
ಯಾದಗಿರಿ: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಶನಿವಾರದಿಂದ ಆರಂಭವಾಗಿದ್ದು, ಮೊದಲ ದಿನ ಹಾಲ್ ಟಿಕೆಟ್‌ನಲ್ಲಿ ಕಾಲೇಜಿನ ತಪ್ಪು ವಿಳಾಸ ಮುದ್ರಣದಂತಹ ಗೊಂದಲದೊಂದಿಗೆ ನಡೆಯಿತು.
ನಗರದ 7 ಕೇಂದ್ರ ಸೇರಿ ಜಿಲ್ಲೆಯಾದ್ಯಂತ 20 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಕನ್ನಡ ವಿಷಯದ ಪರೀಕ್ಷೆ ಬರೆದರು. ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 8,627 ವಿದ್ಯಾರ್ಥಿಗಳ ಪೈಕಿ 8,076 ವಿದ್ಯಾರ್ಥಿಗಳು ಹಾಜರಾದರು. ಮೊದಲ ದಿನದ ಪರೀಕ್ಷೆಗೆ 551 ವಿದ್ಯಾರ್ಥಿಗಳು ಗೈರಾದರು. ಶೇ 93.61ರಷ್ಟು ವಿದ್ಯಾರ್ಥಿಗಳ ಹಾಜರಾತಿ ಕಂಡುಬಂದಿದ್ದು, ಯಾವುದೇ ನಕಲು ಪ್ರಕರಣ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುರಪುರ ನಗರದಲ್ಲಿನ ಸರ್ಕಾರಿ ಪಿಯು ಬಾಲಕರ ಕಾಲೇಜಿನ ಕೇಂದ್ರದಲ್ಲಿ ಅತ್ಯಧಿಕ 66 ವಿದ್ಯಾರ್ಥಿಗಳು ಗೈರಾಗಿದ್ದರು. ಶಹಾಪುರದ ಸಿಬಿ ಪಿಯು ಕಾಲೇಜಿನಲ್ಲಿ 50, ಭೀಮರಾಯನಗುಡಿ ಸರ್ಕಾರಿ ಪಿಯು ಕಾಲೇಜಿನಲ್ಲಿ 47 ವಿದ್ಯಾರ್ಥಿಗಳು ಪರೀಕ್ಷೆಯಿಂದ ಹೊರಗೆ ಉಳಿದಿದ್ದರು.
ಮೊದಲ ದಿನವಾದ್ದರಿಂದ ಬೆಳಿಗ್ಗೆ 8 ಗಂಟೆಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳ ಕಡೆಗೆ ಹೆಜ್ಜೆ ಹಾಕಿದರು. ಮಕ್ಕಳು ಪರೀಕ್ಷೆ ಬರೆಯುತ್ತಿದ್ದರೆ ಅವರ ಪೋಷಕರು ಕೇಂದ್ರದ ಹೊರಗಡೆ ಕಾಯುತ್ತಾ ಕುಳಿತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡುಬಂತು. ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟೆಚ್ಚರವಹಿಸಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಮೇಲ್ವಿಚಾರಕರು, ಸಹಾಯಕರು, ಸ್ಥಿರ ಜಾಗೃತ ದಳ, ವೀಕ್ಷಕರು ಕರ್ತವ್ಯ ನಿರ್ವಹಿಸಿದರು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಜಾಗೃತದಳದವರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಸಿಸಿಟಿವಿ ಕ್ಯಾಮೆರಾ ಹಾಗೂ ವೆಬ್ ಕಾಸ್ಟಿಂಗ್ ಕಣ್ಗಾವಲಿನಲ್ಲಿ ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಪರೀಕ್ಷೆ ಬರೆದರು. ಈ ಹಿಂದೆ ಪರೀಕ್ಷಾ ಕೇಂದ್ರಗಳ ಸುತ್ತ ಕಂಡುಬರುತ್ತಿದ್ದ ಪೋಷಕರು, ಸಾರ್ವಜನಿಕರು ದಂಡು ಈಗ ಇರಲಿಲ್ಲ. ಪಾರದರ್ಶಕ ಪರೀಕ್ಷೆಗಾಗಿ ಪರಿವೀಕ್ಷಕ ತಂಡಗಳು (ಸ್ಕ್ವಾಡ್) ಹಾಗೂ ವಿಶೇಷ ಜಾಗೃತದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು’ ಎಂದು ಡಿಡಿಪಿಯು ಪಂಡಿತರಾವ್ ಪವಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಹಾಲ್ ಟಿಕೆಟ್‌ನಲ್ಲಿ ತಪ್ಪು ವಿಳಾಸ: ಪರದಾಡಿದ ವಿದ್ಯಾರ್ಥಿ ಯಾದಗಿರಿ: ಸಬಾ ಪಿಯು ಕಾಲೇಜು ಕೇಂದ್ರದ ವಿದ್ಯಾರ್ಥಿಗಳ ಪ್ರವೇಶ ಪತ್ರದಲ್ಲಿ (ಹಾಲ್ ಟಿಕೆಟ್) ಕಾಲೇಜಿನ ಹಳೆಯ ತಪ್ಪು ವಿಳಾಸ ಮುದ್ರಣ ಆಗಿದ್ದರಿಂದ ವಿದ್ಯಾರ್ಥಿಯೊಬ್ಬ ಪರಿತಪಿಸಿದ. ನಗರದ ಲುಂಬಿನಿ ಉದ್ಯಾನ ಸಮೀಪದಲ್ಲಿನ ಸಬಾ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದ ವಿಳಾಸವನ್ನು ಗಂಜ್ ಪ್ರದೇಶ ಎಂದು ಹಾಲ್ ಟಿಕೆಟ್‌ನಲ್ಲಿ ಮುದ್ರಿತ ಆಗಿತ್ತು. ಮಲ್ಲಿಕಾ ಕಾಲೇಜಿನ ವಿದ್ಯಾರ್ಥಿ ಮಶೇಪ್ಪ ಗಂಜ್ ಪ್ರದೇಶದತ್ತ ತೆರಳಿದ್ದ. ಕಾಲೇಜು ಕಾಣದೆ ಇದ್ದಾಗ ಆತಂಕಗೊಂಡನು. ಸ್ಥಳೀಯರನ್ನು ವಿಚಾರಿಸಿ ಬದಲಾದ ಲುಂಬಿನಿ ಉದ್ಯಾನ ಸಮೀಪದ ಕಾಲೇಜಿಗೆ ಬಂದು ಪರೀಕ್ಷೆಗೆ ಹಾಜರಾ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಡಿಪಿಯು ಪಂಡಿತರಾವ್ ಪವಾರ್ ‘ವಿದ್ಯಾರ್ಥಿ 30 ನಿಮಿಷ ಮುಂಚಿತವಾಗಿ ಕೇಂದ್ರಕ್ಕೆ ತೆರಳಿದ್ದ. ತಪ್ಪು ವಿಳಾಸ ಗಮನಕ್ಕೆ ಬಂದ ತಕ್ಷಣವೇ ಈಗಿರುವ ವಿಳಾಸದತ್ತ ಬಂದು ಪರೀಕ್ಷೆಗೆ ಕುಳಿತ’ ಎಂದರು.
‘ಕಾಲೇಜು ಸ್ಥಳಾಂತರ ಆಗಿದ್ದರೂ ಆಡಳಿತ ಮಂಡಳಿ ಹಳೇ ವಿಳಾಸವನ್ನೇ ನಮೂದು ಮಾಡಿದ್ದರಿಂದ ತಪ್ಪು ವಿಳಾಸ ಮುದ್ರಣವಾಗಿದೆ. ಮಶೇಪ್ಪ ಮಾತ್ರವಲ್ಲ ಆ ಕೇಂದ್ರದಲ್ಲಿನ ಎಲ್ಲ ವಿದ್ಯಾರ್ಥಿಗಳ ಹಾಲ್ ಟಿಕೆಟ್‌ಗಳಲ್ಲಿ ತಪ್ಪು ವಿಳಾಸವಿದೆ. ಕಾಲೇಜಿಗೆ ಎಚ್ಚರಿಕೆ ಕೊಟ್ಟು ವಿಳಾಸವನ್ನು ಬದಲಾವಣೆ ಮಾಡುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.