ADVERTISEMENT

ಹಿಂಗಾರು: ಭತ್ತ ನಾಟಿಗೆ ಅಣಿಯಾದ ರೈತರು

ಐಸಿಸಿ ಸಭೆಯ ನಿರ್ಣಯದಂತೆ ನ.25ರಂದು ಕಾಲುವೆಗೆ ನೀರು

ಭೀಮಶೇನರಾವ ಕುಲಕರ್ಣಿ
Published 16 ಡಿಸೆಂಬರ್ 2025, 7:11 IST
Last Updated 16 ಡಿಸೆಂಬರ್ 2025, 7:11 IST
ಹಿಂಗಾರು ಹಂಗಾಮಿನ ಭತ್ತ ನಾಟಿಗಾಗಿ ಹುಣಸಗಿ ಪಟ್ಟಣದ ಹೊರವಲಯದಲ್ಲಿ ಸಸಿ ಹಾಕಿರುವದು
ಹಿಂಗಾರು ಹಂಗಾಮಿನ ಭತ್ತ ನಾಟಿಗಾಗಿ ಹುಣಸಗಿ ಪಟ್ಟಣದ ಹೊರವಲಯದಲ್ಲಿ ಸಸಿ ಹಾಕಿರುವದು   

ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ನೀರು ಹರಿಸುತ್ತಿದ್ದರಿಂದಾಗಿ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನ ಭತ್ತ ನಾಟಿ ಕಾರ್ಯ ಕಳೆದ ನಾಲ್ಕೈದು ದಿನಗಳಿಂದ ಆರಂಭವಾಗಿದೆ.

ಐಸಿಸಿ ಸಭೆಯ ನಿರ್ಣಯದಂತೆ 14 ದಿನ ಕಾಲುವೆಗೆ ನೀರು ಪೂರೈಕೆ, 10 ದಿನ ನೀರು ಸ್ಥಗಿತವಾಗಲಿದೆ. ಈ ಪ್ರಕಾರವಾಗಿ ನ.25ರಂದು ನೀರು ಪೂರೈಕೆ ಪ್ರಾರಂಭವಾಗಲಿದೆ. ಹೀಗಾಗಿ ರೈತರು ನವೆಂಬರ್‌ ಎರಡನೇ ವಾರದಲ್ಲಿಯೇ ಸಸಿಗಾಗಿ ಬೀಜ ಹಾಕಿದ್ದರು. ನೀರು ಪೂರೈಕೆ ಪ್ರಾರಂಭ ನಂತರ ಭತ್ತ ನಾಟಿ ಕಾರ್ಯ ವೇಗ ಪಡೆಯಲಿದೆ. 

ಈ ಬಾರಿ ಮುಂಗಾರು ಹಂಗಾಮಿನಲ್ಲಿ ಬೆಳೆಯಲಾಗಿರುವ ಭತ್ತದ ಧಾರಣೆ ಆರಂಭದ ದಿನದಲ್ಲಿ ಏರಿಕೆ ಇತ್ತು. ಆದರೆ ಆ ಬಳಿಕ ಮೋಡಕವಿದ ವಾತಾವರಣದಿಂದಾಗಿ ಖರೀದಿದಾರರಿಲ್ಲದೇ ಕಡಿಮೆ ಧಾರಣಿಯಲ್ಲಿಯೇ ಮಾರಾಟ ಮಾಡಲಾಗಿದ್ದು, ಸದ್ಯ ಮತ್ತೆ ಧಾರಣೆಯಲ್ಲಿ ಚೇತರಿಕೆ ಕಂಡು ಬಂದಿದೆ.

ADVERTISEMENT

‘ಶೇ 80 ರಷ್ಟು ಭತ್ತ ಮಾರಾಟ ಮಾಡಲಾಗಿದೆ. ನಾವು ಕಷ್ಟಪ್ಪಟು ಭತ್ತ ಬೆಳೆದರೂ ಕೂಡಾ ನಮಗೆ ಹೇಳಿಕೊಳ್ಳುವಷ್ಟು ಉತ್ತಮ ಧಾರಣೆ ಸಿಗುತ್ತಿಲ್ಲ’ ಎಂದು ರೈತರಾದ ಮಲ್ಲಿಕಾರ್ಜುನ ಚಾಂದಕವಟೆ, ಸಿದ್ದಣ್ಣ ಮೇಟಿ ಹಾಗೂ ಬೀರಪ್ಪ ಮೇಟಿ ಅಸಮಾಧಾನ ವ್ಯಕ್ತಪಡಿಸಿದರು.

‘ಕಳೆದ 15 ದಿನದಿಂದಲೂ ಬಿಸಿಲಿನ ವಾತಾವರಣ ಇಲ್ಲ. ಹೀಗಾಗಿ ಸಸಿ ಇನ್ನೂ ಚೆನ್ನಾಗಿ ಬೆಳೆದಿಲ್ಲ. ನಾಟಿ ಕಾರ್ಯ ಇನ್ನೂ ಎರಡು ವಾರ ನಡೆಯುವ ಸಾಧ್ಯತೆ ಇದೆ’ ಎಂದು ರೈತರು ಮಾಹಿತಿ ನೀಡಿದರು.

‘ಈಗಾಗಲೇ ಬಹುತೇಕ ಹೊಲಗಳಿಗೆ ನೀರು ಹಾಯಿಸಿದ್ದು, ಪಟ್ಲರ್ ಹೊಡೆಯುವ ಹಂತದಲ್ಲಿದ್ದರೇ ಇನ್ನೂ ಕೆಲವು ರೈತರು ಮೊದಲ ಅವಧಿಯ ನೀರಿನಲ್ಲಿಯೇ ನಾಟಿ ಕಾರ್ಯ ಮುಗಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಆರ್‌ಎನ್‌ಆರ್‌ ಭತ್ತ ನಾಟಿ ಮಾಡಲಾಗಿದೆ’ ಎಂದು ದ್ಯಾಮನಹಾಳ ಗ್ರಾಮದ ಲಕ್ಷ್ಮೀಕಾಂತ ಕುಲಕರ್ಣಿ ಹಾಗೂ ಗುಳಬಾಳ ಗ್ರಾಮದ ಸೋಮಣ್ಣ ಮೇಟಿ ಹೇಳಿದರು.

‘ಕಾಲುವೆಗೆ ನೀರು ಹರಿಸುವ ಕುರಿತಂತೆ ದಿನಾಂಕ ಪ್ರಕಟಿಸಲು ಐಸಿಸಿ ಸಭೆ ತಡವಾಗಿ ನಡೆಸಿದ್ದರಿಂದಾಗಿ ನಾವು ಸಸಿ ತಡವಾಗಿ ಹಾಕಿಕೊಂಡಿದ್ದೇವು. ಡಿಸೆಂಬರ್‌ ಕೊನೆ ವಾರದಲ್ಲಿ ಭತ್ತ ನಾಟಿ ಮಾಡುವುತ್ತೇವೆ’ ಎಂದು ಮುದನೂರು ಗ್ರಾಮದ ಕೃಷ್ಣಾರಡ್ಡಿ ಹಾಗೂ ವಜ್ಜಲ ಗ್ರಾಮದ ಪರಮೇಶ ಗಿಂಡಿ, ಬಸವರಾಜ ಮೇಟಿ, ಶ್ರೀಶೈಲ ದೇವತಕಲ್ಲ ತಿಳಿಸಿದರು.

ಬಂಗಾಲಿ ಕಾರ್ಮಿಕರ ಆಗಮನ: ತಾಲ್ಲೂಕಿನ ಕಾಮನಟಗಿ, ದ್ಯಾಮನಹಾಳ, ಕುಪ್ಪಿ, ಗುಳಬಾಳ, ಮಾಳನೂರು, ಬಲಶೆಟ್ಟಿಹಾಳ ಸೇರಿದಂತೆ ಇತರ ಗ್ರಾಮಗಳಲ್ಲಿ ಬಂಗಾಳಿ ಹಾಗೂ ಮಹಾರಾಷ್ಟ್ರದಿಂದ ಭತ್ತ ನಾಟಿ ಕಾರ್ಮಿಕರು ಆಗಮಿಸಿದ್ದಾರೆ. ಕಾಲುವೆಗೆ ನೀರು ಹರಿಸುತ್ತಿದ್ದಂತೆ ಭತ್ತ ನಾಟಿಗಾಗಿ ಕಾರ್ಮಿಕರ ಸಿದ್ಧತೆಯಲ್ಲಿದ್ದೇವೆ ಎಂದು ಕಾಮನಟಗಿ ಗ್ರಾಮದ ನರಸಿಂಹರಾವ್ ಜಹಗಿರದಾರ, ಹಾಗೂ ರವಿ ಕುಲಕರ್ಣಿ ತಿಳಿಸಿದರು.

ಇಂದಿನಿಂದ ನೀರು ಸ್ಥಗಿತ ಕೃಷ್ಣಾ ಆಚ್ಚುಕುಟ್ಟು ಪ್ರದೇಶದ ಕಾಲುವೆಗಳಿಗೆ ಇಂದಿನಿಂದ (ಮಂಗಳವಾರದಿಂದ) ನೀರು ಹರಿಸುವದನ್ನು ನಿಲ್ಲಿಸಲಾಗುತ್ತಿದೆ. ಈ ಹಿಂದೆ ಕೈಗೊಳ್ಳಲಾಗಿರುವ ಐಸಿಸಿ ಸಭೆಯ ನಿರ್ಧಾರದಂತೆ 10 ದಿನಗಳ ಕಾಲ ನೀರನ್ನು ಸ್ಥಗಿತಗೊಳಿಸಿ ಮತ್ತೆ ಡಿಸೆಂಬರ್‌ 25 ರಿಂದ ಕಾಲುವೆಗೆ ನೀರು ಹರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 'ಕಳೆದ ವರ್ಷಕ್ಕೆ ಹೋಲಿಸಿದರೇ ಈ ವರ್ಷ ಹಿಂಗಾರು ಹಂಗಾಮಿನ ನಾಟಿ ಕಾರ್ಯ ಎರಡು ವಾರ ಬೇಗನೆ ಆರಂಭವಾಗಿದ್ದು ಹುಣಸಗಿ ಹೋಬಳಿ ವ್ಯಾಪ್ತಿಯಲ್ಲಿ 19 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ನಾಟಿ ಮಾಡುವ ನೀರಿಕ್ಷೆ ಇದೆ.’ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಿದ್ಧಾರ್ಥ ಪಾಟೀಲ ತಿಳಿಸಿದರು. ‘ಕಳೆದ ವರ್ಷ ಅಂದಾಜು 3 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ನಾಟಿ ಮಾಡಿರಲಿಲ್ಲ ಎಂದು ಮಾಹಿತಿ ನೀಡಿದರು. ಕೊಡೇಕಲ್ಲ ವಲಯದಲ್ಲಿ ಅಂದಾಜು 7 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿ ಮಾಡುವ ನಿರಿಕ್ಷೆ ಇದೆ’ ಎಂದು ಕೃಷಿ ಅಧಿಕಾರಿ ದೀಪಾ ದೊರೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.