ADVERTISEMENT

ಯಾದಗಿರಿ: 26ರಂದು ದೇವದುರ್ಗ ಕ್ರಾಸ್ ಬಳಿ ಪ್ರತಿಭಟನೆ

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮಲ್ಲಿಕಾರ್ಜುನ ಸತ್ಯಂಪೇಟೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 4:37 IST
Last Updated 18 ನವೆಂಬರ್ 2021, 4:37 IST
ಮಲ್ಲಿಕಾರ್ಜುನ ಸತ್ಯಂಪೇಟೆ
ಮಲ್ಲಿಕಾರ್ಜುನ ಸತ್ಯಂಪೇಟೆ   

ಸುರಪುರ: ‘ರೈತರ ಮೇಲಿನ ನಿರಂತರ ಶೋಷಣೆ ಖಂಡಿಸಿ ನ. 26 ರಂದು ಶಹಾಪುರ ತಾಲ್ಲೂಕಿನ ಹತ್ತಿಗೂಡುರು ಹತ್ತಿರದ ದೇವದುರ್ಗ ಕ್ರಾಸ್‍ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ರೈತ ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಹಿಂಗಾರು ಹಂಗಾಮಿಗೆ ನೀರೊದಗಿಸಲು ನಾರಾಯಣಪುರ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸುವ ಕುರಿತು ಚರ್ಚಿಸಲು ಶೀಘ್ರವೇ ಸಲಹಾ ಸಮಿತಿ ಸಭೆ ಕರೆಯಬೇಕು’ ಎಂದು ಆಗ್ರಹಿಸಿದರು.

‘ಬೆಳೆ ನಾಶ, ನೆರೆ ಹಾವಳಿ ಸಂತ್ರಸ್ತರಿಗೆ ಇದುವರೆಗೂ ನಯಾಪೈಸೆ ಪರಿಹಾರ ದೊರೆತಿಲ್ಲ. ಸರ್ಕಾರದ ಬೊಕ್ಕಸಕ್ಕೆ ಈ ಕುರಿತು ಖರ್ಚು ಹಾಕಿದ ಬಗ್ಗೆ ಮಾಹಿತಿ ಇದೆ. ಸರ್ಕಾರ ರೈತರ ಕುರಿತು ನಿರ್ಲಕ್ಷ್ಯ ಧೋರಣೆ ತಾಳುತ್ತಿರುವುದು ಸಲ್ಲ’ ಎಂದರು.

ADVERTISEMENT

‘ರೈತರು ಭತ್ತ ನಾಟಿ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ನೀರು ಹರಿಸುವ ಕುರಿತು ಸರ್ಕಾರ ಮಾಹಿತಿ ನೀಡದಿರುವುದರಿಂದ ಆತಂಕದಲ್ಲಿದ್ದಾರೆ. ಚುನಾವಣೆ ನೀತಿ ಸಂಹಿತೆ ನೆಪವಾಗಿಟ್ಟು ಸಭೆ ಕರೆಯದಿರುವುದು ಸರಿಯಾದ ಕ್ರಮವಲ್ಲ’ ಎಂದರು

‘ಅಧಿಕೃತ ಮಾಹಿತಿಯಂತೆ ನಾರಾಯಣಪುರ ಜಲಾಶಯದಲ್ಲಿ 68 ಟಿಎಂಸಿ ಮತ್ತು ಆಲಮಟ್ಟಿಯಿಂದ ನಮಗೆ ಬರಬೇಕಾದ 12 ಟಿಎಂಸಿ ಸೇರಿ ಒಟ್ಟು 80 ಟಿಎಂಸಿ ನೀರಿನ ಲಭ್ಯತೆ ಇದೆ. 20 ಟಿಎಂಸಿ ಕುಡಿಯಲು, 20 ಟಿಎಂಸಿ ಡೆಡ್ ಸ್ಟೋರೇಜ್ ಇಟ್ಟುಕೊಂಡರೂ ನೀರು ಸಾಕಾಗುತ್ತದೆ’ ಎಂದು ತಿಳಿಸಿದರು.

‘ವಾರಾಬಂಧಿ ಅನುಸರಿಸಿದಲ್ಲಿ ಉಳಿದ ನೀರನ್ನು ಮಾರ್ಚ್ 15ರ ವರೆಗೆ ಹರಿಸಬಹುದು. 1 ಟಿಎಂಸಿ ನೀರು ಹೆಚ್ಚುವರಿಯಾಗಿ ಬಳಸಿಕೊಂಡಲ್ಲಿ ಮಾರ್ಚ್ 31ರ ವರೆಗೆ ಹರಿಸಲು ಸಾಧ್ಯ. ಇದಕ್ಕೆ ಸರ್ಕಾರದ ಇಚ್ಛಾಶಕ್ತಿ ಬೇಕು’ ಎಂದು ಹೇಳಿದರು.

‘ನಾರಾಯಣಪುರ ಜಲಾಶಯ ಇರುವ ಯಾದಗಿರಿ ಜಿಲ್ಲೆಯಲ್ಲಿ ಒಂದು ಬಾರಿಯೂ ಸಭೆ ನಡೆಸಿಲ್ಲ. ಈ ಬಾರಿ ಭೀಮರಾಯನಗುಡಿಯ ಕೆಬಿಜೆಎನ್‍ಎಲ್ ಮುಖ್ಯ ಕಚೇರಿಯಲ್ಲಿ ಸಭೆ ನಡೆಸಬೇಕು. ಸಭೆಯಲ್ಲಿ ಪಾಲ್ಗೊಳ್ಳಲು ರೈತರಿಗೆ ಅವಕಾಶ ನೀಡಬೇಕು ಎಂದು’ ಒತ್ತಾಯಿಸಿದರು.

‘ಭತ್ತಕ್ಕೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗದೆ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಖರೀದಿ ಕೇಂದ್ರ ಆರಂಭಿಸಬೇಕು. ಹತ್ತಿ ಖರೀದಿಸುವ ವ್ಯಾಪಾರಿಗಳು ಎಲ್ಲೆಂದರಲ್ಲಿ ಇದ್ದಾರೆ. ತೂಕದಲ್ಲಿ ಮೋಸ ಮಾಡುತ್ತಿದ್ದಾರೆ. ವೇಬ್ರಿಜ್ ತೂಕದಲ್ಲಿ ಇದೇ ಪರಿಸ್ಥಿತಿ ಇದೆ. ಸರ್ಕಾರವೇ ವೇಬ್ರಿಜ್ ಆರಂಭಿಸಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಬುಚ್ಚಪ್ಪನಾಯಕ ಗುರಿಕಾರ, ಮುದ್ದಪ್ಪ ಅಮ್ಮಾಪುರ, ತಾಲ್ಲೂಕು ಸಮಿತಿ ಅಧ್ಯಕ್ಷ ಸಿದ್ದಪ್ಪ ಗುಡ್ಡಕಾಯಿ ಕುಂಬಾರಪೇಟ ಹಾಗೂ ಪ್ರಧಾನ ಕಾರ್ಯದರ್ಶಿ ಚನ್ನಪ್ಪ ನರಸಿಂಗಪೇಟ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.