ಯಾದಗಿರಿ: ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ 4 ಸಂಹಿತೆಗಳು ಜಾರಿ ಮಾಡುತ್ತಿರುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ (ಜೆಸಿಟಿಯು) ಸಮಿತಿ ಕರೆಯ ಮೇರೆಗೆ ರಾಷ್ಟ್ರವ್ಯಾಪಿ ಪ್ರತಿಭಟನೆ ಅಂಗವಾಗಿ ನಗರದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಬುಧವಾರ ಪ್ರತಿಭಟನೆ ನಡೆಯಿತು.
ನಗರದ ಹೊಸ ಬಸ್ ನಿಲ್ದಾಣದಿಂದ ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತ, ನೇತಾಜಿ ಸುಭಾಷ್‌ಚಂದ್ರ ಬೋಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಿವಿಧ ಸಂಘಟನೆಗಳು, ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು), ಅಂಗನವಾಡಿ ನೌಕರರ ಸಂಘ ರೈತ ಸಂಘಟನೆಗಳು,ಕೃಷಿಕೂಲಿ ಕಾರ್ಮಿಕರ ಸಂಘಟನೆಗಳು ವಿವಿಧ ಬೇಡಿಕೆಗಳು ಈಡೇರಿಕೆಗೆ ಆಗ್ರಹಿಸಿದರು.
ಅಸಂಘಟಿತ ವಲಯದ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಮತ್ತು ಸ್ಕೀಮ್ ಕಾರ್ಮಿಕರು ಸೇರಿದಂತೆ ಎಲ್ಲಾ ಕಾರ್ಮಿಕರಿಗೆ ರಾಷ್ಟ್ರೀಯ ಕನಿಷ್ಠ ವೇತನ ₹26,000 ಪ್ರತಿ ತಿಂಗಳು ನೀಡಬೇಕು. ವಿವಿಧ ಯೋಜನೆಗಳು ಮತ್ತು ನೆಪಗಳ ಅಡಿಯಲ್ಲಿ ಯಾವುದೇ ರೀತಿಯ ಕೆಲಸವನ್ನು ಹೊರಗುತ್ತಿಗೆ, ಸ್ಥಿರ-ಅವಧಿಯ ಉದ್ಯೋಗ, ಅಪ್ರೆಂಟಿಸ್‌ಗಳು, ತರಬೇತಿದಾರರು ಇತ್ಯಾದಿ ಕ್ಯಾಶುವಲ್ ಮಾಡಬಾರದು. ಗುತ್ತಿಗೆ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ತಕ್ಷಣ ಜಾರಿಗೊಳಿಸಬೇಕು ಇತ್ಯಾದಿ ಬೇಡಿಕೆಗೆ ಸಂಘಟನೆಗಳ ಸದಸ್ಯರು ಒತ್ತಾಯಿಸಿದರು.
ಕೇಂದ್ರ ಸರ್ಕಾರವು ಮೂರನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ ದುಡಿಯುವ ಜನತೆಯ ಮೇಲೆ ಒಂದಾದ ನಂತರ ಮತ್ತೊಂದು ದಾಳಿಯನ್ನು ತೀವ್ರಗೊಳಿಸುತ್ತ, ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುತ್ತಿವೆ. ದುಡಿಮೆಯ ಸಮಯ, ಕನಿಷ್ಠ ವೇತನಗಳು, ಸಾಮಾಜಿಕ ಭದ್ರತೆ ಇತ್ಯಾದಿ ಮತ್ತು ಸಂಘಟಿತರಾಗುವ ಹಕ್ಕು, ಸಾಮೂಹಿಕ ಚೌಕಾಶಿ ಹಕ್ಕುಗಳು, ಆಂದೋಲನಗಳು, ಹೋರಾಟಗಳು ಮತ್ತು ಮುಷ್ಕರದ ಹಕ್ಕು ಸೇರಿದಂತೆ ಪ್ರತಿಭಟನೆಗಳ ಯಾವುದೇ ರೀತಿಯ ಸಾಮೂಹಿಕ ಅಭಿವ್ಯಕ್ತಿಗಳ ಮೇಲೆ ಕಾರ್ಮಿಕರ ಎಲ್ಲಾ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ಬಡತನ, ಹಸಿವು ಅಪೌಷ್ಟಿಕತೆ, ನಿರ್ಗತಿಕತನ, ನಿರುದ್ಯೋಗ ಪ್ರಮಾಣ ಆಕಾಶ ಮುಟ್ಟಿದೆ ಎಂದು ಅಸಮಾಧಾನ ಹೊರಹಾಕಿದರು.
ಅಸಂಘಟಿತ ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಕಾರ್ಮಿಕರಿಗೆ ಕನಿಷ್ಠ ₹9,000 ಪಿಂಚಣಿ ಮತ್ತು ಸಾಮಾಜಿಕ ಭದ್ರತೆ ಖಚಿತಪಡಿಸಿಕೊಳ್ಳಿ. ಮನೆ ಆಧಾರಿತ ಕಾರ್ಮಿಕರು, ವ್ಯಾಪಾರಿಗಳು, ಚಿಂದಿ ಆಯುವವರು, ಗೃಹ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ವಲಸೆ ಕಾರ್ಮಿಕರು, ಸ್ಕೀಮ್ ಕಾರ್ಮಿಕರು, ಕೃಷಿ ಕಾರ್ಮಿಕರು, ಅಂಗಡಿ, ಸ್ಥಾಪನೆಗಳಲ್ಲಿನ ಕಾರ್ಮಿಕರು, ಲೋಡಿಂಗ್, ಅನ್‌ಲೋಡಿಂಗ್ ಕಾರ್ಮಿಕರು, ಗಿಗ್ ಕಾರ್ಮಿಕರು, ಸಾಲ್ಟ್-ಪ್ಯಾನ್ ಕಾರ್ಮಿಕರು, ಬೀಡಿ ಕಾರ್ಮಿಕರು, ರಿಕ್ಷಾ ಎಳೆಯುವವರು, ಆಟೋ, ರಿಕ್ಷಾ,ಟ್ಯಾಕ್ಸಿ ಚಾಲಕರು, ಮಾಜಿ-ದೇಶಪ್ರೇಮಿ ಕಾರ್ಮಿಕರು, ಮೀನುಗಾರಿಕೆ ಸಮುದಾಯ ಇತ್ಯಾದಿ ಕಾರ್ಮಿಕರನ್ನು ನೋಂದಾಯಿಸಬೇಕು ಮತ್ತು ಪಿಂಚಣಿ ಸೇರಿದಂತೆ ಸಮಗ್ರ ಸಾಮಾಜಿಕ ಭದ್ರತೆಯಲ್ಲಿ ಪೋರ್ಟಬಿಲಿಟಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರಧಾನ ಮಂತ್ರಿಗಳಿಗೆ ಬರೆದಿದ್ದ ಮನವಿ ಪತ್ರವನ್ನು ಜಿಲ್ಲಾಡಳಿತದ ಪರವಾಗಿ ಉಪವಿಭಾಗಾಧಿಕಾರಿ, ತಾಲ್ಲೂಕು ಅಧಿಕಾರಿಗಳು ಸ್ವೀಕರಿಸಿದರು.
ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ್, ಎಐಯುಟಿಯುಸಿ ಜಿಲ್ಲಾಧ್ಯಕ್ಷೆ ಡಿ.ಉಮಾದೇವಿ ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಟನೆ ಬೆಂಬಲಿಸಿ ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿದರು. ಈ ಸಂದರ್ಭದಲ್ಲಿ ರಾಮಲಿಂಗಪ್ಪ ಬಿ.ಎನ್, ಶರಣಪ್ಪ ಜಿ ತೆಳಿಗೇರಿಕರ್, ಜಮಾಲ್ ಸಾಬ್, ಭೀಮರೆಡ್ಡಿ, ಸುಭಾಷ್‌ಚಂದ್ರ, ಶಾರದಾದೇವಿ, ಪುಷ್ಪಲತಾ, ರೇಣುಕಾ ಪಾಟೀಲ, ಶೈಲಜಾ, ನಿರ್ಮಲಾ, ರೇಣುಕಾ, ಅಂಜನಾ, ಮಂಜುಳಾ, ದಾನಮ್ಮ, ಅನೀತಾ, ಶರಬಮ್ಮ, ಬೇಬಿ, ಮಲ್ಲಿಕಾರ್ಜುನ ಬಳಿಚಕ್ರ, ಮಲ್ಲಿಕಾರ್ಜುನ ಬಂದಳ್ಳಿ, ಮಹಾದೇವಪ್ಪ ಯಂಪಾಡ, ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಸಾಗರ, ಅಂಗನವಾಡಿ ನೌಕರರ ತಾಲ್ಲೂಕು ಗೌರವ ಅಧ್ಯಕ್ಷ ಚಂದ್ರಕಲಾ, ಮರೆಪ್ಪ ಬಾಡಿಯಾಲ, ಮಂಜುನಾಥ ಚಿನ್ನಾಕಾರ, ಕಮಲಾ, ಸುನಂದಾ ಬಳಿಚಕ್ರ, ಮಲ್ಲಿಕಾರ್ಜುನ ಯರಗೋಳ, ಶರಣಮ್ಮ ಯರಗೋಳ, ಅನಿತಾ ಹಳಿಗೇರಾ, ಖೇಮು ನಾಯಕ, ಶಿವಪ್ಪ ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.