ADVERTISEMENT

ಅಂತರ ಕಾಲೇಜುಗಳ ಯುವಜನೋತ್ಸವ: ರಾಯಚೂರು ಕೃಷಿ ಮಹಾವಿದ್ಯಾಲಯ ಚಾಂಪಿಯನ್‌

ರಾಯಚೂರು ಕೃಷಿ ತಾಂತ್ರಿಕ ಮಹಾವಿದ್ಯಾಲಯ ರನ್ನರ್ಸ್ ಅಪ್‌

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 6:18 IST
Last Updated 29 ಡಿಸೆಂಬರ್ 2025, 6:18 IST
ಕಲಬುರಗಿಯ ಕೃಷಿ ಮಹಾವಿದ್ಯಾಲಯದಲ್ಲಿ ಭಾನುವಾರ ಮುಕ್ತಾಯಗೊಂಡ ಅಂತರ ಕಾಲೇಜುಗಳ 16ನೇ ಯುವಜನೋತ್ಸವದ ‘ಕಲಾ ಸಂಗಮ’ದಲ್ಲಿ ರಾಯಚೂರು ಕೃಷಿ ಮಹಾವಿದ್ಯಾಲಯವು ‘ಸಮಗ್ರ ಚಾಂಪಿಯನ್‌’ ಆಗಿ ಹೊರಹೊಮ್ಮಿತು
–ಪ್ರಜಾವಾಣಿ ಚಿತ್ರ
ಕಲಬುರಗಿಯ ಕೃಷಿ ಮಹಾವಿದ್ಯಾಲಯದಲ್ಲಿ ಭಾನುವಾರ ಮುಕ್ತಾಯಗೊಂಡ ಅಂತರ ಕಾಲೇಜುಗಳ 16ನೇ ಯುವಜನೋತ್ಸವದ ‘ಕಲಾ ಸಂಗಮ’ದಲ್ಲಿ ರಾಯಚೂರು ಕೃಷಿ ಮಹಾವಿದ್ಯಾಲಯವು ‘ಸಮಗ್ರ ಚಾಂಪಿಯನ್‌’ ಆಗಿ ಹೊರಹೊಮ್ಮಿತು –ಪ್ರಜಾವಾಣಿ ಚಿತ್ರ   

ಕಲಬುರಗಿ: ರಂಗಭೂಮಿ, ಸಾಹಿತ್ಯ, ಲಲಿತ ಕಲೆ ವಿಭಾಗದ ಸ್ಪರ್ಧೆಯಲ್ಲಿ ನೈಪುಣ್ಯತೆ ಮೆರೆದ ರಾಯಚೂರು ಕೃಷಿ ಮಹಾವಿದ್ಯಾಲಯವು, ಭಾನುವಾರ ಇಲ್ಲಿನ ಕೃಷಿ ಮಹಾವಿದ್ಯಾಲಯದಲ್ಲಿ ಮುಕ್ತಾಯಗೊಂಡ ಅಂತರ ಕಾಲೇಜುಗಳ 16ನೇ ಯುವಜನೋತ್ಸವ ‘ಕಲಾ ಸಂಗಮ’ದಲ್ಲಿ ‘ಚಾಂಪಿಯನ್‌’ ಆಗಿ ಹೊರಹೊಮ್ಮಿತು.

ಸಂಗೀತ ಹಾಗೂ ಜಾನಪದ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ ರಾಯಚೂರು ಕೃಷಿ ತಾಂತ್ರಿಕ ಮಹಾವಿದ್ಯಾಲಯವು ರನ್ನರ್ಸ್‌ ಅಪ್‌ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ‘ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಕೃಷಿ ವಿಶ್ವವಿದ್ಯಾಲಯಗಳ ಪಾತ್ರ ಮಹತ್ವದ್ದಾಗಿದೆ. ಪರಿಸರ ಹಾಗೂ ಪರಿಸರ ವ್ಯವಸ್ಥೆಗೆ ಹಾನಿಯಾಗದಂತೆ ಕೃಷಿ ಸವಾಲುಗಳನ್ನು ಮೆಟ್ಟಿ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಬೇಕಿದೆ’ ಎಂದು ಹೇಳಿದರು.

ADVERTISEMENT

‘1947ರ ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ಆಹಾರದ ಕೊರತೆ ಎದುರಾಗಿ, ಹಸಿವಿನಿಂದಲೇ ಸಾವಿರಾರು ಜನರು ಜೀವ ತ್ಯಜಿಸಿದರು. ಆಹಾರಕ್ಕಾಗಿ ಅಮೆರಿಕದಂತಹ ದೇಶಗಳನ್ನು ಅವಲಂಬಿಸಬೇಕಾಯಿತು. ಬೇರೆ ದೇಶಗಳಿಂದ ಗೋಧಿ, ಜೋಳ, ಹಾಲಿನ ಪುಡಿಯನ್ನು ತರಿಸಿಕೊಂಡು ಜನರ ಹಸಿವನ್ನು ನೀಗಿಸಲಾಯಿತು. ಹೀಗಾಗಿ ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಗೆ ಆದ್ಯತೆ ನೀಡಲಾಯಿತು’ ಎಂದು ಹೇಳಿದರು.

‘ಕೃಷಿ ವಿಜ್ಞಾನಿ ಎಂ.ಎಸ್‌.ಸ್ವಾಮಿನಾಥನ್‌ ಅವರ ಹಸಿರು ಕ್ರಾಂತಿಯಿಂದಾಗಿ, ನಾವು ಅಕ್ಕಿ, ಗೋಧಿ, ಮೆಕ್ಕೆಜೋಳ ಸೇರಿದಂತೆ ಹಲವು ಧಾನ್ಯಗಳನ್ನು ರಫ್ತು ಮಾಡುತ್ತಿದ್ದೇವೆ. ಆದರೂ ಎಣ್ಣೆಕಾಳು ಹಾಗೂ ಸಿರಿಧಾನ್ಯಗಳನ್ನು ಬೆಳೆಯುವಲ್ಲಿ ಹಿಂದೆ ಉಳಿದಿದ್ದು, ಪ್ರಗತಿ ಸಾಧಿಸಬೇಕಿದೆ’ ಎಂದು ಹೇಳಿದರು.

‘ಕೃಷಿಯಲ್ಲಿ ಯಥೇಚ್ಛವಾಗಿ ರಾಸಾಯನಿಕ ಗೊಬ್ಬರ ಬಳಸುತ್ತಿದ್ದೇವೆ. ಮಣ್ಣಿನ ಫಲವತ್ತತೆ ಹೆಚ್ಚಿಸುವ ‘ಎರೆಹುಳು’ ಹಾಗೂ ಮಳೆ ಮುನ್ಸೂಚನೆ ನೀಡುವ ಕಪ್ಪೆಗಳೂ ಇಲ್ಲದಂತಾಗಿವೆ. ಇದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದೆ. ರಾಸಾಯನಿಕ ಗೊಬ್ಬರ ಬಳಕೆಯನ್ನು ಕಡಿಮೆ ಮಾಡಬೇಕಿದೆ’ ಎಂದು ಹೇಳಿದರು.

‘ಇಸ್ರೇಲ್‌ನಂತಹ ದೇಶಗಳು ಅಧುನಿಕ ತಂತ್ರಜ್ಞಾನ ಬಳಸಿಕೊಂಡು ಅತ್ಯಂತ ಕಡಿಮೆ ನೀರಿನಲ್ಲಿಯೇ ಹೆಚ್ಚು ಬೆಳೆಯನ್ನು ಬೆಳೆಯುತ್ತಿವೆ. ನಮ್ಮಲ್ಲಿಯೂ ಕಡಿಮೆ ಭೂಮಿ ಹಾಗೂ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಯಲು ಇರುವಂತಹ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಈ ಭಾಗದಲ್ಲಿ ಹೆಚ್ಚಾಗಿ ತೊಗರಿ ಬೆಳೆಯುತ್ತಾರೆ. ಆದರೆ ನೀರಿಲ್ಲ ಎಂಬ ಕಾರಣಕ್ಕೆ ಬೇಸಿಗೆಯಲ್ಲಿ ಬೆಳೆ ಇರುವುದಿಲ್ಲ. ಇಳುವರಿ ಹಾಗೂ ಬಳಕೆಯ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ’ ಎಂದು ಹೇಳಿದರು.

ಕೃಷಿ ವಿವಿ ರಾಯಚೂರು ವ್ಯವಸ್ಥಾಪನ ಮಂಡಳಿ ಸದಸ್ಯರಾದ ಮಲ್ಲಿಕಾರ್ಜುನ ಡಿ. ಹಾಗೂ ತಿಮ್ಮಣ್ಣ ಸೋಮಪ್ಪ ಚಾವಡಿ ಮಾತನಾಡಿದರು. ರಾಯಚೂರು ಕೃಷಿ ವಿಜ್ಞಾನಗಳ ವಿ.ವಿ ಕುಲಪತಿ ಪ್ರೊ.ಎಂ.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿಗಳು, ತಮ್ಮ ಮೂರು ದಿನಗಳ ಕಲಾಸಂಗದ ಅನುಭವವನ್ನು ಹಂಚಿಕೊಂಡರು. ಕೃಷಿ ಮಹಾವಿದ್ಯಾಲಯದ ಡೀನ್‌ ಹಾಗೂ ಮುಖ್ಯಸ್ಥ ಶಿವಶರಣಪ್ಪ ಬಿ. ಗೌಡಪ್ಪ ವರದಿ ವಾಚನ ಮಾಡಿದರು.

ರಾಯಚೂರು ಕೃಷಿ ವಿ.ವಿಯ ವಿವಿಧ ವಿಭಾಗಗಳ ಡೀನ್‌ಗಳಾದ ಯು.ಸತೀಶಕುಮಾರ, ನಾರಾಯಣರಾವ ಕೆ., ರಾಯಚೂರು ಕೃಷಿ (ತಾಂತ್ರಿಕ) ವಿವಿ ಡೀನ್‌ ಎಂ.ಎಸ್‌.ಅಯ್ಯನಗೌಡರ, ಶಿಕ್ಷಣ ನಿರ್ದೇಶಕ ಗುರುರಾಜ ಸುಂಕದ, ಎ.ಅಮರೇಗೌಡ, ಸ್ನಾತಕೋತ್ತರ ಡೀನ್‌ ಎ.ಜಿ.ಶ್ರೀನಿವಾಸ, ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಡೀನ್‌ ಶ್ಯಾಮರಾವ ಜಹಾಗೀರದಾರ, ಗಂಗಾವತಿ ಕೃಷಿ ಮಹಾವಿದ್ಯಾಲಯದ ವಿಶೇಷಾಧಿಕಾರಿ ಎಸ್‌.ಟಿ.ಯೆಂಜೀರಪ್ಪ, ಜಿ.ರವಿಶಂಕರ, ವಿವಿಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿವಿಧ ಕೃಷಿ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದರು.

ನನ್‌ ಹೆಣಾ ಎತ್ತವ್ರದಿರೇನ್‌..

ಅತಿಥಿಗಳ ಭಾಷಣ ಕೇಳಿ ಸುಸ್ತಾಗಿದ್ದ ವಿದ್ಯಾರ್ಥಿಗಳು ಮುಂಚೆಯೇ ಚಪ್ಪಾಳೆ ತಟ್ಟಿ ಭಾಷಣ ಮುಗಿಸುವಂತೆ ಕೋರಿದ್ದರು. ಬಳಿಕ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಹರಸೂರ ಅವರಿಗೆ ಅವಕಾಶ ಸಿಗುತ್ತಿದ್ದಂತೆಯೇ ವಿದ್ಯಾರ್ಥಿಗಳು ಶಿಳ್ಳೆ ಹಲಗೆ ಬಾರಿಸಿಯೇ ಸ್ವಾಗತಿಸಿದರು. ಹಲಿಗೆ ಬಾರಿಸುವುದನ್ನು ಕೇಳಿಸಿಕೊಂಡ ಡಿಗ್ಗಿ ಅವರು ‘ಹಲಗಿ ಯಾಕ್‌ ಹೊಡಿಯಾಕ್‌ ಹತ್ತೀರಿ ಬಿಡ್ರೋಪಾ..ನನ್ನ ಹೆಣಾಗಿಣಾ ಎತ್ತಾವ್ರದಿರೇನ್‌..’ ಎನ್ನುತ್ತಲೇ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು. ಹೀಗೆ ಮತ್ತಷ್ಟು ನಗೆ ಚಟಾಕೆಗಳನ್ನು ಹಾರಿಸುತ್ತಲೇ ಪ್ರೇಕ್ಷಕರಲ್ಲಿ ನಗುವಿನ ಹೊನಲು ಹರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.