆಕ್ಟರ್ ಉಮೇಶ ಅವರಿಗೆ ಸಲ್ಲಿಸಲಾದ ಮನವಿಯಲ್ಲಿ ಎಚ್ಚರಿಸಲಾಗಿದೆ.
ತಾಲ್ಲೂಕು ಸಮಿತಿ ಸಂಚಾಲಕ ಬಸವರಾಜ ದೊಡಮನಿ, ಮುಖಂಡರಾದ ಮಾನಪ್ಪ ಕರಡಕಲ್, ಮಾನಪ್ಪ ಬಿಜಾಸ್ಪೂರ, ವೀರಭದ್ರ ತಳವಾರಗೇರಿ, ಮಲ್ಲಿಕಾರ್ಜುನ ತಳ್ಳಳ್ಳಿ, ಹಣಮಂತ ಕುಂಬಾರಪೇಟ, ಜಟ್ಟೆಪ್ಪ ನಾಗರಾಳ, ದೇವಿಂದ್ರಪ್ಪ ಬಾದ್ಯಾಪುರ, ಮರೆಪ್ಪ ಕಾಂಗ್ರೆಸ್, ಮರಿಲಿಂಗಪ್ಪ ನಾಟೇಕಾರ, ಕಾಳಿಂಗ ಕಲ್ಲದೇವನಳ್ಳಿ, ಮಲ್ಲಪ್ಪ ಬಡಿಗೇರ, ಮಹೇಶ ಸುಂಗಲಕರ್, ಬಸವರಾಜ ಬಡಿಗೇರ, ಹುಲಗಪ್ಪ ಜಾಂಗೀರ, ಮರೆಪ್ಪ ಕೋನ್ಹಾಳ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.